Advertisement
ಆಂಧ್ರ ಮತ್ತು ತಮಿಳುನಾಡು ರಾಜ್ಯಗಳ ಗಡಿಯನ್ನು ಹೊಂದಿರುವ ಕೋಲಾರ ಜಿಲ್ಲೆಯ ರಾಜಕಾರಣದಲ್ಲಿ ಪಕ್ಷ ನಿಷ್ಠೆಗಿಂತಲೂ ನಾಯಕ ನಿಷ್ಠೆ ಹೆಚ್ಚು. ಇತ್ತೀಚಿಗೆ ಜಿಲ್ಲೆಗೆ ರಿಯಲ್ ಎಸ್ಟೇಟ್ ರಾಜಕಾರಣ ಪ್ರವೇಶಿಸಿರುವುದರಿಂದ ನಾಯಕ ನಿಷ್ಠೆ ಹಣದ ನಿಷ್ಠೆಯಾಗಿ ಬದಲಾಗಿದೆ.
ಜಿಲ್ಲಾ ಕೇಂದ್ರವನ್ನು ಹೊಂದಿರುವ ಕೋಲಾರ ವಿಧಾನಸಭಾ ಕ್ಷೇತ್ರ, ಸಿದ್ದರಾಮಯ್ಯ ಸ್ಪರ್ಧೆ ಕಾರಣಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಚಾರಕ್ಕೆ ಬಂದಿತ್ತು. ಅಂತಿಮವಾಗಿ ಕೋಲಾರ ಕಣದಲ್ಲಿ ಬಿಜೆಪಿಯಿಂದ ವರ್ತೂರು ಪ್ರಕಾಶ್, ಜೆಡಿಎಸ್‌ನಿಂದ ಸಿಎಂಆರ್ ಶ್ರೀನಾಥ್ ಮತ್ತು ಕಾಂಗ್ರೆಸ್‌ನಿಂದ ಕೊತ್ತೂರು ಮಂಜುನಾಥ್ ಅಭ್ಯರ್ಥಿಗಳಾಗಿದ್ದಾರೆ.
ಆರು ತಿಂಗಳ ಹಿಂದೆಯೇ ಜೆಡಿಎಸ್ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟಿದ್ದ ಸಿಎಂಆರ್ ಶ್ರೀನಾಥ್ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಬಿಜೆಪಿ ಸೇರ್ಪಡೆಯಾಗಿದ್ದ ವರ್ತೂರು ಪ್ರಕಾಶ್, ಟಿಕೆಟ್ ಖಚಿತವಾದ ಮೇಲೆ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. ಕೋಲಾರದಿಂದ ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆಂದು ಕಾದು ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಬಿ ಫಾರಂ ಪಡೆದ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಯಾಗಿ ತಡವಾಗಿ ಪ್ರಚಾರಕ್ಕಿಳಿದಿದ್ದಾರೆ.
Related Articles
Advertisement
ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜೆಡಿಎಸ್‌ನ ಕೆ.ಶ್ರೀನಿವಾಸಗೌಡ ಕಾಂಗ್ರೆಸ್ ಪಕ್ಷ ಸೇರಿದ್ದರೂ ಚುನಾವಣೆ ಎದುರಿಸುತ್ತಿಲ್ಲ. ಇಲ್ಲಿ ಯಾವ ಪಕ್ಷವು ನೇರವಾಗಿ ಬಂಡಾಯ ಎದುರಿಸುತ್ತಿಲ್ಲ. ಆದರೆ, ಕಾಂಗ್ರೆಸ್ ಬಣಗಳ ಬಡಿದಾಟ ಒಳೇಟು ಚುನಾವಣೆಯ ಮೇಲೆ ಪರಿಣಾಮ ಬೀರುತ್ತಿದೆ. ಪಕ್ಷಾಂತರವು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ನಡೆಯುತ್ತಿದೆ. ಅನುಕಂಪದ ಲಾಭ ಪಡೆಯುವ ಅಭ್ಯರ್ಥಿಗಳು ಕಣದಲ್ಲಿಲ್ಲ.
