Advertisement

ಹೆಣ್ಣು ಹುಲಿಯ ವೀರಾವೇಷ!

04:41 PM Dec 09, 2017 | |

ಕನ್ನಡ ಚಿತ್ರರಂಗದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ವಾರದಿಂದ ವಾರಕ್ಕೆ ಹೊಸ ಹೊಸ ಹುಲಿಗಳ ಬರುತ್ತಲೇ ಇವೆ. ಚಿತ್ರರಂಗದಲ್ಲಿರುವ ಹುಲಿಗಳ ಸಂಖ್ಯೆಯನ್ನು ನೋಡಿ ಕಾಡಿನ ಹುಲಿಗಳು ಬೆಚ್ಚಿ ಬೀಳದಿದ್ದರೆ ಸಾಕು. ಆ ಮಟ್ಟಿಗೆ ತೆರೆಮೇಲೆ “ನಾನು ಹುಲಿ ಕಣೋ, ಟೈಗರ್‌ ಕಣೋ’ ಎಂದು ಅಬ್ಬರಿಸುತ್ತಲೇ ಇದ್ದಾರೆ. ಈ ವಾರ ತೆರೆಕಂಡ “ಸ್ಮಗ್ಲರ್‌’ ಚಿತ್ರದಲ್ಲೂ ನಿಮಗೊಂದು ಹೆಣ್ಣು ಹುಲಿ ಸಿಗುತ್ತದೆ. ಅದು ಪ್ರಿಯಾ ಹಾಸನ್‌.

Advertisement

ಈ ಚಿತ್ರದಲ್ಲಿ ಪ್ರಿಯಾ ಹಾಸನ್‌ ಅದೆಷ್ಟು ಬಾರಿ, “ನಾನು ಹುಲಿ ಕಣೋ, ಈ ಹುಲಿಯನ್ನು ಟಚ್‌ ಮಾಡೋಕೂ ಆಗಲ್ಲ’ ಎಂದು ಹೇಳಿದ್ದಾರೋ ಲೆಕ್ಕವಿಲ್ಲ. ಅವರ ಅಬ್ಬರವನ್ನು ತೆರೆಮೇಲೆ ನೋಡುವ ಮನಸ್ಸು ನೀವು ಮಾಡಬೇಕಷ್ಟೇ. “ಹುಲಿ’ ಎಂದು ಹೇಳಿದ ಮೇಲೆ ಆ ಆವೇಶ, ಧೈರ್ಯ ಪ್ರದರ್ಶನ ಮಾಡದಿದ್ದರೆ ಹೇಗೆ ಹೇಳಿ? ಪ್ರಿಯಾ ಹಾಸನ್‌ ಅದರಲ್ಲೂ ಹಿಂದೆ ಬಿದ್ದಿಲ್ಲ. ಒಂದು ಕೈಯಲ್ಲಿ ಪಿಸ್ತೂಲಿನಿಂದ ಶೂಟ್‌ ಮಾಡಿಕೊಂಡು, ಅದರಿಂದ ಬರುವ ಬುಲೆಟ್‌ ಅನ್ನು ಮತ್ತೂಂದು ಕೈಯಲ್ಲಿ ಹಿಡಿಯುತ್ತಾರೆ.

ಆ ಮಟ್ಟಿನ “ಪವರ್‌’ಫ‌ುಲ್‌ ವ್ಯಕ್ತಿ ಅವರು. ಇನ್ನೊಂದು ಸಂದರ್ಭದಲ್ಲಿ ಮೈಯೊಳಗೆ ಆರು ಬುಲೆಟ್‌ ಹೊಕ್ಕರೂ, “ಈ ಬುಲೆಟ್‌ಗೆಲ್ಲಾ ನಾನು ಸಾಯೋಲ್ಲ’ ಎಂದು ಎದ್ದೇ ಕೂರುತ್ತಾರೆ. ಮತ್ತೂಂದು ದೃಶ್ಯದಲ್ಲಿ ವಿಲನ್‌ಗಳು ಅಟ್ಯಾಕ್‌ ಮಾಡುವಾಗ ಪಕ್ಕದಲ್ಲಿದ್ದ ಬೋರ್‌ವೆಲ್‌ನ ಹ್ಯಾಂಡ್‌ನೆ ಎತ್ತಿ ಹೊಡೆಯುತ್ತಾರೆ. ಈ ತರಹದ ತೆಲುಗು ರೇಂಜ್‌ನ ಸಾಹಸ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕಾದರೆ ನೀವು “ಸ್ಮಗ್ಲರ್‌’ ನೋಡಬೇಕು.

