ಯಡ್ರಾಮಿ; ಉತ್ತಮ ಶಿಕ್ಷಣ ಇದ್ದಾಗಲೇ ತಾಲೂಕಿನ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಭಿವೃದ್ಧಿ ವಿಷಯದಲ್ಲಿ ತಾಲೂಕಿನ ಎಲ್ಲ ಜನತೆಯನ್ನು ಸಮನಾಗಿ ಕಾಣಬೇಕಾಗುತ್ತದೆ ಎಂದು ಕರ್ನಾಟಕ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ಡಾ|ಅಜಯಸಿಂಗ್ ಹೇಳಿದರು.
ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ಮೌಲಾನಾ ಆಜಾದ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಇಂತಹ ಶಾಲೆಗಳ ನಿರ್ಮಾಣಕ್ಕಾಗಿ 58ಕೋಟಿ ರೂ. ಅಗತ್ಯವಿದೆ. ಅದರಲ್ಲೂ ಜೇವರ್ಗಿಗೆ 75ಲಕ್ಷ ರೂ. ಅನುದಾನ ಬೇಕಾಗುತ್ತದೆ. ಯಡ್ರಾಮಿಯಲ್ಲಿ ಮೌಲಾನಾ ಆಜಾದ್ ಶಾಲೆಯ ಕಟ್ಟಡ ಅಂದಾಜು 52ಲಕ್ಷ ರೂ. ವೆಚ್ಚದಲ್ಲಿ ಶುರುವಾಗಲಿದೆ. ಕಟ್ಟಡ ಗುಣಮಟ್ಟದ್ದಾಗಿರಬೇಕು. ಬರುವ ಫೆಬ್ರುವರಿ ತಿಂಗಳ ಒಳಗಾಗಿ ಕಟ್ಟಡ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂಪಟೇಲ ಇಜೇರಿ, ಮುಖಂಡರಾದ ಚಂದ್ರಶೇಖರ ಪುರಾಣಿಕ, ಇಬ್ರಾಹೀಂ ಪಟೇಲ ಉಸ್ತಾದ, ಮಲ್ಹಾರಾವ್ ಕುಲಕರ್ಣಿ, ಶಂಭು ಸಾಹು ತಾಳಿಕೋಟಿ, ಹಯ್ನಾಳಪ್ಪ ಗಂಗಾಕರ್, ಮಲ್ಲಿಕಾರ್ಜುನ ಹಲಕರ್ಟಿ, ಅಬ್ದುಲ್ ರಜಾಕ್ ಮನಿಯಾರ, ಸುಲೇಮಾನ್, ಮಾಜಿ ತಾಪಂ ಸದಸ್ಯ ಮಲ್ಲನಗೌಡ ಪಾಟೀಲ ಇನ್ನಿತರರು ಇದ್ದರು.