ಕೋಲಾರ ಕ್ಷೇತ್ರದಲ್ಲಿ ಅಹಿಂದ ಮತದಾರರು ಮೇಲುಗೈ ಸಾಧಿಸುತ್ತಾರೆ. ಕಾಂಗ್ರೆಸ್ ಭೈರಾಗಿ, ಬಿಜೆಪಿ ಕುರುಬ ಹಾಗೂ ಜೆಡಿಎಸ್ ಒಕ್ಕಲಿಗ ಅಭ್ಯರ್ಥಿಯನ್ನು ನಿಲ್ಲಿಸಿರುವುದರಿಂದ ದಲಿತ ಹಾಗೂ ಅಲ್ಪಸಂಖ್ಯಾತ ಮತಗಳು ನಿರ್ಣಾಯಕವಾಗುತ್ತದೆ. ಒಟ್ಟು ಮತಗಳಲ್ಲಿ ಶೇ.50 ಕ್ಕಿಂತಲೂ ಹೆಚ್ಚಾಗಿರುವ ಈ ಎರಡು ಸಮುದಾಯಗಳ ಮತಗಳನ್ನು ಯಾರು ಹೆಚ್ಚಿನ ಪಡೆದುಕೊಳ್ಳುತ್ತಾರೋ ಅವರೇ ಗೆಲುವಿನ ಗೆರೆ ದಾಟುತ್ತಾರೆ.
ಒಟ್ಟಾರೆ ಕೋಲಾರ ಕ್ಷೇತ್ರದಲ್ಲಿ ಸದ್ಯಕ್ಕೆ ತ್ರಿಕೋನ ಸ್ಪರ್ಧೆಯ ಚಿತ್ರಣ ಕಾಣಿಸುತ್ತಿದೆ.
ಮುಳಬಾಗಿಲು : ಕಾಂಗ್ರೆಸ್-ಜೆಡಿಎಸ್ ಪೈಪೋಟಿಕೋಲಾರ ಜಿಲ್ಲೆ ಮತ್ತು ರಾಜ್ಯದ ಮೂಡಣ ದಿಕ್ಕಿನ ಮೊದಲ ಕ್ಷೇತ್ರ ಮುಳಬಾಗಿಲು. 2008 ರಿಂದ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿದೆ. ಕಳೆದ ಚುನಾವಣೆ ಸೋತಾಗಿನಿಂದಲೂ ಕ್ಷೇತ್ರದಲ್ಲಿ ಜನರ ಮಧ್ಯೆಯೇ ಉಳಿದುಕೊಂಡಿರುವ ಸಮೃದ್ಧಿ ಮಂಜುನಾಥ್ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ನಾಮಪತ್ರ ಸಲ್ಲಿಕೆಯ ಕೊನೆಯ ಕ್ಷಣದಲ್ಲಿ ಆದಿನಾರಾಯಣ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಶೀಗೇಹಳ್ಳಿ ಸುಂದರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಆದಿನಾರಾಯಣ ಈ ಹಿಂದೆಯೂ ಮುಳಬಾಗಿಲು ಕ್ಷೇತ್ರದಿಂದ ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಇವರಿಗೆ ಕೊಂಚ ಕ್ಷೇತ್ರ ಪರಿಚಯವಿದೆ. ಆದರೂ, ಕ್ಷೇತ್ರದಲ್ಲಿ ಹಿಂದೆ ಶಾಸಕರಾಗಿದ್ದ ಕೊತ್ತೂರು ಮಂಜುನಾಥ್‌ರ ಬೆಂಬಲಿಗರನ್ನು ಅವಲಂಬಿಸಿ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿಯ ಶೀಗೇಹಳ್ಳಿ ಸುಂದರ್ ಇದೇ ಕ್ಷೇತ್ರದ ಮಾಜಿ ಶಾಸಕ ನಂಗಲಿ ಮುನಿಯಪ್ಪರ ಮೊಮ್ಮಗ ಎಂದು ಹೇಳಿಕೊಳ್ಳುತ್ತಾ ಸಂಸದ ಮುನಿಸ್ವಾಮಿ ಬೆಂಬಲದೊಂದಿಗೆ ಪ್ರಚಾರದಲ್ಲಿದ್ದಾರೆ. ಸಮೃದ್ಧಿ ಮಂಜುನಾಥ್ ಚುನಾವಣೆ ಸೋತಾಗಿನಿಂದಲೂ 2023ರ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಮೂವರು ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾದರೂ ಬೇರೆ ಒಳಪಂಗಡಗಳಿಗೆ ಸೇರಿದವರಾಗಿದ್ದಾರೆ. ಚುನಾವಣಾ ಕಣದಲ್ಲಿ 12 ಮಂದಿ ಅಭ್ಯರ್ಥಿಗಳಿದ್ದು, ಶಾಸಕರನ್ನು 2.14 ಲಕ್ಷ ಮಂದಿ ಮತದಾರರು ಆಯ್ಕೆ ಮಾಡಲಿದ್ದಾರೆ. ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಎಚ್.ನಾಗೇಶ್ ಪಕ್ಷೇತರರಾಗಿ ಗೆದ್ದು, ಸಮ್ಮಿಶ್ರ ಹಾಗೂ ಸರಕಾರದಲ್ಲಿದ್ದರು. ಇದೀಗ ಕಾಂಗ್ರೆಸ್ ಸೇರಿ ಮಹದೇವಪುರ ಅಭ್ಯರ್ಥಿಯಾಗಿದ್ದಾರೆ. ಈ ಕ್ಷೇತ್ರದಲ್ಲೂ ನೇರ ಬಂಡಾಯದ ಬಿಸಿ ಹಾಲಿ ಯಾವ ಅಭ್ಯರ್ಥಿಯನ್ನು ತಟ್ಟುತ್ತಿಲ್ಲ. ಆದರೂ, ಪಕ್ಷಗಳೊಳಗಿನ ಬಣಗಳು ವಿಭಿನ್ನ ಧೋರಣೆಯನ್ನು ಹೊಂದಿರುವುದು ಮೂರು ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಚಾರದ ತೊಡಕಾಗಿ ಪರಿಣಮಿಸಿದೆ. ಮೂರು ಮಂದಿ ಅಭ್ಯರ್ಥಿಗಳ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿರುವ ದಲಿತ ಮತಗಳ ಜೊತೆಗೆ ಒಕ್ಕಲಿಗ ಹಾಗೂ ಹಿಂದುಳಿದ, ಅಲ್ಪಸಂಖ್ಯಾತರ ಮತಗಳ ಬೆಂಬಲ ಪಡೆಯುವರು ಗೆಲುವಿನ ನಗೆ ಬೀರುತ್ತಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಕಾಣಿಸುತ್ತಿದೆ. ಕೆಜಿಎಫ್ : ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ
ಜಗತ್ತಿನ ಆಳದ ಚಿನ್ನದ ಗಣಿಗಳನ್ನು ಹೊಂದಿರುವ ಕೆಜಿಎಫ್ ಜಗದ್ವಿಖ್ಯಾತಿಯಾಗಿದೆ. ಇಲ್ಲಿನ ರಾಜಕೀಯವು ತಮಿಳು ನಾಡಿನ ಪ್ರಭಾವದಲ್ಲಿ ನಡೆಯುತ್ತಿತ್ತು. 2008 ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ನಂತರ ಕಾಂಗ್ರೆಸ್, ಬಿಜೆಪಿ ಶಾಸಕರು ಗೆಲ್ಲುವಂತಾಯಿತು. ಮೀಸಲು ಕ್ಷೇತ್ರವನ್ನು ಹಿಂದಿನ ಬಾರಿ ಪ್ರತಿನಿಧಿಸುತ್ತಿದ್ದ ರೂಪಕಲಾ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸುತ್ತಿದ್ದಾರೆ. ಕಳೆದ ಬಾರಿ ಇವರಿಗೆ ಪ್ರತಿಸ್ಪರ್ಧಿಯಾಗಿ ಪರಾಭವಗೊಂಡಿದ್ದ ಅಶ್ವಿನಿ ಸಂಪಂಗಿ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಹಿರಿಯ ಮುಖಂಡ ಭಕ್ತವತ್ಸಲಂ ನಿಧನದಿಂದ ತನ್ನ ಅಭ್ಯರ್ಥಿಯನ್ನಾಗಿ ಡಾ.ರಮೇಶ್‌ಬಾಬುರನ್ನು ಆಯ್ಕೆ ಮಾಡಿಕೊಂಡಿದೆ. ಕಾಂಗ್ರೆಸ್‌ನ ಶಾಸಕಿ ರೂಪಕಲಾ ಒಂದು ವರ್ಷದಿಂದಲೇ ಚುನಾವಣಾ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಬಿಜೆಪಿಯ ಅಶ್ವಿನಿ ತನ್ನ ತಂದೆ ಮಾಜಿ ಶಾಸಕ ಸಂಪಂಗಿ ಸಹಕಾರದಿಂದ ಪ್ರಚಾರ ಆರಂಭಿಸಿದ್ದಾರೆ. ಪಂಚರತ್ನ ಯಾತ್ರೆ ವೇಳೆ ಅಭ್ಯರ್ಥಿಯಾದ ಡಾ.