Advertisement

ಹೆಣ್ಮಕ್ಳೆ ಸ್ಟ್ರಾಂಗು ಗುರು!

05:36 PM Feb 23, 2018 | |

ಗಂಡಂದಿರು ಮನೆಬಿಟ್ಟ ಪರ ಊರಿನತ್ತ ಮುಖ ಮಾಡುತ್ತಿದ್ದಂತೆ ಪತ್ನಿಯರ ಗೆಟಪ್‌ ಬದಲಾಗುತ್ತದೆ. ಹೋಮ್ಲಿಯಾಗಿದ್ದವರ ಪಕ್ಕಾ ಹಾಟ್‌ ಗೆಟಪ್‌ಗೆ ಬದಲಾಗುತ್ತಾರೆ. ಮನೆಬಿಟ್ಟು ಹೊರಬರುತ್ತಾರೆ. ಓಪನ್‌ ಜೀಪ್‌ನಲ್ಲಿ “ಸಮಾನ ಮನಸ್ಕ’ ಹೆಂಡ್ತಿಯರ ಮೋಜು ಮಸ್ತಿ ಮಾಡುತ್ತಾ ತೋಟದ ಮನೆ ಸೇರುತ್ತಾರೆ. ಅಲ್ಲಿ ಅವರದ್ದೇ ಲೋಕ. ಬಾಟಲುಗಳ ಸದ್ದು, ಫ‌ಸ್ಟ್‌ನೈಟ್‌ ಸ್ಟೋರಿಗಳು ಜೋರಾಗಿಯೇ ಕೇಳಿಬರುತ್ತವೆ.

Advertisement

ಈ ನಡುವೆಯೇ ಒಂದೊಂದೇ ಘಟನೆಗಳು ನಡೆಯುತ್ತಾ ಹೋಗುತ್ತದೆ. ಏನಾಗುತ್ತಿದೆ, ಯಾರಿಂದ ಇವೆಲ್ಲಾ ನಡೆಯುತ್ತಿದೆ ಎಂಬ ಅಂಶ ತಿಳಿಯಬೇಕಾದರೆ ನೀವು “ಗಂಡ ಊರಿಗೆ ಹೋದಾಗ’ ಸಿನಿಮಾ ನೋಡಿ. ಚಿತ್ರದ ಟೈಟಲ್‌ ಹೇಳಿದಾಗ ಏನು ಹೇಳಿರಬಹುದು, ಅಶ್ಲೀಲತೆ ಇರಬಹುದಾ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದರೆ, ಚಿತ್ರದಲ್ಲಿ ಅಶ್ಲೀಲ ಅಥವಾ ಮುಜುಗರ ತರುವಂತಹ ದೃಶ್ಯಗಳೇನಿಲ್ಲ.

ಆದರೆ, ಡಬಲ್‌ ಮೀನಿಂಗ್‌ ಮಾತುಗಳಿಗೇನು ಕೊರತೆಯಿಲ್ಲ. ಹೆಣ್ಣು ಮಕ್ಕಳು ಒಟ್ಟಿಗೆ ಸೇರಿಕೊಂಡು ಬಿಂದಾಸ್‌ ಆಗಿ ಮಾತನಾಡುವ ದೃಶ್ಯಗಳು, ಅವರವರ ಫ‌ಸ್ಟ್‌ನೈಟ್‌ ವಿವರಿಸುವ ಸಂದರ್ಭಗಳ ಮೂಲಕ ಪಡ್ಡೆಗಳನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸಾಯಿಕೃಷ್ಣ. ಹಾಗಾಗಿ, ಇಲ್ಲಿ ಕಥೆಯ ಹಂಗುಬಿಟ್ಟು ಸೀಟಿಗೆ ಒರಗಬಹುದು. ನಿರ್ದೇಶಕ ಸಾಯಿಕೃಷ್ಣ ಅವರು ಮಾಡಿಕೊಂಡಿರುವ ಒನ್‌ಲೈನ್‌ ಕಥೆಯಲ್ಲಿ ಹೇಳಿಕೊಳ್ಳುವಂತಹ ಅದ್ಭುತ ಅಂಶಗಳೇನೂ ಇಲ್ಲ.

ಅದೇ ಕಾರಣಕ್ಕಾಗಿ ಅವರು ಫ‌ನ್ನಿ ಸನ್ನಿವೇಶಗಳ ಮೂಲಕ ಬಹುತೇಕ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹಾಗಾಗಿ, ಇಲ್ಲಿ ಹೆಚ್ಚಿನದ್ದೇನನ್ನೂ ನೀವು ನಿರೀಕ್ಷಿಸುವಂತಿಲ್ಲ. ಇಲ್ಲಿ ಹೆಣ್ಮಕ್ಳು ತೆಲುಗು ಸಿನಿಮಾಗಳ ರೇಂಜ್‌ಗೆ ಫೈಟ್‌ ಮಾಡೋದನ್ನು ನೀವು ನೋಡಬಹುದು. ಬಹುತೇಕ ಸಿನಿಮಾವನ್ನು ಒಂದು ಮನೆಯೊಳಗೆ ಮುಗಿಸಿದ್ದಾರೆ. ಆದರೆ, ಸಿನಿಮಾ ಸೀರಿಯಸ್‌ ಆಗುತ್ತಾ ಸಾಗೋದು ದ್ವಿತೀಯಾರ್ಧದಲ್ಲಿ.

