Advertisement

ತುಂತುರು ನೀರಿನ ಮೂಲಕ‌ ಗೊಬ್ಬರ ಸಿಂಪಡಣೆ… ಪಾರಂಪರಿಕ ಕೃಷಿ ಪದ್ಧತಿಯಿಂದ ಖುಷಿಕಂಡ ರೈತ

11:01 AM Aug 05, 2024 | Team Udayavani |

ಮುಧೋಳ: ಆಧುನಿಕ ಕೃಷಿ ಪದ್ದತಿಯಲ್ಲಿ ತೊಡಗಿಕೊಂಡಿರುವ ರೈತರು ತಮ್ಮ ಹೊಲಕ್ಕೆ ರಸಾಯನಿಕ ಗೊಬ್ಬರ ಬಳಸುವವರೆ ಹೆಚ್ಚು. ಪಾರಂಪರಿಕ ಕೃಷಿ ಚಟುವಟಿಕೆ ಅಳವಡಿಸಿಕೊಂಡು ಸಾವಯವ ಗೊಬ್ಬರ ಬಳಕೆ‌ ಮಾಡುವ ರೈತರು ಇಂದು ತೀರಾ ಅಪರೂಪವಾಗಿದ್ದಾರೆ. ಅಂತಹ ಅಪರೂಪದ ರೈತರ ಸಾಲಿನಲ್ಲಿ‌ ತಾಲೂಕಿನ ಪರಮಾನಂದ ಜನವಾಡ ಕೂಡಾ ಒಬ್ಬರು. ಮುಗಳಖೋಡದ ನಿವಾಸಿ ಪರಮಾನಂದ ಹಲವಾರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳುವ ಮೂಲಕ ಯಶಸ್ವಿ ರೈತರಾಗಿದ್ದಾರೆ.

Advertisement

ಐದು ಎಕರೆ ಸಂಪೂರ್ಣ ಸಾವಯವ : ಒಟ್ಟು 9ಎಕರೆ ಜಮೀನು ಹೊಂದಿರುವ ಪರಮಾನಂದ ಅವರು ಸದ್ಯ ಐದು ಎಕರೆ ಜಮೀನಿನಲ್ಲಿ ಸಂಪೂರ್ಣ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಐದು ಎಕರೆ ಜಮೀನಿನಲ್ಲಿ‌ ಕಬ್ಬು, ಮೆಕ್ಕೆಜೋಳವನ್ನು ಪ್ರಮುಖ ಬೆಳೆಯನ್ನಾಗಿ ಬೆಳೆದಿರುವ ರೈತ ಸಾವಯವ ಗೊಬ್ಬರದ ಮೂಲಕ ಹೊಲವನ್ನು ಹಚ್ಚ ಹಸಿರಾಗಿಟ್ಟುಕೊಂಡಿದ್ದಾನೆ.

ನಾಲ್ಕು ವಿಧಾನ ಅಳವಡಿಕೆ : ರೈತ ಪರಮಾನಂದ ಅವರು ಒಟ್ಟು ನಾಲ್ಕು ವಿಧಗಳ ಮೂಲಕ‌ ಸಾವಯವ ಗೊಬ್ಬರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ.
ಜೀವಾಮೃತ, ಗೋ ಕೃಪಾಮೃತ, ವೇಸ್ಟ್ ಡಿಕಂಪೋಸರ್ ಹಾಗೂ ಎರೆಹುಳು ಗೊಬ್ಬರವನ್ನು ತಮ್ಮಲ್ಲಿಯೇ ತಯಾರಿಸಿಕೊಂಡು ನಿತ್ಯ ಅಗತ್ಯಕ್ಕೆ ತಕ್ಕಂತೆ ಬೆಳೆಗಳಿಗೆ ಸಿಂಪಡನೆ ಮಾಡುತ್ತಾರೆ.

ಜೀವಾಮೃತ ಹಾಗೂ ವೇಸ್ಟ್ ಡಿ ಕಂಪೋಸರ್ ಗೊಬ್ಬರವನ್ನು ಹಲವು ವಿಧಗಳ‌‌ ಮೂಲಕ‌ ತಯಾರಿಸಿದರೆ. ಗೋ ಕೃಪಾಮೃತಕ್ಕೆ ಕನ್ಹೇರಿ ಮಠದ ಮಾರ್ಗದರ್ಶನದಲ್ಲಿ ತಯಾರಿಸಿ ಪ್ರತಿಯೊಂದನ್ನು ವಾರಕ್ಕೆ 200 ಲೀಟರ್ ಗೊಬ್ಬರವನ್ನು ಕ್ರಮವಾಗಿ ತಯಾರಿಸಿ ಬಳಕೆ ಮಾಡುತ್ತಾರೆ.