ರಮೇಶ್‌ಬಾಬು ಪ್ರಚಾರದಲ್ಲಿದ್ದಾರೆ. ಮಾಜಿ ಶಾಸಕ ಆರ್‌ಪಿಐನ ಎಸ್.ರಾಜೇಂದ್ರನ್ ಈ ಬಾರಿಯೂ ಕಣದಲ್ಲಿದ್ದಾರೆ. ಒಟ್ಟು 10 ಮಂದಿ ಅಭ್ಯರ್ಥಿಗಳು ಉಮೇದುವಾರಿಯನ್ನು ಖಚಿತಪಡಿಸಿಕೊಂಡಿದ್ದು, 1.97 ಲಕ್ಷ ಮಂದಿ ಮತದಾನಕ್ಕೆ ಅರ್ಹ ಮತದಾರರಾಗಿದ್ದಾರೆ. ಅತಿ ಹೆಚ್ಚು ದಲಿತ ಮತ್ತು ಕ್ರೈಸ್ತ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಗ್ರಾಮಾಂತರ ಭಾಗದಲ್ಲಿ ಒಕ್ಕಲಿಗ ಮತಗಳ ಪ್ರಾಬಲ್ಯವಿದೆ. ನೇರ ಬಂಡಾಯ ಎದ್ದು ಯಾವ ಅಭ್ಯರ್ಥಿಯೂ ಕಣದಲ್ಲಿಲ್ಲ ಆದರೂ, ಒಳೇಟಿನ ಭೀತಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗಿದೆ.
ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ರೈಸ್ತ ಮತ್ತು ದಲಿತ, ಒಕ್ಕಲಿಗ ಮತಗಳೇ ಇಲ್ಲಿನ ಗೆಲುವಿನ ನಿರ್ಣಾಯಕವಾಗಿದೆ. ಈ ಸಮುದಾಯಗಳ ಮತದಾರರ ಮೆಚ್ಚುಗೆ ಗಳಿಸಿದವರು ಜಯಶಾಲಿಯಾಗುತ್ತಾರೆ. ಇಲ್ಲಿ ಹಿಂದಿನ ಚುನಾವಣೆಯಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಂಗಾರಪೇಟೆ: ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ ಬಂಗಾರಪೇಟೆ ರೈಲ್ವೆ ಜಂಕ್ಷನ್ ಹೊಂದಿರುವ ಅಕ್ಕಿ ಗಿರಣಿಗಳ ಕ್ಷೇತ್ರ. ಮೀಸಲು ಕ್ಷೇತ್ರದ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. 2008 ರಲ್ಲಿ ಗೆದ್ದು ನಂತರ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಯಾಗಿದ್ದ ಬೇತಮಂಗಲ ಎಂ.ನಾರಾಯಣಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹಿಂದಿನಂತೆ ಎಂ.ಮಲ್ಲೇಶ್‌ಬಾಬು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದಲೂ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್‌ನ ಎಸ್.ಎನ್.ನಾರಾಯಣಸ್ವಾಮಿ ಪ್ರಚಾರ ನಡೆಸುತ್ತಿದ್ದಾರೆ. ಇತ್ತೀಚಿಗೆ ಟಿಕೆಟ್ ಖಚಿತಪಡಿಸಿಕೊಂಡ ಎಂ.ನಾರಾಯಣಸ್ವಾಮಿ ಇನ್ನಿತರ ಆಕಾಂಕ್ಷಿಗಳ ಒಗ್ಗಟ್ಟಿನ ಬೆಂಬಲದೊಂದಿಗೆ ಪ್ರಚಾರ ಕಾರ್ಯಕ್ಕಿಳಿದಿದ್ದಾರೆ. ಪಂಚರತ್ನ ಯಾತ್ರೆಯಿಂದಲೂ ಜೆಡಿಎಸ್‌ನ ಮಲ್ಲೇಶ್‌ಬಾಬು ಪ್ರಚಾರ ನಡೆಸುತ್ತಿದ್ದಾರೆ. ನೇರ ಬಂಡಾಯದ ಬಿಸಿ ಯಾರನ್ನು ತಟ್ಟುತ್ತಿಲ್ಲ. ಆದರೂ, ಪಕ್ಷಗಳ ಒಳ ಲೆಕ್ಕಾಚಾರ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಯನ್ನು ಕಂಗೆಡಿಸಿದೆ. ಕಾಂಗ್ರೆಸ್‌ನ ಎಸ್.