ಮುಂಬಯಿ: ‘ಲಾಪತಾ ಲೇಡೀಸ್’( Laapataa Ladies) ಸಿನಿಮಾ 2025ರ ಆಸ್ಕರ್ ಗೆ (Oscars 2025) ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎನ್ನುವ ಸುದ್ದಿ ಟ್ರೆಂಡ್ ನಲ್ಲಿರುವಾಗಲೇ ಮತ್ತೊಂದು ಸಿನಿಮಾ ಭಾರತದಿಂದ ಆಸ್ಕರ್‌ಗೆ ಸಲ್ಲಿಕೆಯಾಗಿದೆ ಎಂದು ವರದಿಯಾಗಿದೆ.
97ನೇ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಕಿರಣ್ ರಾವ್ (Kiran Rao) ನಿರ್ದೇಶನದ ‘ಲಾಪತಾ ಲೇಡೀಸ್’ ಅಧಿಕೃತವಾಗಿ ಪ್ರವೇಶ ಪಡೆದಿದೆ ಎಂದು ಸೋಮವಾರ (ಸೆ.23ರಂದು) ಚೆನ್ನೈನಲ್ಲಿ ಸುದ್ದಿಗೋಷ್ಟಿ ನಡೆಸಿ ಫಿಲಂ ಫೆಡರೇಶನ್ ಆಫ್ ಇಂಡಿಯಾ (Film Federation of India) ತಿಳಿಸಿತ್ತು.
ಇದನ್ನೂ ಓದಿ: Jayam Ravi: ಜಯಂ ರವಿಯನ್ನು ಮನೆಯಿಂದ ಹೊರಹಾಕಿದ ಮಾಜಿ ಪತ್ನಿ; ಪೊಲೀಸರ ಮೊರೆ ಹೋದ ನಟ
ಈ ನಡುವೆ ರಣದೀಪ್ ಹೂಡಾ ಅಭಿನಯಿಸಿ, ನಿರ್ದೇಶನ ಮಾಡಿರುವ ‘ಸ್ವಾತಂತ್ರ್ಯ ವೀರ ಸಾವರ್ಕರ್ʼ ಸಿನಿಮಾವನ್ನು ಆಸ್ಕರ್‌ಗೆ ಸಲ್ಲಿಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ವಿಡಿ ಸಾವರ್ಕರ್ ಅವರ ಜೀವನದ ಕಥೆಯನ್ನು ಹೊಂದಿರುವ ‘ಸ್ವಾತಂತ್ರ್ಯ ವೀರ ಸಾವರ್ಕರ್ʼ ಚಿತ್ರ ಇದೇ ವರ್ಷದ ಮಾರ್ಚ್ 22ರಂದು ರಿಲೀಸ್ ಆಗಿತ್ತು. ರಣದೀಪ್ ಹೂಡಾ ಪ್ರಧಾನ ಪಾತ್ರದ ಜತೆ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಕಲೆಕ್ಷನ್ ಮಾಡದೆ ಇದ್ದರೂ ರಣದೀಪ್ ಅವರ ಅಭಿನಯಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು.
“ನಮ್ಮ ಸ್ವಾತಂತ್ರ್ಯ ವೀರ ಸಾವರ್ಕರ್ ಚಿತ್ರವನ್ನು ಅಧಿಕೃತವಾಗಿ ಆಸ್ಕರ್‌ಗೆ ಸಲ್ಲಿಸಲಾಗಿದೆ. ನಮ್ಮ ಪರಿಶ್ರಮವನ್ನು ಮೆಚ್ಚಿದ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಧನ್ಯವಾದಗಳು. ಈ ಪ್ರಯಾಣವು ಅದ್ಭುತವಾಗಿದೆ ಮತ್ತು ದಾರಿಯುದ್ದಕ್ಕೂ ನಮಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞರಾಗಿರುತ್ತೇವೆ” ಎಂದು ನಿರ್ಮಾಣ ಸಂಸ್ಥೆ ಪೋಸ್ಟರ್ ಹಂಚಿಕೊಂಡು ಹೇಳಿದೆ.