Advertisement

ನೀರಿನೊಂದಿಗೆ ಮಿಶ್ರಣ : ಪರಮಾನಂದ ಅವರು ತಯಾರಿಸುವ ಗೊಬ್ಬರವನ್ನು ಅವರು ಜಮೀನಿಗೆ ಹರಿಸುವ ನೀರಿನಲ್ಲಿ‌‌ ಮಿಶ್ರಣ ಮಾಡಿ ಬೆಳೆಗಳಿಗೆ ಉಣಿಸುತ್ತಾರೆ. ತುಂತುರು ನೀರಾವರಿ ಅಳವಡಿಸಿಕೊಂಡು ಪೈಪ್ ಮೂಲಕ‌ ನೇರವಾಗಿ ಬೆಳೆಗಳಿಗೆ ಹರಿಸುತ್ತಾರೆ. ಜಮೀನಿಲ್ಲಿ‌ ಬಿತ್ತಿರುವ ಮೆಕ್ಕೆಜೋಳ, ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ನೀರಿನ ಮೂಲಕ‌ ಸಾವಯವ ಗೊಬ್ಬರ ಹಾಯಿಸುವುದರಿಂದ ಬೆಳೆ ಬಲು ಸೋಂಪಾಗಿ ಬಂದು ಇಳುವರಿಯೂ ಹೆಚ್ಚಾಗಲಿದೆ.

ಮಿಶ್ರ ಬೆಳೆಯಿಂದ ಹೆಚ್ಚಿನ ಆದಾಯ : ಪರಮಾನಂದ ಬೆಳೆದಿರುವ ಕಬ್ಬು ಬೆಳೆಯಲ್ಲಿ ಅಲ್ಪಾವಧಿಯಲ್ಲಿ ಇಳುವರಿ ಕೊಡುವ ಟೊಮೋಟೊ‌ವನ್ನು ಮಿಶ್ರ ಬೆಳೆಯನ್ನಾಗಿ ಬೆಳೆದು ಆರ್ಥಿಕತೆ ಆದಾಯದ ಮೂಲ ಹೆಚ್ಚಿಸಿಕೊಂಡಿದ್ದಾರೆ. ಕಬ್ಬು ದೀರ್ಘಾವಧಿ ಬೆಳೆಯಾಗಿರುವ ಕಾರಣ ಕಬ್ಬು ನಾಟಿಯ ಮಧ್ಯೆ‌ ಟೊಮೊಟೊ‌ ಬೆಳೆದು ನಿತ್ಯದ‌‌ ಆರ್ಥಿಕ ಅವಶ್ಯಕತೆ ಪೂರೈಸಿಕೊಳ್ಳುತ್ತಾರೆ.

ಎರೆಹುಳು ಗೊಬ್ಬರ ಉತ್ಪಾದನೆ‌‌‌ ಕೇಂದ್ರ‌ : ಪರಮಾನಂದ ತಮ್ಮ‌ ಜಮೀನಿನಲ್ಲಿಯೇ ಎರೆಹುಳು ಗೊಬ್ಬರ ತಯಾರಿಕೆ‌‌‌ ಕೇಂದ್ರವನ್ನು ನಿರ್ಮಿಸಿಕೊಂಡಿದ್ದಾರೆ. ವರ್ಷಕ್ಕೆ‌ ಸರಿಸುಮಾರು ಒಂದು ಟನ್ ನಷ್ಟು ಗೊಬ್ಬರ ಉತ್ಪಾದಿಸುವ ಅವರು ತಮ್ಮ ಜಮೀನಿಗೆ ಬಳಕೆ‌‌ ಮಾಡಿ ಮಣ್ಣಿಮ ಫಲವತ್ತತೆಯನ್ನು ಹೆಚ್ಚಿಸುವತ್ತ ಹೆಚ್ಚಿನ‌ ಗಮನ ಹರಿಸಿ ಯಶಸ್ವಿಯಾಗಿದ್ದಾರೆ.

ಹೈನುಗಾರಿಕೆಗೆ ಒತ್ತು : ಕೃಷಿಯೊಂದಿಗೆ ಕೃಷಿಗೆ ಪೂರಕವಾದ ಚಟುವಟಿಕೆಯಲ್ಲಿ‌ ತೊಡಗಿಕೊಂಡು ಹಸು ಸಾಕಿಕೊಂಡಿದ್ದಾರೆ ಅವುಗಳಿಂದ ನಿತ್ಯ 20ಲೀಟರ್ ಹಾಲು‌‌ ಮಾರಾಟ ಮಾಡುತ್ತಾರೆ. ಸಣ್ಣ ಪ್ರಮಾಣದಲ್ಲಿ ಮೇಕೆ ಸಾಕಿ ಅಗತ್ಯಕ್ಕೆ ತಕ್ಕಾಗ ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳುತ್ತಿದ್ದಾರೆ.

– ಕೇವಲ‌ ರಸಗೊಬ್ಬರ ಬಳಳಕೆಯಿಂದ ಕೃಷಿ ಮಾಡುವುದರಿಂದ ಭೂಮಿ‌ ತನ್ನ ಸತ್ವವನ್ನು ಬಹುಬೇಗ ಕಳೆದುಕೊಳ್ಳುತ್ತದೆ. ಸಾವಯವ ಕೃಷಿಗೆ ಒತ್ತು ನೀಡುವುದರಿಂದ ಆರೋಗ್ಯಯುತ ಆಹಾರ ಪಡೆಯುವುದರೊಂದಿಗೆ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು.
– ಪರಮಾನಂದ ಜನವಾಡ ಮುಗಳಖೋಡ ರೈತ

– ಗೋವಿಂದಪ್ಪ ತಳವಾರ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next