ಎನ್.ನಾರಾಯಣಸ್ವಾಮಿ ದಲಿತ ಬಲಗೈನವರಾದರೆ, ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್‌ಬಾಬು ಭೋವಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಮೂರು ನಾಲ್ಕು ಮಂದಿ ಆಕಾಂಕ್ಷಿಗಳಾಗಿದ್ದರು. ಟಿಕೆಟ್ ಹಂಚಿಕೆ ವೇಳೆಗೆ ಎಲ್ಲಾ ಆಕಾಂಕ್ಷಿಗಳು ಬಂಡಾಯದ ಸೊಲ್ಲೆತ್ತದೆ ಒಗ್ಗೂಡಿ ಎಂ.ನಾರಾಯಣಸ್ವಾಮಿಗೆ ಪ್ರಚಾರ ನಡೆಸುತ್ತಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ. ಕ್ಷೇತ್ರದಲ್ಲಿ ಒಟ್ಟು 8 ಮಂದಿ ಅಭ್ಯರ್ಥಿಗಳಿದ್ದು, 2.03 ಲಕ್ಷ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ದಲಿತರ ಪೈಕಿ ಒಳ ಪಂಗಡಗಳ ರಾಜಕೀಯವು ಹೆಚ್ಚಾಗಿ ಕಾಣಿಸುತ್ತಿದೆ. ದಲಿತ ಮತಗಳು, ಒಕ್ಕಲಿಗ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ಮತದಾರರ ಆಶೀರ್ವಾದ ಪಡೆದವರು ವಿಜಯಿಶಾಲಿಗಳಾಗುತ್ತಾರೆ.
ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಎನಿಸಿದರೂ ನೇರ ಪೈಪೋಟಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಏರ್ಪಟ್ಟಿದೆ. ಮಾಲೂರು ಕ್ಷೇತ್ರ: ತ್ರಿಕೋನ ಸ್ಪರ್ಧೆಗೆ ಬಿಜೆಪಿ ಬಂಡಾಯ ಭೀತಿ ಕೈಗಾರಿಕೆ, ಹೆಂಚು, ಇಟ್ಟಿಗೆ ಮಲ್ಲಿಗೆ ಹೂವಿನ ಕ್ಷೇತ್ರ ಮಾಲೂರು. ಹಾಲಿ ಶಾಸಕ ಕೆ.ವೈ.ನಂಜೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರು ಆಯ್ಕೆ ಬಯಸುತ್ತಿದ್ದಾರೆ. ಹಿಂದೆ ಇದೇ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಾಗಿದ್ದ ಕೆ.ಎಸ್.ಮಂಜುನಾಥಗೌಡ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದಾರೆ. ಜೆ.ಇ.ರಾಮೇಗೌಡ ಬಿಜೆಪಿ ತೊರೆದು ಬಂದು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಟಿಕೆಟ್ ಬಯಸಿದ್ದ ಹೂಡಿ ವಿಜಯಕುಮಾರ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಜೆಡಿಎಸ್‌ನ ಜೆ.ಇ.