ಇಲ್ಲಿ ನಿರ್ದೇಶಕರು ಹಾರರ್‌ ಸಿನಿಮಾದ ಫೀಲ್‌ ಕೊಟ್ಟಿದ್ದಾರೆ. ಹೆಣ್ಮಕ್ಳ ತಂಡಕ್ಕೆ ದೆವ್ವ ಸೇರಿಕೊಂಡಿತಾ ಎಂಬ ಸಂದೇಹ ಬರುವ ಮಟ್ಟಕ್ಕೆ ಅವರು ಹಿನ್ನೆಲೆ ಸಂಗೀತ, ಮಬ್ಬು ಬೆಳಕನ್ನು ಬಳಸಿಕೊಂಡಿದ್ದಾರೆ. ಸಾಮಾನ್ಯವಾಗಿ ಒಂಟಿ ಮನೆ, ಪಾರ್ಟಿ, ಕೊಲೆ ಎಂದಾಗ ಸಹಜವಾಗಿಯೇ ದೆವ್ವದ ಕಾಟ ಅಥವಾ ಇನ್ಯಾರಧ್ದೋ ಕೈವಾಡವಾಗಿ ಸಿನಿಮಾಗಳು ಮುಕ್ತಾಯ ಕಾಣುತ್ತವೆ.

Advertisement

ಆರಂಭದಲ್ಲಿ “ಗಂಡ ಊರಿಗೆ ಹೋದಾಗ’ ಚಿತ್ರದ ಬಗ್ಗೆಯೂ ಇದೇ ಭಾವನೆ ಬರುತ್ತದೆ. ಆದರೆ, ಈ ಹಾರರ್‌ ಫೀಲ್‌ ಹೆಚ್ಚು ಒತ್ತು ಇರೋದಿಲ್ಲ. ಹಾಗೆ ನೋಡಿದರೆ ನಿರ್ದೇಶಕರು ಮಾಡಿಕೊಂಡು ಒನ್‌ಲೈನ್‌ ಚೆನ್ನಾಗಿದೆ. ಗೆಳೆತಿಯೊಬ್ಬಳ ಸಂಸಾರ ಸರಿಮಾಡಲು ಎಲ್ಲರೂ ಹೇಗೆ ಒಂದಾಗುತ್ತಾರೆ, ಏನೆಲ್ಲಾ ಪ್ಲ್ಯಾನ್‌ ಮಾಡುತ್ತಾರೆ ಎಂಬ ಅಂಶ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆದರೆ, ಆರಂಭದಿಂದ ಕೊನೆವರೆಗೆ ಮೋಜು, ಮಸ್ತಿ, ಹಾರರ್‌ ಫೀಲ್‌ನಲ್ಲೇ ಸಾಗುವ ಸಿನಿಮಾದ ನಿಜವಾದ ಟ್ವಿಸ್ಟ್‌ ಕೊನೆಯಲ್ಲಿ ತೆರೆದುಕೊಳ್ಳುತ್ತದೆ ಮತ್ತು ಒಂದು ಹಂತಕ್ಕೆ ಅದು ಇಷ್ಟವಾಗುತ್ತದೆ ಕೂಡಾ. ಚಿತ್ರದಲ್ಲಿ ಸಿಂಧು ರಾವ್‌,  ರಾಧಿಕಾ ರಾಮ್‌, ಅನು ಗೌಡ, ಶಾಲಿನಿ, ಸ್ವಪ್ನ ನಟಿಸಿದ್ದು, ಎಲ್ಲರೂ ಬೋಲ್ಡ್‌ ಆಗಿ ನಟಿಸಿದ್ದಾರೆ. ಉಳಿದಂತೆ ವಿಸಿಎನ್‌ ಮಂಜುನಾಥ್‌ ಸೇರಿದಂತೆ ಚಿತ್ರದಲ್ಲಿ ನಟಿಸಿದವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. 

ಚಿತ್ರ: ಗಂಡ ಊರಿಗೆ ಹೋದಾಗ
ನಿರ್ಮಾಣ: ಎಸ್‌ಬಿಎಲ್‌ ಎಂಟರ್‌ಪ್ರೈಸಸ್‌
ನಿರ್ದೇಶನ: ಸಾಯಿಕೃಷ್ಣ
ತಾರಾಗಣ: ಸಿಂಧು ರಾವ್‌, ರಾಧಿಕಾ ರಾಮ್‌, ಅನು ಗೌಡ, ಶಾಲಿನಿ, ಸ್ವಪ್ನ, ವಿಸಿಎನ್‌ ಮಂಜುನಾಥ್‌ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next