Advertisement
ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು. ಈ ಒಂಬತ್ತು ರಾತ್ರಿಗಳಲ್ಲಿ ಆದಿಶಕ್ತಿಯ ಒಂಬತ್ತು ರೂಪಗಳ ಆರಾಧನೆ ನಡೆಯುತ್ತದೆ. ಕರ್ನಾಟಕದ ಮಟ್ಟಿಗೆ ಇದು ಹತ್ತು ದಿನಗಳ ಹಬ್ಬ. “ದಶಾಹ’ ಎಂಬುದೇ ದಸರಾ ಆಗಿದೆ. ಇದು ಕರ್ನಾಟಕದ ನಾಡಹಬ್ಬವೂ ಹೌದು. ಹತ್ತನೆಯ ದಿನ ನಡೆಯುವುದೇ ವಿಜಯದಶಮಿ.
Related Articles
Advertisement
ಸ್ತ್ರೀರೂಪವೇ ಮೂಲಜಗತ್ಸೃಷ್ಟಿಯ ಮೂಲಕ್ಕೆ ಹೋದಾಗ ಸೃಷ್ಟಿ, ಪಾಲನೆ ಮತ್ತು ಲಯಕ್ಕೆ ಕಾರಣಕರ್ತರಾದ ಮೂರು ಮೂರ್ತಿಗಳಿಗೆ ಕಾರಣಕರ್ತವಾದ ಮೂಲಶಕ್ತಿಯನ್ನು ನಾವು ಸ್ತ್ರೀರೂಪದಲ್ಲಿಯೇ ಪರಿಭಾವಿಸುತ್ತೇವೆ. ಆ ಆದಿಶಕ್ತಿಯ ಅಂಶಗಳೇ ಮೂರು ಮೂರ್ತಿಗಳ ಅರ್ಧಾಂಗಿಯರಾಗಿಯೂ ಕಾಣಿಸಿಕೊಳ್ಳುತ್ತಾರೆ. ನವರಾತ್ರಿಯಂದು ಆರಾಧನೆಗೊಳ್ಳುವ ದೇವಿಯರಲ್ಲಿ ಮೊದಲ ಮೂರು ದಿನ ಪಾರ್ವತಿಯ ಅಂಶವೂ ಅನಂತರದ ಮೂರು ದಿನ ಲಕ್ಷ್ಮೀಯ ಅಂಶವೂ ಕೊನೆಯ ಮೂರು ದಿನ ಸರಸ್ವತೀಯ ಅಂಶವೂ ಒಳಗೊಂಡಿರುತ್ತದೆ. ಇಲ್ಲಿ ಪೂಜೆಗೊಳ್ಳುವ ದೇವಿಯರನ್ನು ನವದುರ್ಗೆಯರೆಂದು ಕರೆಯಲಾಗಿದೆ. ಶಕ್ತಿದೇವತೆಗಳು ಸಾಮಾನ್ಯವಾಗಿ ಮಾಂಸಾಹಾರಿಗಳು. ಕುರಿ, ಕೋಳಿ, ಆಡು, ಕೋಣವನ್ನು ಬಲಿ ಬೇಡುವ ಭಯಂಕರ ದೇವತೆಗಳು. ಅಷ್ಟೇಕೆ ಒಂದು ಕಾಲದಲ್ಲಿ ನರಬಲಿಯನ್ನೂ ಪಡೆಯುತ್ತಿದ್ದವರು ಎಂಬುದು ಇತಿಹಾಸ ಸಂಶೋಧನೆಗಳಿಂದ ದೃಢಪಟ್ಟ ಅಂಶ. ಆದರೆ, ನವರಾತ್ರಿಯ ಈ ದೇವಿಯರು ಹಾಲು, ಹಣ್ಣು, ಧಾನ್ಯಗಳನ್ನು ಮಾತ್ರ ಪಡೆಯುವ ದೇವತೆಗಳು. ಕೆಲವೆಡೆ ಈಗಲೂ ಶಾಕ್ತದೇವತೆಗಳಿಗೆ ರಕ್ತಾಹಾರ ಸಲ್ಲುತ್ತದೆ. ತೀರಾ ಇತ್ತೀಚೆಯವರೆಗೂ ಶಿರಸಿಯ ಮಾರಿಕಾಂಬ ದೇವತೆಗೆ ಕೋಣವನ್ನು ಬಲಿಕೊಡುತ್ತಿದ್ದರಂತೆ. ಈಗಲೂ ಅಲ್ಲಿ ಬಲಿ ಕೋಣವನ್ನು ಅತ್ಯಂತ ಆಸ್ಥೆಯಿಂದ ಸಾಕುತ್ತಾರೆ. ಜಾತ್ರೆಯ ಸಮಯದಲ್ಲಿ ಹಿಂದಿನಂತೆ ಅದನ್ನು ಬಲಿಕೊಡುವುದಿಲ್ಲ. ಒಂದು ಸಿರಿಂಜ್‌ನಲ್ಲಿ ಕೋಣನ ರಕ್ತವನ್ನು ತೆಗೆದು ದೇವಿಯ ಮೇಲೆ ಪ್ರೋಕ್ಷಣೆ ಮಾಡುತ್ತಾರೆ. ಸಂಪ್ರದಾಯವನ್ನು ಉಳಿಸಿದಂತೆಯೂ ಆಯಿತು. ಮಾನವೀಯತೆ, ಪ್ರಾಣಿದಯೆಯಂಥ ನಾಗರಿಕ ಮೌಲ್ಯಗಳನ್ನು ಗೌರವಿಸಿದಂತೆಯೂ ಆಯ್ತು. ಆದರೆ, ಎಲ್ಲ ಕಡೆಗಳಲ್ಲಿ ಇದು ಸಾಧ್ಯವಾಗಿಲ್ಲ. ಅರೆ ಗ್ರಾಮೀಣ ಪ್ರದೇಶಗಳಲ್ಲಿ ಮಾರಮ್ಮ , ಚೌಡಿ, ಮಾಂಕಾಳಮ್ಮ ಮುಂತಾದ ಗ್ರಾಮ್ಯ ದೇವತೆಗಳ ಜಾತ್ರೆ, ನೇಮಗಳಲ್ಲಿ ನೆತ್ತರಿನ ಹೊಳೆಯೇ ಹರಿಯುತ್ತದೆ. ನಾನು ಇತ್ತೀಚೆಗೆ ಅಸ್ಸಾಂನ ಕಾಮಾಖ್ಯ ಮತ್ತು ತ್ರಿಪುರಾದ ತ್ರಿಪುರಸುಂದರಿ ದೇವಸ್ಥಾನಗಳಿಗೆ ಭೇಟಿಕೊಟ್ಟಿ¨ªೆ. ಅಲ್ಲಿ ದೇವಿಯ ಎದುರಿನ ಬಲಿಪೀಠಕ್ಕೆ ಆಡುಗಳನ್ನು ಬಲಿ ಕೊಡುವುದನ್ನು ಕಣ್ಣಾರೆ ಕಂಡಿದ್ದೇನೆ. ನೇಪಾಳದ ಪಶುಪತಿನಾಥನ ಕೂಗಳತೆಯ ದೂರದಲ್ಲಿರುವ ಭಗವತೀ ಮಂದಿರದಲ್ಲಿ ಪೂಜಾಸಾಮಗ್ರಿಗಳ ಜೊತೆಯಲ್ಲಿ ಒಣಮೀನನ್ನು ಅರ್ಪಿಸುವುದನ್ನು ನಾನು ಕಂಡಿದ್ದೇನೆ. ಶಿವನ ಇನ್ನೊಂದು ರೂಪವಾದ ಭೈರವನಿಗೆ ಮದ್ಯ-ಮಾಂಸವನ್ನು ಅರ್ಪಿಸುವುದು ಕೂಡ ಸಾಮಾನ್ಯ ಸಂಗತಿ. ರಕ್ತವನ್ನು ಬೇಡುವ ಇಂತಹ ಶಕ್ತಿದೇವತೆಗಳು