ಆದರೆ ಈಗಾಗಲೇ ಭಾರತದಿಂದ ಅಧಿಕೃತವಾಗಿ ‘ಲಾಪತಾ ಲೇಡೀಸ್’ ಸಿನಿಮಾವನ್ನು ಆಸ್ಕರ್ ಗೆ ಸಲ್ಲಿಕೆ ಮಾಡಿರುವ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಚಿತ್ರತಂಡದ ಮಾತನ್ನು ತಳ್ಳಿ ಹಾಕಿದೆ.
ರಣದೀಪ್ ಹೂಡಾ ಅವರ ʼಸ್ವಾತಂತ್ರ್ಯ ವೀರ ಸಾವರ್ಕರ್ʼ ತಂಡ ಮಾಡಿರುವ ಘೋಷಣೆಯಲ್ಲಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಯಾವುದೇ ಪಾತ್ರವಿಲ್ಲವೆಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಕರ ಸ್ಪಷ್ಟನೆ ನೀಡಿದ್ದಾರೆ.
ʼಸ್ವಾತಂತ್ರ್ಯ ವೀರ ಸಾವರ್ಕರ್ʼ ತಂಡ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಭಾರತದಿಂದ ಅಧಿಕೃತವಾಗಿ ಆಸ್ಕರ್ ಪ್ರಶಸ್ತಿಗಾಗಿ ‘ಲಾಪತಾ ಲೇಡೀಸ್’ ಚಿತ್ರವನ್ನು ಮಾತ್ರ ಕಳುಹಿಸಲಾಗಿದೆ ಎಂದು ರವಿ ಕೊಟ್ಟಕರ ಸ್ಪಷ್ಟಪಡಿಸಿದ್ದಾರೆ.
ಸಿನಿಮಾ ಆಸ್ಕರ್ ಗೆ ಸಲ್ಲಿಕೆಯಾಗಿದೆ ಎನ್ನುವ ಪೋಸ್ಟ್ ನ್ನು ಇನ್ಸ್ಟಾಗ್ರಾಮ್‌ನಲ್ಲಿ ಚಿತ್ರದಲ್ಲಿ ನಟಿಸಿರುವ ಅಂಕಿತಾ ಲೋಖಂಡೆ, ಸಹ-ನಿರ್ಮಾಪಕ ಸಂದೀಪ್ ಸಿಂಗ್ ಮತ್ತು ನಿರ್ಮಾಣ ಸಂಸ್ಥೆಗಳ ಸಹಯೋಗದಿಂದ ಹಂಚಿಕೊಳ್ಳಲಾಗಿದೆ. ಆದರೆ ಚಿತ್ರದ ನಿರ್ದೇಶಕ ಹಾಗೂ ನಾಯಕ ರಣದೀಪ್ ಈ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ.
“ಚಿತ್ರವನ್ನು ಯಾವಾಗ ಆಸ್ಕರ್‌ಗೆ ಸಲ್ಲಿಸಲಾಯಿತು ಎಂದು ನನಗೆ ತಿಳಿದಿಲ್ಲ. ಆಸ್ಕರ್‌ಗೆ ಹೋಗುವುದು ಒಂದು ದೊಡ್ಡ ಮೈಲಿಗಲ್ಲು ಎನ್ನುವುದನ್ನು ಮಾತ್ರ ನಾನು ಹೇಳಿದ್ದೆ ಎಂದು ಸಹ ನಿರ್ಮಾಪಕ ಆನಂದ್ ಪಂಡಿತ್ ʼಹಿಂದೂಸ್ತಾನ್ ಟೈಮ್ಸ್ʼಗೆ ತಿಳಿಸಿದ್ದಾರೆ.