Advertisement

ಬೆಳೆವಿಮೆಗೆ ಆಧಾರ ಲಿಂಕ್‌-ಮೊಬೈಲ್‌ ಆ್ಯಪ್‌ ಬೇಡ

12:51 PM Nov 01, 2017 | Team Udayavani |

ಹುಬ್ಬಳ್ಳಿ: ಕೃಷಿ ಬೆಳೆ ವಿಮೆಗೆ ಆಧಾರ ಲಿಂಕ್‌ ಹಾಗೂ ಮೊಬೈಲ್‌ ಆ್ಯಪ್‌ ಪದ್ಧತಿ ಬೇಡ, ಈ ಹಿಂದೆ ಇರುವ ಪದ್ಧತಿಯನ್ನೇ ಮುಂದುವರಿಸಬೇಕೆಂದು ಸ್ಥಳೀಯ ತಾಪಂ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಲಾಯಿತು. 

Advertisement

ಇಲ್ಲಿನ ಮಿನಿವಿಧಾನಸೌಧದ ತಾಪಂ ಸಭಾಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತಾಪಂ ಅಧ್ಯಕ್ಷೆ ಚನ್ನಮ್ಮ ಗೋರ್ಲ ಹಾಗೂ ಶಾಸಕ ಎನ್‌.ಎಚ್‌. ಕೋನರಡ್ಡಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಠರಾವು ಪಾಸು ಮಾಡಲಾಯಿತು. 

ಮೊಬೈಲ್‌ ಆ್ಯಪ್‌ ಹಾಗೂ ಆಧಾರ ಲಿಂಕ್‌ನಿಂದ ಹಲವಾರು ಸಮಸ್ಯೆ ಆಗುತ್ತಿದ್ದು, ಮೊಬೈಲ್‌ ಆ್ಯಪ್‌ ಇತ್ತೀಚೆಗೆ ಜಾರಿ ಮಾಡಿದ್ದಾರೆ. ಈಗಾಗಲೇ ಮಳೆ ಇಲ್ಲದೆ ಬರಗಾಲ ಆವರಿಸಿದ್ದು ಬಿತ್ತಿದ ಕಡಲೆ ಬೆಳೆ ಸಂಪೂರ್ಣ ಹಾಳಾಗಿದೆ. ಅದನ್ನು ತೆಗೆದು ಇದೀಗ ಗೋವಿನ ಜೋಳ, ಗೋಧಿ ಸೇರಿದಂತೆ ಇನ್ನಿತರ ಬೆಳೆ ಬಿತ್ತಲಾಗಿದೆ.

ಆದರೆ ಮೊಬೈಲ್‌ ಆ್ಯಪ್‌ ಮೂಲಕ ಇದೀಗ ಅಪ್‌ಡೆಟ್‌ ಮಾಡಲು ಹೇಳುತ್ತಿದ್ದಾರೆ. ಅದು ಹೇಗೆ ಸಾಧ್ಯ ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ಪ್ರಶ್ನಿಸಿದರು. ಹೊಸ ಪದ್ಧತಿಯಿಂದ ರೈತರಿಗೆ ಮೋಸವಾಗುತ್ತಿದ್ದು, ವಿಮೆ ಸಂಸ್ಥೆಯವರಿಗೆ ಲಾಭವಾಗಲಿದೆ. 

ಇದರಿಂದ ರೈತರಿಗೆ ಯಾವುದೇ ಬೆಳೆ ವಿಮೆ ಹಣ ಬರುವುದಿಲ್ಲ. ಇಂತಹ ಪದ್ಧತಿ ನಮಗೆ ಬೇಡ ಎಂದು ಸರ್ವಾನುಮತದಿಂದ ಠರಾವು ಪಾಸು ಮಾಡಲಾಯಿತು. ಇತ್ತೀಚೆಗೆ ನವಲಗುಂದದಲ್ಲಿ ಕಾರ್ಯಪಡೆ(ಟಾಸ್ಕ್ಫೋರ್ಸ್‌) ಸಭೆ ನಡೆಸಿ ತಾಲೂಕಿನಲ್ಲಿ ಆಗಿರುವ ಮಳೆ ಹಾನಿ ಸಮೀಕ್ಷೆ ನಡೆಸಿ ಅಂದಾಜು 4 ಕೋಟಿ ರೂ. ಹಾನಿಯಾದ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿದೆ.