ಕಾರುಣ್ಯದ, ಮಮತೆಯ ಸೆಲೆಯಂತೆ ವರ್ತಿಸಿದ ಕಥೆಯೂ ಇದೆ. ಅದು ತುಮಕೂರು ಪಕ್ಕದ ಒಂದು ಹಳ್ಳಿ. ಹೆಸರು ಮರೆತಿದ್ದೇನೆ. ಕಾರ್ಯಕ್ರಮವೊಂದರ ಶೂಟಿಂಗ್‌ಗಾಗಿ ಆ ಜಾತ್ರೆಗೆ ಹೋಗಿ¨ªೆ. ಅಲ್ಲಿ ಎರಡು ದೇವತೆಯರ ಮೂರ್ತಿಗಳು ಸರ್ವಾಲಂಕಾರಗೊಂಡಿದ್ದವು. ಒಬ್ಬಳು ಶಕ್ತಿದೇವತೆ ಮಾರಮ್ಮನೆಂದು ಗೊತ್ತಿತ್ತು. ಶಕ್ತಿದೇವತೆಗಳಿಗೆ ಕೆಂಪು ಬಣ್ಣವೆಂದರೆ ಇಷ್ಟ. ರಕ್ತದ ಬಣ್ಣ ಕಪ್ಪುತಾನೇ? ಕೆಂಪು ಜೀವಂತಿಕೆಯ ಲಕ್ಷಣವೂ ಹೌದು. ಪಕ್ಕದಲ್ಲಿದ್ದ ಸೌಮ್ಯಮೂರ್ತಿಯ ದೇವತೆಯನ್ನು ನೋಡಿ, “ಅವಳು ಯಾರು?’ ಎಂದು ಕೇಳಿದೆ. ಅದಕ್ಕೆ ಅಲ್ಲಿದ್ದ ಪೂಜಾರಿ, “ಆಕೆ ಶ್ರೀಮನ್ನಾರಾಯಣನ ಮಡದಿಯಾದ ಲಕ್ಷ್ಮೀ’ ಎಂದು ಹೇಳಿ ಆಕೆ ಇಲ್ಲಿಗೆ ಬಂದ ಕಥೆಯನ್ನು ಹೇಳಿದರು; ಒಮ್ಮೆ ವಿಷ್ಣುವಿಗೂ ಲಕ್ಷ್ಮೀಗೂ ಜಗಳವಾಯಿತಂತೆ. ಲಕ್ಷ್ಮೀ ಗಂಡನ ಜೊತೆ ಜಗಳವಾಡಿಕೊಂಡು ಸಿಟ್ಟಿನಿಂದ ನೇರವಾಗಿ ಭೂಲೋಕಕ್ಕೆ ಬಂದುಬಿಟ್ಟಳಂತೆ. ಆದರೆ, ಇಲ್ಲಿ ಉಳಿದುಕೊಳ್ಳುವುದು ಎಲ್ಲಿ? ಎಲ್ಲಿಯೂ ನೆಲೆ ಸಿಕ್ಕದೆ ಅಂಡಲೆಯುತ್ತಿದ್ದಳಂತೆ. ಆಗ ದಾರಿಯಲ್ಲಿ ಹೋಗುತ್ತಿದ್ದ ಮಾರಮ್ಮ ಇವಳನ್ನು ನೋಡಿ ಅವಳ ಬಗ್ಗೆ ವಿಚಾರಿಸಿ ಮರುಕಗೊಂಡು, “ಬಾ ತಂಗಿ ನನ್ನ ಮನೆಗೆ’ ಎಂದು ತನ್ನ ಮನೆಗೆ ಕರೆದುಕೊಂಡು ಬಂದಳಂತೆ. ಇಲ್ಲಿ ಅಕ್ಕ ಯಾರು, ತಂಗಿ ಯಾರು! ಮಾರಮ್ಮನಿಗೆ ಬಾಡೂಟ ಬಡಿಸಿದರೆ ಪಕ್ಕದಲ್ಲಿರುವ ಲಕ್ಷ್ಮೀಗೆ ಹಾಲು ಹಣ್ಣಿನ ನೈವೇದ್ಯ. ಸೌಹಾರ್ದ ಎಂದರೆ ಇದೆ ಅಲ್ಲವೆ? ಶಕ್ತಿದೇವತೆಗಳು ಈ ನೆಲದ ಜೊತೆ, ಜನಪದರ ಜೊತೆ ಸ್ಥಳೀಯ ಸಂಸ್ಕೃತಿಯ ಜೊತೆ ನೇರ ಸಂಬಂಧವನ್ನು ಹೊಂದಿರುತ್ತವೆ. ಭಕ್ತರು ಅವರ ಜೊತೆ ಜಗಳವಾಡಬಹುದು, ಮುನಿಸಿಕೊಳ್ಳಬಹುದು, ಆಕೆಯನ್ನು ಇನ್ನು ನೋಡಲಾರೆವೆಂದು ಬಹಿಷ್ಕಾರ ಹಾಕಿ ಎದ್ದು ಹೊರಡಲೂಬಹುದು. ಹಾಗೆ ಜಗಳವಾಡುತ್ತಿದ್ದವರನ್ನು ನಮ್ಮ ಶೂಟಿಂಗ್ ಸಮಯದಲ್ಲಿ ನೋಡಿದ್ದೇನೆ. ಅದು ಹಾಸನದಲ್ಲಿರುವ ಒಂದು ಹಳ್ಳಿ. ಗ್ರಾಮೀಣ ಹೆಣ್ಣುಮಗಳೊಬ್ಬಳು ದೇವರ ಬಳಿ ಯಾವುದೋ ವಿಷಯಕ್ಕೆ ಸಂಬಂಧಪಟ್ಟಂತೆ ಹೂ ಕೇಳಲು ಬಂದಿದ್ದಳು. ತನ್ನ ಸಮಸ್ಯೆಯನ್ನು ಮೆಲು ದನಿಯಲ್ಲಿ ದೇವರ ಮುಂದೆ ಹೇಳಿಕೊಂಡಳು. ಸ್ವಲ್ಪ ಹೊತ್ತು ಇದ್ದು “ನಿನಗೆ ಗೊತ್ತಿಲ್ಲದ್ದು ಏನೂ ಇಲ್ಲ. ಆದರೂ ಎಲ್ಲಾ ನಿನ್ನ ಜೊತೆ ಹೇಳಿಕೊಂಡಿದ್ದೇನೆ. ನೀನು ಬಲಗಡೆಯೇ ಹೂ ಕೊಡು ಅಂತ ಕೇಳಲ್ಲ. ಎಡಗಡೆ ಕೊಟ್ಟರೂ ನಿನ್ನ ಚಿತ್ತ’ ಎಂದು ಕೈಮುಗಿದು ನಿಂತಳು. ಹೂ ಬೀಳಲಿಲ್ಲ. ಮತ್ತೆ ಈಕೆ ಶುರು ಮಾಡಿದಳು. “ನೀನೇನೋ ಕುರಿಯೇ ಕೊಡಬೇಕು ಎಂದು ಹೇಳಿ¨ªೆ. ನಾ ಬಡವಿ ಒಂದು ಕೋಳಿ ಕೊಟ್ಟೇನು ಅಟ್ಟೆಯಾ. ಈಗ ನೀ ಹೂ ಕೊಡು ಬೇಗ’ ಎಂದು ದೇವರಿಗೆ ಧಮ್ಕಿ ಹಾಕಿದಳು ಹೂ ಬೀಳಲಿಲ್ಲ. ಕೊನೆ ಕೊನೆಗೆ ಗ್ರಾಮ್ಯ ಭಾಷ್ಯೆಯಲ್ಲಿ ದೇವರಿಗೆ ವಾಚಾಮಗೋಚರವಾಗಿ ಬೈಯಲು ಶುರು ಮಾಡಿದಳು. ಇದು ಗ್ರಾಮೀಣ ಭಾಗದಲ್ಲಿ ದೇವರು-ಭಕ್ತರಿಗೂ ಇರುವ ಸಂಬಂಧ. ದೇವರ ವಿಚಾರದಲ್ಲಿ ದೃಷ್ಟಿಯಂತೆ ಸೃಷ್ಟಿ ಎಂಬುದು ನಿಜದ ಮಾತು. “ಲಾಲಿಸಿದರೆ ಮಕ್ಕಳು, ಪೂಜಿಸಿದರೆ ದೇವರು’ ಎಂಬ ಗಾದೆಯ ಮಾತೇ ಇದೆಯಲ್ಲ ! ಗ್ರಾಮೀಣ ಜನರು ಹೊಸ ಹೊಸ ದೇವರನ್ನೂ ಸೃಷ್ಟಿಸಬಲ್ಲರು, ಪ್ಲೇಗಮ್ಮ, ಮಾರಮ್ಮಗಳ ಜೊತೆಗೆ ಇತ್ತೀಚೆಗಿನ ಸೇರ್ಪಡೆಯೆಂದರೆ ಕೀಲಮ್ಮ. ಐದಾರು ವರ್ಷಗಳ ಕೆಳಗೆ ಕರ್ನಾಟಕದ ಬಹುತೇಕ ಕಡೆ ಚಿಕುನ್ ಗುನ್ಯಾ ಎಂಬ ರೋಗ ಕಾಣಿಸಿಕೊಂಡಿತ್ತು. ಜ್ವರದೊಡನೆ ದೇಹದ ಸಂದುಗೊಂದುಗಳಲ್ಲಿ ಅಪಾರ ನೋವು ಕಾಣಿಸುತ್ತಿದ್ದ ಈ ರೋಗಕ್ಕೆ ಗ್ರಾಮೀಣ ಭಾಗದ ಜನರು ಹೈರಾಣಾಗಿ ಹೋಗಿದ್ದರು. ಗಂಟುಗಳಲ್ಲಿ ಅಪಾರ ನೋವಾಗುತ್ತಿದ್ದುದರಿಂದ ಅವರಿಗೆ ಯಾವ ಕೆಲಸವೂ ಮಾಡಲಾಗುತ್ತಿರಲಿಲ್ಲ. ಅದನ್ನು ಗುಣಪಡಿಸಲು ದೇವರಲ್ಲಿ ಮೊರೆ ಹೊಕ್ಕ ಅವರು ಅದಕ್ಕಾಗಿ ಹೊಸ ದೇವರನ್ನೇ ಸೃಷ್ಟಿಸಿ ಅದಕ್ಕೆ “ಕೀಲಮ್ಮ’ ಎಂದು ನಾಮಕರಣ ಮಾಡಿದ್ದರು. ಬಿಜಾಪುರದಲ್ಲಿ ನಡೆದ ಕೀಲಮ್ಮ ಜಾತ್ರೆಯಲ್ಲಿ ನಾನೂ ಭಾಗವಹಿಸಿ¨ªೆ. ಇಡೀ ಊರೇ ಹಬ್ಬದಡುಗೆಯನ್ನು ಮಾಡಿ ಮೆರವಣಿಗೆಯಲ್ಲಿ ಊರ ಹೊರಗೆ ಸಾಗಿ ಬಂದು ಅಲ್ಲಿ ಕೀಲಮ್ಮನಿಗೆ ಊಟ ಬಡಿಸಿ, “ನೀನಿನ್ನು ಊರೊಳಗೆ ಬರಬೇಡ’ ಎಂದು ಬೇಡಿಕೊಂಡದ್ದನ್ನು, ಒಂದು ರೀತಿಯಲ್ಲಿ ತಾಕೀತು ಮಾಡಿದ್ದನ್ನು ನಾನು ನೋಡಿದ್ದೇನೆ. ವರ್ತಮಾನದಲ್ಲಿ ನಿಂತು ನೋಡಿದರೆ ಸೀಮೋಲ್ಲಂಘನೆ ಮಾಡುವ ಎಲ್ಲಾ ಸ್ತ್ರೀಯರು ನನಗೆ ದುರ್ಗೆಯ ಹಾಗೆ ಕಾಣುತ್ತಾರೆ. ಐದು ವರ್ಷಗಳ ಹಿಂದೆ ಭಾರತ ನವರಾತ್ರಿಯ ಸಂಭ್ರಮವನ್ನು ಆಚರಿಸುತ್ತಿದ್ದ ಹೊತ್ತಿನಲ್ಲೇ ಪಾಕಿಸ್ತಾನದ ಹದಿಮೂರರ ಬಾಲೆ ಮಲಾಲಾಳ ಮೇಲೆ ಉಗ್ರರು ಗುಂಡಿನ ಮಳೆಗೆರೆದು ಅವಳನ್ನು