ಹುಣಸೂರು: ತಾಲೂಕಿನ ಧರ್ಮಾಪುರದಲ್ಲಿ ಕಡೇ ಕಾರ್ತೀಕದ ಅಂಗವಾಗಿ ಎಲ್ಲಾ ಸಮುದಾಯದವರು ಎರಡು ದಿನಗಳ ಈಶ್ವರ, ಮಹದೇಶ್ವರ, ಚನ್ನಕೇಶವಸ್ವಾಮಿಯ ಜಾತ್ರಾ ಮಹೋತ್ಸವ-ಕೊಂಡೋತ್ಸವದಲ್ಲಿ ಭಾಗವಹಿಸಿದ್ದರು.
ಓಕುಳಿಯಾಟ: ಸೋಮವಾರ ಸಂಜೆ ಗ್ರಾಮದ ಮೂಡಲ ಕೆರೆಯಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಕನ್ಯಾ ಮಣಿಗೆಗಳು ಕಳಸದಲ್ಲಿ ನೀರು ಹೊತ್ತು ತಂದು ಮಾರಿಗುಡಿ ಮುಂದಿನ ಚನ್ನಕೇಶವ ಸ್ವಾಮಿ ದೇವಾಲಯದ ಮುಂದಿನ ಓಕುಳಿ ಕೊಳಕ್ಕೆ ನೀರು ತುಂಬಿಸಿದ ನಂತರ ಓಕುಳಿಯಾಡಿದರು.
ಕೊಂಡೋತ್ಸವ: ಮಂಗಳವಾರ ಬೆಳಗ್ಗೆ ನಡೆದ ಕೊಂಡೋತ್ಸವಕ್ಕೆ ಪಕ್ಕದ ನಾಡಪ್ಪನ ಹಳ್ಳಿಯಿಂದ ಆಗಮಿಸಿದ್ದ ಮಹದೇಶ್ವರ ಸ್ವಾಮಿಯ ಉತ್ಸವ ದೇವರು ಹಾಗೂ ಗ್ರಾಮದ ಈಶ್ವರಸ್ವಾಮಿ, ಮಹದೇಶ್ವರ ಸ್ವಾಮಿ, ಮಲ್ಲದೇವರು, ಹುಲಿ ವಾಹನದೊಂದಿಗೆ ಮೂಡಲ ಕೆರೆಗೆ ಆಗಮಿಸಿ ಪೂಜೆ ಸಲ್ಲಿಸಿದರು.
ನಂತರ ಕುಣಿಯುವ ಗುಡ್ಡರ ಕುಣಿತ, ಮಂಗಳ ವಾದ್ಯಗಳೊಂದಿಗೆ ಕೊಂಡೋತ್ಸವ ನಡೆಯುವ ಸ್ಥಳಕ್ಕೆ ಮೆರವಣಿಗೆಯಲ್ಲಿ ಬಂದರು. ನಂತರ ಪೂಜಾರರಾದ ಶಿವಮಲ್ಲು, ಸಣ್ಣಸ್ವಾಮಪ್ಪ ದೇವರ ಆವಾಗಾಹನೆಗೆ ಒಳಗಾಗಿ ದೇವರಿಗೆ ಜೈಕಾರ ಹಾಕುತ್ತಾ ಕೊಂಡ ಹಾಯ್ದರು.
ಆನಂತರ ದೇವಾಲಯ ಸುತ್ತ 3 ದೇವರ ಪ್ರದಕ್ಷಿಣೆ ನಡೆದ ನಂತರ ಉತ್ಸವದ ಮೂಲಕ ಮೈದಾನಕ್ಕಾಗಮಿಸಿ ಎಲ್ಲಾ ಉತ್ಸವ ಮೂರ್ತಿಗಳನ್ನು ಸಾಲಿಗಿಟ್ಟ ನಂತರ ಎಲ್ಲರೂ ಪೂಜೆ ಸಲ್ಲಿಸಿದರು. ವಿವಿಧ ಜನಾಂಗಗಳ ಜಾನಪದ ಕಲಾ ತಂಡಗಳು ನೆರೆದಿದ್ದವರನ್ನು ಮನಸೊರೆಗೊಳಿಸಿದರು. ಈ ಜಾತ್ರಾ ಮಹೋತ್ಸವದಲ್ಲಿ ಸುತ್ತ-ಮುತ್ತಲ ಗ್ರಾಮಸ್ಥರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಭಾಗವಹಿಸಿ ಪುನೀತರಾದರು.
ಜೈಕಾರದೊಂದಿಗೆ ಅದ್ಧೂರಿ ಮೆರವಣಿಗೆ: 2 ದಿನದ ಜಾತ್ರಾ ಮಹೋತ್ಸವದಲ್ಲಿ ಗ್ರಾಮೀಣ ಪ್ರದೇಶದ ಸಂಸ್ಕೃತಿ, ಸಾಂಸ್ಕೃತಿಕ ವೈಭವ ಮೇಳೈಸಿತ್ತು. ಸಂಪ್ರದಾಯದಂತೆ ನಾಯಕ ಸಮುದಾಯದವರು ಮಣೆಸೇವೆ ಕುಣಿತ ಪ್ರದರ್ಶಿಸಿದರೆ, ಕುರುಬ ಜನಾಂಗದವರು ಗುಡ್ಡರಕುಣಿತದ ಜೊತೆಗೆ ಪಟ ಹೊತ್ತು ಕುಣಿದು ಗಮನ ಸೆಳೆದರು. ನಾಲ್ಕು ಉತ್ಸವ ದೇವರ ಹೊತ್ತು ತರುವಾಗ ಭಕ್ತಿಯ ಪರಕಾಷ್ಠಿಗೆ ತಲುಪಿದ ಭಕ್ತರು ಪಲ್ಲಕ್ಕಿಯನ್ನು ಹಿಂದೆ-ಮುಂದೆ ಜಗ್ಗಿಸಿ ಜೈಕಾರ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿಬಂದರು.