ಉದ್ಯಾವರ ಜಯಕುಮಾರ್ ಸ್ತ್ರೀ ಪಾತ್ರಧಾರಿಯಾಗಿ ಹೆಸರು ಮಾಡಿದವರು.ಧರ್ಮಸ್ಥಳ, ಸುರತ್ಕಲ್, ಕದ್ರಿ, ಸುಂಕದಕಟ್ಟೆ, ಎಡನೀರು, ಬಪ್ಪನಾಡು, ಸಾಲಿಗ್ರಾಮ, ಸೌಕೂರು, ಮಾರಣಕಟ್ಟೆ ಮೇಳಗಳಲ್ಲಿ ತಿರುಗಾಟ ಮಾಡಿದ ಇವರು ತೆಂಕು ಹಾಗೂ ಬಡಗುತಿಟ್ಟಿನ ಸಾಂಪ್ರದಾಯಿಕ ಸ್ತ್ರೀಪಾತ್ರಧಾರಿ. ಸುಮಾರು ನಲ್ವತ್ತು ವರುಷಗಳಿಗಿಂತಲೂ ಹೆಚ್ಚಿನ ಕಾಲ ಕಲಾ ಸೇವೆ ಮಾಡಿದ ಜಯಕುಮಾರ್ ಕಳೆದ ಕೆಲವು ವರುಷಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಅವರ ತಂದೆ ಉದ್ಯಾವರ ಬಸವ ಗಾಣಿಗ, ತಾಯಿ ಲಕ್ಷ್ಮಿಯಮ್ಮ. ಜನಿಸಿದ್ದು ಹಾರಾಡಿಯಲ್ಲಿ ಮಾರ್ಚ್ 5, 1952ರಂದು. ಪ್ರಾಥಮಿಕ ಶಿಕ್ಷಣ ಪಡೆದು ಜಯಕುಮಾರ್ ಧರ್ಮಸ್ಥಳ ಯಕ್ಷಗಾನ ಕೇಂದ್ರ ಸೇರಿದರು. ಕುರಿಯ ವಿಠಲ ಶಾಸ್ತ್ರಿ ಹಾಗೂ ಪಡ್ರೆ ಚಂದು ಅವರ ಶಿಷ್ಯರಾಗಿ ಕಲೆ ಅಭ್ಯಾಸ ಮಾಡಿದ ಇವರಿಗೆ ಬಡಗಿನ ನಾಟ್ಯ ಕಲಿಸಿದವರು ಗುರು ವೀರಭದ್ರ ನಾಯಕರು. ಯಕ್ಷಗಾನ ಇವರಿಗೆ ಪೂರ್ವಿಕರ ಬಳುವಳಿ. ಅಜ್ಜ ಹಾರಾಡಿ ಕುಷ್ಟ ಗಾಣಿಗರು. ಆದುದರಿಂದ ಹಾರಾಡಿ ಶೈಲಿ ಇವರ ರಕ್ತದಲ್ಲೇ ಹರಿದು ಬಂತು. ಗುರು ವೀರಭದ್ರ ನಾಯಕರ ಶಿಷ್ಯನಾಗಿ ಮಟಪಾಡಿ ಶೈಲಿಯನ್ನೂ ಕಲಿಯುವಂತಾಯಿತು. ಇವರ ತಂದೆ ಉದ್ಯಾವರ ಬಸವ ಗಾಣಿಗರು ತೆಂಕುತಿಟ್ಟಿನ ಪ್ರಸಿದ್ಧ ವೇಷಧಾರಿ. ಸುರತ್ಕಲ್ ಮೇಳದಲ್ಲೂ ಹಿರಿಯ ದಿಗ್ಗಜರ ಒಡನಾಡಿಯಾಗಿ ಸುದೀರ್ಘ ಕಾಲ ತಿರುಗಾಟ ಮಾಡಿದವರು. ಹೀಗಾಗಿ ತೆಂಕು ಮತ್ತು ಬಡಗಿನ ಆನುವಂಶಿಕ ಹಿನ್ನೆಲೆಯಿರುವ ಜಯಕುಮಾರ್ ಉಭಯ ತಿಟ್ಟುಗಳಲ್ಲೂ ಪ್ರತಿಭೆ ಮೆರೆದರು.
ಧರ್ಮಸ್ಥಳ ಮೇಳದಲ್ಲಿ ಕುಂಬ್ಳೆ ಸುಂದರ ರಾವ್ ಜತೆ ಇವರ ಜೋಡಿ ಪಾತ್ರಗಳನ್ನು ಕಲಾಭಿಮಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿ, ಶ್ರೀ ದೇವೀ ಮಹಾತ್ಮೆ ಪ್ರಸಂಗದ ಶ್ರೀ ದೇವಿ, ಅಂಬೆ, ದಾಕ್ಷಾಯಣಿ…ಹೀಗೆ ಪೌರಾಣಿಕ ಪ್ರಸಂಗಗಳ ಎಲ್ಲಾ ವಿಧದ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದರು. ಜೊತೆಗೆ ಸಾತ್ವಿಕ ಪುಂಡು ವೇಷಗಳನ್ನೂ ಮಾಡಿ ಸೈ ಎನಿಸಿಕೊಂಡರು.
ಸ್ಪಷ್ಟ ಮಾತುಗಾರಿಕೆ, ಉತ್ತಮ ಸ್ವರ, ಲಾಲಿತ್ಯಪೂರ್ಣ ಕುಣಿತ, ಒಪ್ಪ ಓರಣವಾದ ಅಂಗ ಸೌಷ್ಟವ ಮುಂತಾದ ಉತ್ತಮ ಅಂಶಗಳಿಂದ ಯಕ್ಷಗಾನ ರಸಿಕರ ಮನಸೂರೆಗೊಂಡ ಜಯಕುಮಾರ್ ಚೌಕಿಯ ಒಳಗೂ ಕಲಾವಿದರ ಅಚ್ಚುಮೆಚ್ಚಿನ ಒಡನಾಡಿ. ಸುಸಂಸ್ಕೃತ, ಸುಭಗ, ಸ್ನೇಹಶೀಲ, ಪರೋಪಕಾರಿ, ವಿನಯಶಾಲಿ.
ನಿಜಜೀವನದಲ್ಲಿ ಅವರು ತೀರಾ ಬಡವ. ಬದುಕಿನ ಎಲ್ಲಾ ಬವಣೆಗಳನ್ನು ಮರೆತು ರಂಗಸ್ಥಳದ ಪಾತ್ರಗಳಲ್ಲಿ ತನ್ಮಯರಾಗುತ್ತಿದ್ದ ಜಯಕುಮಾರ್ ಅನಿರೀಕ್ಷಿತವಾಗಿ ಅನಾರೋಗ್ಯ ಪೀಡಿತರಾಗಿ ಗೆಜ್ಜೆ ಕಟ್ಟಲಾರದೆ ಚಡಪಡಿಸುತ್ತಿದ್ದ ನತದೃಷ್ಟ. ಮನೆಯ ಎಲ್ಲಾ ಹೊಣೆಯನ್ನು ಹೊತ್ತು ತಂದೆ ತಾಯಿಗಳಿಗೆ ಆಧಾರವಾಗಿ ನಿಂತು, ಯೌವನದಿಂದ ಪುಟಿಯುತ್ತಿದ್ದ ಏಕೈಕ ಪುತ್ರನನ್ನು ಕಳೆದುಕೊಂಡ ದುರ್ದೈವಿ.
ಕೆಲವು ವರುಷಗಳಿಂದ ಹೊಂಚುತ್ತಿದ್ದ ಯಮ ಕೊನೆಗೂ ಕರೆದೊಯ್ದ. ಇವರ ಪತ್ನಿ ವಾರಿಜ ಪಂಚಾಯತ್ ಸದಸ್ಯೆ. ಸಾಮಾಜಿಕ ಕಾರ್ಯಕರ್ತೆ. ಮಗಳೊಬ್ಬಳಿಗೆ ಮದುವೆಯಾಗಿದೆ. ಇನ್ನೋರ್ವ ಮಗಳು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿನಿ. ಬಾಲ್ಯದಲ್ಲೇ ಬಣ್ಣದ ಮೋಹಕ್ಕೆ ಮರುಳಾಗಿ ಬದುಕಿಗೆ ಭದ್ರತೆಯಿಲ್ಲದೆ ಕಲಾ ಜೀವನವನ್ನು ಸ್ವೀಕರಿಸಿದ ಉದ್ಯಾವರ ಜಯಕುಮಾರ್ ದಡ ಸೇರುವ ಮುನ್ನವೇ ವಿಧಿಯ ಪ್ರಚಂಡ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಆತನಿಗೆ ಕರುಣೆ ಇಲ್ಲವಲ್ಲಾ? ನಾವೆಲ್ಲರೂ ವಿಧಿಯ ಮುಂದೆ ಅಸಹಾಯಕರು. ಕಂಬನಿ ಮಿಡಿಯುವುದಷ್ಟೇ ನಮ್ಮಿಂದ ಸಾಧ್ಯ. ಕಲೆಗಾಗಿ ತಮ್ಮನ್ನು ಅರ್ಪಿಸಿಕೊಂಡು ಪ್ರಶಸ್ತಿ, ಸಮ್ಮಾನ ಪಡೆದು ಅಜರಾಮರರಾದರು ಜಯಕುಮಾರ್. ಆದರೆ ಸಂಸಾರದ ಗತಿ?
ತಾರಾನಾಥ ವರ್ಕಾಡಿ