ರಾಮೇಗೌಡ ಮತ್ತು ಹೂಡಿ ವಿಜಯಕುಮಾರ್ ಎರಡು ಮೂರು ವರ್ಷಗಳಿಂದಲೂ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕೋಮುಲ್ ಅಧ್ಯಕ್ಷರೂ ಆಗಿರುವ ಶಾಸಕ ಕೆ.ವೈ.ನಂಜೇಗೌಡ ತಮ್ಮದೇ ಶೈಲಿಯ ಪ್ರಚಾರದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ ಗೌಡ ಟಿಕೆಟ್‌ಖಚಿತವಾದ ಮೇಲೆ ಪ್ರಚಾರಕ್ಕೆ ಧುಮುಕಿದ್ದಾರೆ. ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿರುವ ಹೂಡಿ ವಿಜಯಕುಮಾರ್ ಹಿಂದುಳಿದ ತಿಗಳ ಸಮುದಾಯವರು. ಉಳಿದಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯವರು. ಕ್ಷೇತ್ರದಲ್ಲಿ ಒಟ್ಟು 15 ಮಂದಿ ಕಣದಲ್ಲಿದ್ದು, 1.90 ಲಕ್ಷ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಾಗಿರುವ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮತದಾರರ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅಹಿಂದ ಮತಗಳನ್ನು ಯಾರು ಹೆಚ್ಚಾಗಿ ಪಡೆಯುತ್ತಾರೋ ಅವರು ಆಯ್ಕೆ ಸುಲಭವಾಗುತ್ತದೆ. ಮೇಲ್ನೋಟಕ್ಕೆ ಚತುಷೊRàನ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಶಾಸಕ ಕಾಂಗ್ರೆಸ್ ಕೆ.ವೈ.ನಂಜೇಗೌಡ ಹಾಗೂ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ತಮ್ಮ ಅನುಭವವನ್ನು ಪಣಕ್ಕಿಟ್ಟು ಪ್ರಚಾರದಲ್ಲಿದ್ದಾರೆ. ಜೆಡಿಎಸ್ ರಾಮೇಗೌಡ ಮತ್ತು ಪಕ್ಷೇತರ ಹೂಡಿವಿಜಯಕುಮಾರ್ ಅನುಭವಿಗಳಿಗೆ ಟಕ್ಕರ್ ನೀಡುವಂತೆ ಪ್ರಚಾರಕ್ಕಿಳಿದಿದ್ದಾರೆ. ಇದರಿಂದ ಚತುಷೊRàನ ಸ್ಪರ್ಧೆಯಲ್ಲಿ ಗೆಲ್ಲುವವರು ಯಾರು ಎನ್ನುವುದೇ ಕುತೂಹಲ. ಶ್ರೀನಿವಾಸಪುರ: ಕಾಂಗ್ರೆಸ್ ಜೆಡಿಎಸ್ ನೇರ ಪೈಪೋಟಿ ಮಾವಿನ ರಾಜಧಾನಿ ಎನಿಸಿಕೊಂಡಿರುವ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಳೆದ ಐವತ್ತು ವರ್ಷಗಳಿಂದಲೂ ಇಬ್ಬರದೇ ಸಾಮ್ರಾಜ್ಯ. ರಮೇಶ್‌ಕುಮಾರ್ ಮತ್ತು ಜಿ.ಕೆ.ವೆಂಕಟಶಿವಾರೆಡ್ಡಿಯದ್ದೇ ಪ್ರಾಬಲ್ಯ. ಈ ಬಾರಿ ರಮೇಶ್‌ಕುಮಾರ್ ಹಾಲಿ ಶಾಸಕರಾಗಿ ಹ್ಯಾಟ್ರಿಕ್ ಪುನರಾಯ್ಕೆ ಬಯಸಿದ್ದಾರೆ. ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ಹಿಂದಿನ ಸೋಲಿನ ಸೇಡು ತೀರಿಸಿಕೊಳ್ಳುವ ಉಮೇದಿಯಲ್ಲಿದ್ದಾರೆ. ಇವರ ನಡುವೆ ಅಚ್ಚರಿಯ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಸೇವಾ ಕಾರ್ಯ ಮಾಡುತ್ತಿದ್ದ ಗುಂಜೂರು ಶ್ರೀನಿವಾಸರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ವೈದ್ಯ ಡಾ.