Advertisement

ಪ್ರಕೃತಿ ವಿಸ್ಮಯಗಳ ನಡುಗಡ್ಡೆ ‘ನೇತ್ರಾಣಿ’

08:30 AM Feb 10, 2018 | Karthik A |

ಬೈಂದೂರು: ಪ್ರಕೃತಿ ವಿಸ್ಮಯಗಳಿಗೆ ನಮ್ಮಲ್ಲಿ ಕೊರತೆಯೇನೂ ಇಲ್ಲ. ಆದರೆ ಅವುಗಳು ಪ್ರವಾಸಿಗರಿಗೆ ಮಾಹಿತಿ ಅಲಭ್ಯತೆಯಿಂದ, ಮೂಲಸೌಕರ್ಯ ವಂಚಿತವಾಗಿ ಬಳಲುತ್ತಿವೆ. ಪ್ರವಾಸಿಗರಿಗೆ ಪ್ರಶಸ್ತವಾದ, ಆಕರ್ಷಕ ತಾಣ ಇಲ್ಲಿನ ಅರಬ್ಬಿ ಸಮುದ್ರದಲ್ಲಿರುವ ನೇತ್ರಾಣಿ ನಡುಗಡ್ಡೆ. ಭಟ್ಕಳ ಬಂದರಿನಿಂದ ಸುಮಾರು ಎರಡು ಗಂಟೆ (ಅಂದಾಜು 30 ಕಿ.ಮೀ. ದೂರ) ಸಾಗಿದಾಗ ನೇತ್ರಾಣಿ ಗುಡ್ಡ ಕಾಣಸಿಗುತ್ತದೆ. 

Advertisement

ಮೀನುಗಾರರ ಶಕ್ತಿಸ್ಥಳ
ಜಾತಿ ಧರ್ಮ ಭೇದಭಾವವಿಲ್ಲದೇ ನೇತ್ರಾಣಿ ಗುಡ್ಡಕ್ಕೆ ಆಗಮಿಸುವ ಜನ ಇಲ್ಲಿನ ಜಟ್ಟಿಗ ದೇವರನ್ನು ಪೂಜಿಸುತ್ತಾರೆ. ಎಲ್ಲ ಮೀನುಗಾರಿಕೆ ಬೋಟ್‌ ವತಿಯಿಂದ ವಿಶೇಷ ಪೂಜೆ ನಡೆಯುತ್ತದೆ. ಭಟ್ಕಳ ಬಂದರಿನಿಂದ ವರ್ಷಂಪ್ರತಿ ಇಲ್ಲಿಗೆ ಜನರನ್ನು ಕರೆದುಕೊಂಡು ಹೋಗುತ್ತಾರೆ. ಬೋಟ್‌ ಮಾಲಕರೇ ಊಟೋಪಚಾರ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ಹರಕೆಗಾಗಿ ಕುರಿ, ಕೋಳಿಗಳನ್ನು ಗುಡ್ಡದಲ್ಲಿ ಬಿಟ್ಟು ಬರಲಾಗುತ್ತದೆ. ಇಲ್ಲಿರುವ ಯಾವುದೇ ಪ್ರಾಣಿಗಳನ್ನು ಹಿಡಿದು ತರುವುದಿಲ್ಲ. ತಂದರೆ ಅಪಾಯ ಎಂಬ ನಂಬಿಕೆಯಿದೆ. ಜಟ್ಟಿಗ ದೇವಸ್ಥಾನದ ಪಕ್ಕದಲ್ಲಿ ಶಿಲುಬೆಯಿದೆ.ಇದಕ್ಕೂ ಸಹ ಪೂಜೆ ನಡೆಯುತ್ತದೆ. 


ಪ್ರವಾಸಿಗರಿಗೆ ಸೌಕರ್ಯವಿಲ್ಲ

ಅತಿ ವಿರಳವಾದ ಜಲಚರಗಳು, ಸಸ್ಯರಾಶಿ, ಮೀನಿನ ಪ್ರಬೇಧಗಳು ಇಲ್ಲಿ ಕಾಣಸಿಗುತ್ತವೆ. ಈಗಾಗಲೇ ಇಲ್ಲಿ ಉತ್ತರ ಕನ್ನಡ ಪ್ರವಾಸೋದ್ಯಮ ಇಲಾಖೆ ನೇತ್ರಾಣಿ ಎಡ್ವೆಂಚರ್‌ ಮೂಲಕ ಸ್ಕೂಬಾ ಡ್ರೈವ್‌ ವ್ಯವಸ್ಥೆ ಕಲ್ಪಿಸಿದೆ. ಆದರೆ ಗುಡ್ಡಕ್ಕೆ ಬರುವವರಿಗೆ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಅನುಮತಿಯನ್ನೂ ನೀಡದೇ ಇರುವುದರಿಂದ ಪ್ರವಾಸಿಗರಿಂದ ಗುಡ್ಡ ದೂರವುಳಿದಿದೆ. ಈ ಭಾಗದಲ್ಲಿ ನೌಕಾಪಡೆ ಕೆಲವೊಮ್ಮೆ ಅಭ್ಯಾಸವನ್ನೂ ನಡೆಸುವುದರಿಂದ ಅಪಾಯಕಾರಿಯೂ ಹೌದು. ಈ ಬಗ್ಗೆ ಹಿಂದೆಯೇ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಕೇಂದ್ರದ ಕರಾವಳಿ ಮೀಸಲು ಪಡೆ ಹಾಗೂ ನೇವಿ ಇಲ್ಲಿನ ಚಲನವಲನಗಳ ಬಗ್ಗೆ ನಿಗಾ ವಹಿಸುತ್ತಿವೆ.

ಪ್ರವಾಸೋದ್ಯಮ ಇಲಾಖೆ ನೇತ್ರಾಣಿ ಗುಡ್ಡವನ್ನು ಪ್ರವಾಸಿ ತಾಣವನ್ನಾಗಿಸುವತ್ತ ಹೆಚ್ಚಿನ ಯೋಜನೆ ರೂಪಿಸಬೇಕು. ಇಲ್ಲಿನ ಪ್ರಕೃತಿ ವೈವಿಧ್ಯ ರಕ್ಷಣೆಗೆ ಸರಕಾರ ಮುತುವರ್ಜಿ ವಹಿಸಬೇಕು.  
– ಡಾ| ನಾಗರಾಜ್‌ ಮರವಂತೆ, ಪ್ರವಾಸಿಗರು

ನೇತ್ರಾಣಿ ಗುಡ್ಡ ಉತ್ತಮ ತಾಣ. ಪ್ರವಾಸಿಗರಿಗೆ ಮೆಚ್ಚುಗೆಯಾಗಬಲ್ಲದು. ಇದು ಮೀನುಗಾರರಿಗೆ ದಿಕ್ಕು ತೋರಿಸುವ ಪ್ರಮುಖ ಗುಡ್ಡವೂ ಹೌದು. 
– ಹರಿಶ್ಚಂದ್ರ ನಾಯ್ಕ, ಪಾಲುದಾರರು, ಸಮುದ್ರರಾಜ ಬೋಟ್‌ ಭಟ್ಕಳ

Advertisement

– ಅರುಣ ಕುಮಾರ್‌ ಶಿರೂರು



Advertisement

Udayavani is now on Telegram. Click here to join our channel and stay updated with the latest news.

Next