ಇಡೀ ಸಿನಿಮಾದುದ್ದಕ್ಕೂ ನಿಮಗೆ ಯರ್ರಾಬಿರ್ರಿ ಫೈಟ್‌ಗಳು, ಸಿಟಿ ಬಸ್‌ನಂತೆ ಓಡಾಡುವ ಫ್ಲೈಟ್‌ಗಳು, “ಲೋಕಲ್‌’ ಬ್ಯಾಂಕಾಕ್‌, ಆಟಿಕೆಗಳಂತೆ ಅಲ್ಲಲ್ಲಿ ಪಿಸ್ತೂಲ್‌ಗ‌ಳು ಕಾಣಸಿಗುತ್ತವೆ. “ಸ್ಮಗ್ಲರ್‌’ ಅನ್ನು ಸಖತ್‌ ರಗಡ್‌ ಆಗಿ ಚಿತ್ರಿಸಲು ಪ್ರಿಯಾ ಹಾಸನ್‌ ಸಾಕಷ್ಟು ಶ್ರಮಪಟ್ಟಿದ್ದಾರೆ. ಸಿನಿಮಾವನ್ನು ಶ್ರೀಮಂತಗೊಳಿಸಬೇಕು, ಅದ್ಧೂರಿಯಾಗಿ ತೋರಿಸಬೇಕೆಂಬ ಅವರ ಸಿನಿಮಾ ಪ್ರೀತಿಯ ಪರಿಣಾಮವಾಗಿ ಚಿತ್ರದಲ್ಲಿ ನಿಮಗೆ ಬೇರೆ ಭಾಷೆಯ ಚಿತ್ರಗಳ ಸಾಕಷ್ಟು ಸ್ಟಾಕ್‌ ಶಾಟ್‌ಗಳು ಕಾಣಸಿಗುತ್ತವೆ.

ಹೀಗೆ ಯಾವುದೋ ಚಿತ್ರಗಳ ದೃಶ್ಯಗಳನ್ನು ಅಲ್ಲಲ್ಲಿ ಜೋಡಿಸಿರೋದು ಕೆಲವೊಮ್ಮೆ ಅಭಾಸಕ್ಕೂ ಕಾರಣವಾಗಿದೆ. ಇದು ಸೈರಸ್‌ ಎಂಬ ಇಂಟರ್‌ನ್ಯಾಶನಲ್‌ ಸ್ಮಗ್ಲರ್‌ವೊಬ್ಬಳ ಕಥೆಯಾದ್ದರಿಂದ ಚಿತ್ರ ಬ್ಯಾಂಕಾಕ್‌ ಹಾಗೂ ಭಾರತದಲ್ಲಿ ನಡೆಯುತ್ತದೆ. ಆದರೆ, ಬೆಂಗಳೂರಿನಲ್ಲೇ ಬ್ಯಾಂಕಾಕ್‌ ತೋರಿಸುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಕಥೆಯ ಬಗ್ಗೆ ಇಲ್ಲಿ ಹೇಳುವಂಥದ್ದೇನಿಲ್ಲ. ಬಾಲ್ಯದಲ್ಲೇ ಡಾನ್‌ ಆಗುವ ಕನಸಿನ ಹುಡುಗಿಗೆ ದೇವರ ಕಿರೀಟ ಕದ್ದ ಆರೋಪ ಬರುತ್ತದೆ.

Advertisement

ಊರು ಬಿಟ್ಟ ಆಕೆ ಸೈರಸ್‌ ಎಂಬ ಡಾನ್‌ ಆಗುತ್ತಾಳೆ. ಮುಂದಿನದ್ದು ಐದು ಸಾವಿರ ಕೋಟಿ ಮೌಲ್ಯದ ಬಂಗಾರವನ್ನು ವಿದೇಶದಿಂದ ಭಾರತಕ್ಕೆ ತಲುಪಿಸುವ ಡೀಲ್‌. ಆ ಡೀಲ್‌ ಒಪ್ಪಿಕೊಳ್ಳುವ ಸೈರಸ್‌ಗೆ ಎದುರಾಗುವ ಕಷ್ಟ, ಆಕೆಯ ಗೇಮ್‌ಪ್ಲಾನ್‌ ಮೂಲಕ ಸಿನಿಮಾ ಸಾಗುತ್ತದೆ. ಹೇಗೆ ಇದು ಆ್ಯಕ್ಷನ್‌ ಸಿನಿಮಾವೋ ಅಷ್ಟೇ ಕಾಮಿಡಿಯೂ ಇದೆ. ನಗುವ ದೊಡ್ಡ ಮನಸ್ಸು ನೀವು ಮಾಡಬೇಕಷ್ಟೇ. ಚಿತ್ರದಲ್ಲಿ ಆಗಾಗ ಒಂದಷ್ಟು ಪಾತ್ರಗಳು ಬರುತ್ತವೆ.

