ಚಿತ್ರದುರ್ಗ: ಭ್ರೂಣ ಪತ್ತೆ ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಅಲ್ಲದೆ ಶಿಕ್ಷಾರ್ಹ ಅಪರಾಧ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಸಿ.ಎಲ್. ಫಾಲಾಕ್ಷ ಎಚ್ಚರಿಸಿದರು. ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಚಿತ್ರದುರ್ಗ ತಾಲೂಕಿನ ಆಯ್ದ ಶಿಕ್ಷಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಣ್ಣು ತಾಯಿಯಾಗಿ, ಬಾಳಸಂಗಾತಿಯಾಗಿ ಬೇಕು. ಆದರೆ ಮಗಳಾಗಿ ಏಕೆ ಬೇಡ ಎಂದು ಪ್ರಶ್ನಿಸಿದರು. ಮಹಿಳಾ ಸಮಾನತೆ ಮತ್ತು ಸಾರ್ವಭೌಮತ್ವಕ್ಕೆ ಸಮಾಜ ಸಜ್ಜಾಗ ಬೇಕಿದೆ. ಭ್ರೂಣಲಿಂಗ ಪತ್ತೆ ಮಾಡಿ ಜೈಲು ಸೇರಬೇಡಿ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್. ಎಸ್. ಮಂಜುನಾಥ ಮಾತನಾಡಿ, ಒಲಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶದ ಕೀರ್ತಿ ಪತಾಕೆ ಹಾರಿಸಿದ ಸಾಕ್ಷಿ ಮಲ್ಲಿಕ್, ಪಿ.ಎನ್. ಸಿಂಧು ನಮ್ಮ ದೇಶದ ಹೆಣ್ಣುಮಕ್ಕಳು. ಪ್ರತಿಯೊಬ್ಬರೂ ಸ್ತ್ರೀ ಸಮಾನತೆಗೆ ಧ್ವನಿ ಎತ್ತಿ ಹೋರಾಡಬೇಕು. ಈ ಬಗ್ಗೆ ಪ್ರತಿ
ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಶಾಲೆಗಳ ಆಸುಪಾಸಿನಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ತಾಯಂದಿರ ಸಭೆಗಳಲ್ಲಿ ಅರಿವು ಮೂಡಿಸಬೇಕು.
ಹೊರುವುದು, ಹೆರುವುದು, ಹಾಲುಣಿಸುವುದು ಹೆಣ್ಣು. ಆದರೆ ನಮ್ಮ ಸಮಾಜವೇ ಹೆಣ್ಣಿನ ಶತ್ರುವಾಗಿದೆ. ಒಲವಿನಿಂದ ಹುಟ್ಟಿದ ಭ್ರೂಣವನ್ನು ಚಾಕುವಿನಿಂದ ಹತ್ಯೆ ಮಾಡುವುದು ಸರ್ವಥಾ ಸರಿಯಲ್ಲ ಎಂದು ಆಕ್ಷೇಪಿಸಿದರು.
ವಿದ್ಯಾವಂತರು ಮತ್ತು ತಿಳಿದವರಾಗಿರುವ ವೈದ್ಯರು ಭ್ರೂಣ ಪತ್ತೆ ಮಾಡುವ ಕಾರ್ಯಕ್ಕೆ ಕೈ ಹಾಕಬಾರದು. ಯಾವುದೇ ಶಾಸನದಲ್ಲಿ ಲಿಂಗ ಪತ್ತೆ ಮಾಡುವ ಕಾನೂನಿಲ್ಲ ಎಂದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿದರು. ಕಾರ್ಯಾಗಾರದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಅಲಿ, ನಾಗವೇಣಿ, ಹಬೀಬುಲ್ಲಾ ಅನ್ಸಾರಿ, ಗೋಣಪ್ಪ, ಇಮ್ರಾನಾ, ಜಿಲ್ಲಾ ಎಂಐಎಸ್ ಮ್ಯಾನೇಜರ್ ಕುಮಾರ್, 20 ಶಿಕ್ಷಕರು, 20 ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.