Advertisement

ಆದರೆ ಇದುವರೆಗೂ ಹುಬ್ಬಳ್ಳಿ ತಾಲೂಕಿನಲ್ಲಿ ಒಂದೇ ಒಂದು ವರದಿ ಸಲ್ಲಿಸಿಲ್ಲ. ಇನ್ನು ಪರಿಹಾರ ಎಲ್ಲಿಂದ ಬರಬೇಕು ಎಂದು ಅಧಿಕಾರಿಗಳ ಕಾರ್ಯಕ್ಕೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಸೇರಿಕೊಂಡು ತಾಲೂಕಿನಲ್ಲಿ ಆಗಿರುವ ಹಾನಿ ಕುರಿತು ಸರ್ವೇ ನಡೆಸಿ ವರದಿ ನೀಡಬೇಕು ಎಂದು ಎಚ್ಚರಿಸಿದರು. 

ನೆರೆಯ ಗದಗ ಜಿಲ್ಲೆಯಲ್ಲಿ ಹಾಳಾದ ರಸ್ತೆಗಳ ಕುರಿತು ಸಲ್ಲಿಸಿದ ವರದಿಗೆ ಸರಕಾರ ಲೋಕೋಪಯೋಗಿ ರಸ್ತೆಗೆ 1 ಕಿಮೀಗೆ 1 ಲಕ್ಷ, ಜಿಪಂ ರಸ್ತೆಗಳಿಗೆ 60 ಸಾವಿರ ರೂ. ಅನುದಾನ ಬಿಡುಗಡೆ ಮಾಡಿದೆ. ಪಕ್ಕದ ಜಿಲ್ಲೆಯವರು ಪಡೆಯುತ್ತಾರೆ ಅಂದರೆ ನಮ್ಮವರಿಗೆ ಏನಾಗಿದೆ. ನಾವು ಕೂಡಾ ಸರಕಾರದಿಂದ ಸಿಗಬಹುದಾದ ಅನುದಾನದ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. 

ಗ್ರಾಮ ನೈರ್ಮಲ್ಯ-ಕುಡಿವ ನೀರು ಇಲಾಖೆ: ತಾಲೂಕಿನ ನವಲಗುಂದ ವಿಭಾಗ ಹಾಗೂ ಕುಂದಗೋಳ ವಿಭಾಗದಲ್ಲಿ ಒಟ್ಟು 22 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯಿದೆ. ಇವೆಲ್ಲವೂ ಸಣ್ಣ ಪುಟ್ಟ ಸಮಸ್ಯೆಗಳಾಗಿದ್ದು ಕೂಡಲೇ ಬಗೆಹರಿಸಲಾಗುವುದು. ಹುಬ್ಬಳ್ಳಿ ಸಮೀಪದ ಭಂಡಿವಾಡ ಗ್ರಾಮಕ್ಕೆ ಮಾತ್ರ ಇಂದಿಗೂ ಟ್ಯಾಂಕರ್‌ ಮೂಲಕವೇ ನೀರು ಸರಬರಾಜು ಮಾಡಲಾಗುತ್ತಿದೆ.

ತಾಲೂಕಿನ ಹಲವು ಗ್ರಾಮಗಳ ಆರ್‌ಒ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತು ದೂರುಗಳು ಬಂದಿದ್ದು, ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಇಇ ಎಂ.ಬಿ. ಗೌಡರ ಹೇಳಿದರು. ತೋಟಗಾರಿಕೆ, ಹೆಸ್ಕಾಂ, ಲೋಕೋಪಯೋಗಿ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ತಾಪಂ ಉಪಾಧ್ಯಕ್ಷ ಸರೋಜಾ ಅಳಗವಾಡಿ, ಸದಸ್ಯರಾದ ಫ‌ರ್ವೇಜ್‌ ಬ್ಯಾಹಟ್ಟಿ, ಬಸಪ್ಪ ಬೀರಣ್ಣವರ, ಕಲ್ಲಪ್ಪ ಹುಲ್ಲಗೇರಿ, ಫ‌ಕ್ಕೀರಪ್ಪ ಚಾಕಲಬ್ಬಿ, ಬಸವರಾಜ ಹೊಸಕಟ್ಟಿ ಇನ್ನಿತರರು ವಿವಿಧ ಸಮಸ್ಯೆ ಕುರಿತು ಮಾತನಾಡಿದರು. ಸದಸ್ಯರಾದ ಲಕ್ಷ್ಮೀ ಶಿವಳ್ಳಿ, ದೇವಪ್ಪ ಸವ್ವಾಸೆ, ದಾವಲಬ್ಬಿ ಮಿರ್ಜಾನವರ, ಪ್ರೇಮಾ ಕಡಪಟ್ಟಿ, ಗುರುಪಾದಪ್ಪ ಕಮಡೊಳ್ಳಿ, ಅಪರ ತಹಶೀಲ್ದಾರ್‌ ಪ್ರಕಾಶ ನಾಶಿ, ತಾಪಂ ಇಒ ಡಾ| ರಾಮಚಂದ್ರ ಹೊಸಮನಿ ಇತರರಿದ್ದರು. ಸಿ.ಎಚ್‌. ಅದರಗುಂಚಿ ಸಭೆ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next