ವಿಚಿತ್ರ ಮ್ಯಾನರೀಸಂನಿಂದ ಕಾಮಿಡಿ ಮಾಡುತ್ತಾರೆ. ಚಿತ್ರದಲ್ಲಿ ಸಿಬಿಐ ಆಫೀಸರ್‌ಗಳು ಕೂಡಾ ಇದ್ದಾರೆ. ಅವರೆಲ್ಲರೂ ಎಷ್ಟು ಖಡಕ್‌ ಎಂದರೆ ಈ ಸಿಬಿಐ ಆಫೀಸರ್‌ಗಳು ಸ್ಮಗ್ಲರ್‌ಗೆ ಶಾಕ್‌ ಟ್ರೀಟ್‌ಮೆಂಟ್‌ ಕೊಟ್ಟು, ಹಣೆಗೆ ಗನ್‌ ಇಟ್ಟು ಬಾಯಿ ಬಿಡಿಸುತ್ತಾರೆ. ಸ್ಮಗ್ಲರ್‌ ಸೈರಸ್‌ ನಿಮಗೆ ಕೆಲವೊಮ್ಮೆ ವಿಶೇಷ ಶಕ್ತಿ ಇರುವ ಮಾಯಾವಿಯಂತೆ ಕಾಣುತ್ತಾರೆ.

ಒಮ್ಮೆ ಪೊಲೀಸ್‌ ಸ್ಟೇಷನ್‌ನಲ್ಲಿ ಡಾನ್‌ನಂತೆ, ಇನ್ನೊಮ್ಮೆ ಯಾವುದೋ ಅಡ್ಡದಲ್ಲಿ, ಮತ್ತೂಮ್ಮೆ ಅಗ್ರಹಾರದಲ್ಲಿ … ಹೀಗೆ ಏನು ನಡೆಯುತ್ತಿದೆ ಎಂದು ನೀವು ಕನ್‌ಫ್ಯೂಸ್‌ ಆಗುವ ಮಟ್ಟಕ್ಕೆ “ಸೈರಸ್‌’ ಪವರ್‌ಫ‌ುಲ್‌ ಲೇಡಿ. ಪ್ರಿಯಾ ಹಾಸನ್‌ ಅವರಿಗೆ ಆ್ಯಕ್ಷನ್‌ ಎಂದರೆ ತುಂಬಾ ಇಷ್ಟ ಎಂಬುದನ್ನು ಈ ಹಿಂದೆಯೇ ಸಾಬೀತು ಮಾಡಿದ್ದಾರೆ. ಈಗ ಇಲ್ಲೂ ಅದೇ ಮುಂದುವರೆದಿದೆ.

ಏಕಕಾಲದಲ್ಲಿ ಅವರು ಅದೆಷ್ಟು ಮಂದಿಯನ್ನು ಹೊಡೆದುರುಳಿಸುತ್ತಾರೋ ಗೊತ್ತಿಲ್ಲ. ಆ ಮಟ್ಟಿಗೆ ಫೈಟ್‌ ಮಾಡಿದ್ದಾರೆ. ಈ ಬಾರಿಯ ಒಂದು ವಿಶೇಷವೆಂದರೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂಗಿಯ ಪಾತ್ರದಲ್ಲೂ ನಟಿಸಿದ್ದಾರೆ. ಫ್ರೆಮ್‌ ಟು ಫ್ರೆಮ್‌ ಪ್ರಿಯಾ ಹಾಸನ್‌ ಕಾಣಿಸಿಕೊಂಡು “ಧೂಳೆ’ಬ್ಬಿಸಿದ್ದಾರೆ. ಇನ್ನು, ಚಿತ್ರದಲ್ಲಿ ತುಂಬಾ ಕಲಾವಿದರು ನಟಿಸಿದ್ದಾರೆ. ಆದರೆ, ಅವರೆಲ್ಲರಿಗಿಂತ ತೆರೆ ಆವರಿಸಿಕೊಂಡಿರೋದು ಪ್ರಿಯಾ ಹಾಸನ್‌. 

ಚಿತ್ರ: ಸ್ಮಗ್ಲರ್‌
ನಿರ್ಮಾಣ: ಗೌರಮ್ಮ, ಪ್ರಿಯಾ ಹಾಸನ್‌
ನಿರ್ದೇಶನ: ಪ್ರಿಯಾ ಹಾಸನ್‌ 
ತಾರಾಗಣ: ಪ್ರಿಯಾ ಹಾಸನ್‌, ಸುಮನ್‌, ಮಿತ್ರ, ರವಿ ಕಾಳೆ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next