ವೆಂಕಟಾಚಲ ಆಪ್ ಅಭ್ಯರ್ಥಿಯಾಗಿದ್ದಾರೆ. ಈ ಬಾರಿ ಗೆಲ್ಲಲೇ ಬೇಕೆಂದು ಪಣ ತೊಟ್ಟಂತಿರುವ ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ಒಂದು ವರ್ಷದಿಂದಲೂ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡು ಊರೂರು ಸುತ್ತುತ್ತಿದ್ದಾರೆ. ಹಿಂದೆ ಸೋತಿತ್ತ ಅನುಕಂಪವೂ ಇವರ ಬೆನ್ನಿಗಿದೆ. ಕಾಂಗ್ರೆಸ್‌ನ ರಮೇಶ್‌ಕುಮಾರ್ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡನಂತರ ಪ್ರಚಾರಕ್ಕಿಳಿದಿದ್ದಾರೆ. ಟಿಕೆಟ್ ಸಿಕ್ಕ ನಂತರ ಗುಂಜೂರು ಶ್ರೀನಿವಾಸರೆಡ್ಡಿ ಪ್ರಚಾರದಲ್ಲಿದ್ದಾರೆ. ಕಾಂಗ್ರೆಸ್‌ನ ರಮೇಶ್‌ಕುಮಾರ್ ಬ್ರಾಹ್ಮಣರಾಗಿದ್ದರೆ, ಜೆಡಿಎಸ್‌ನ ಜಿ.ಕೆ.ವೆಂಕಟಶಿವಾರೆಡ್ಡಿ ಮತ್ತು ಗುಂಜೂರು ಶ್ರೀನಿವಾಸರೆಡ್ಡಿ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 9 ಮಂದಿ ಅಭ್ಯರ್ಥಿಗಳಿದ್ದು, 2.15 ಲಕ್ಷ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚು ದಲಿತ, ಒಕ್ಕಲಿಗ ಹಾಗೂ ಅಲ್ಪಸಂಖ್ಯಾತ,ಹಿಂದುಳಿದ ಮತದಾರರಿದ್ದಾರೆ. ಮೂವರು ಅಭ್ಯರ್ಥಿಗಳು ಈ ಸಮುದಾಯಗಳ ಮತದಾರರ ಮನಗೆಲ್ಲಲು ಪೈಪೋಟಿ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಂಡಾಯದ ಬಾವುಟ ಹಾರಿಸುವವರಿಲ್ಲಲಾದರೂ, ಬಿಜೆಪಿ ಹೆಸರಿನಲ್ಲಿ ಕ್ಷೇತ್ರ ಸುತ್ತಾಡುತ್ತಿದ್ದ ಎಸ್‌ಎಲ್‌ಎನ್ ಮಂಜುನಾಥ್ ಇತ್ತೀಚಿಗೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಗ್ರಾಮ ಪಂಚಾಯತ್ ಹಂತದಲ್ಲಿ ನಿತ್ಯವೂ ಪಕ್ಷಾಂತರ ನಡೆಯುತ್ತಲೇ ಇದೆ. ಬಿಜೆಪಿಯ ಗುಂಜೂರು ಶ್ರೀನಿವಾಸರೆಡ್ಡಿ ಮತ್ತು ಆಪ್‌ನ ಡಾ.ವೆಂಕಟಾಚಲ ಪಡೆಯುವ ಮತಗಳು ಯಾರಿಗೆ ಲಾಭ, ಯಾರಿಗೆ ನಷ್ಟವಾಗಬಹುದುಎಂಬ ಲೆಕ್ಕಾಚಾರಗಳು ಆರಂಭವಾಗಿದೆ. ಕ್ಷೇತ್ರದಲ್ಲಿ ಎಂದಿನಂತೆ ಗೆಲುವಿಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. 2018 ಶಾಸಕರ ಬಲಾಬಲ ಒಟ್ಟು 6 ಕ್ಷೇತ್ರ ಕಾಂಗ್ರೆಸ್ – 4 ಜೆಡಿಎಸ್ – 1 ಪಕ್ಷೇತರ – 1 ~ ಕೆ.ಎಸ್.ಗಣೇಶ್