ಸಾವಿನಂಚಿಗೆ ತಳ್ಳಿದ್ದರು. ಆಗ ಉದಯವಾಣಿ ಪತ್ರಿಕೆಯಲ್ಲಿ ನಾನು ಅವಳನ್ನು “ಪುಟ್ಟದುರ್ಗೆ’ ಎಂದು ಕರೆದು ಲೇಖನ ಬರೆದಿ¨ªೆ. ಒಂದೆರಡು ವರ್ಷಗಳ ಹಿಂದೆ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ವಿರೋಧಿಸಿ ಭಾರತದ ಚಿತ್ರಕಲಾವಿದರೆಲ್ಲ ದೇವತೆಯರ ಸಿದ್ಧ ಮಾದರಿಯ ರೂಪಗಳನ್ನು ಕೊಂಚ ವಿರೂಪಗೊಳಿಸಿ ಅವಳನ್ನು ಗಾಯಗೊಂಡವಳಂತೆ ಚಿತ್ರಿಸಿದ್ದರು. ಶಾರದೆಯ ಕಣ್ಣುಗಳಲ್ಲಿ ನೀರಿರುವಂತೆ, ಲಕ್ಷ್ಮೀಯ ಮುಖದಲ್ಲಿ ಗೀರುಗಳಿರುವಂತೆ- ಹೀಗೆ ದೇವಿಯರೆಲ್ಲ ಸಂಕಟಪಟ್ಟವರಂತೆ ತೋರುತ್ತಿತ್ತು. ಹೆಣ್ಣುಗಳ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಸ್ವತಃ ಹೆಣ್ಣಾಗಿರುವ ದೇವಿಯೇ ಕಣ್ಣೀರು ಸುರಿಸುತ್ತಾಳೆ ಎಂದು ಇದರ ಧ್ವನ್ಯರ್ಥ. ಹೆಣ್ಣುಮಕ್ಕಳನ್ನು ದೇವಿಯರೆಂದು ಉನ್ನತವಾಗಿ ಭಾವಿಸಿದ ನಾಡಿನಲ್ಲಿ ಅತ್ಯಾಚಾರ, ದೌರ್ಜನ್ಯಗಳು ಸಂಭವಿಸದೇ ಇರಲು ಈ ಚಿತ್ರಮಾದರಿಗಳು ಪ್ರೇರಣೆಯಾಗಲಿ ಎಂದು ಕಲಾವಿದರ ಆಶಯವಾಗಿತ್ತು. ಹೆಣ್ಣುಮಕ್ಕಳನ್ನು ದೇವತೆಗಳೆಂದು ನೋಡುವ ಮುನ್ನ ಮನುಷ್ಯರಾಗಿ ನೋಡುವುದಕ್ಕೆ ಕಲಿಯಬೇಕು ಎಂದೂ ಪರೋಕ್ಷವಾಗಿ ಹೇಳಿದಂತಿತ್ತು. ಇದು ನಂಬಿಕೆಗಳ ಜಗತ್ತು. ಯಾರ ನಂಬಿಕೆಗಳೂ ಮೇಲಲ್ಲ. ಇನ್ಯಾರ¨ªೋ ಕೀಳಲ್ಲ. ಯಾಕೆಂದರೆ, ನಮ್ಮ ನಮ್ಮ ನಂಬಿಕೆಗಳೇ ಬದುಕನ್ನು ಮುನ್ನಡೆಸುತ್ತವೆ. ಅ ನಂಬಿಕೆಗಳಲ್ಲಿ ನಿಸರ್ಗದ ಪ್ರೀತಿ, ಮಾನವೀಯ ಕಾಳಜಿ, ಪ್ರಾಣಿದಯೆಗಳು ಇದ್ದರೆ ಸಾಕು. ಇಲ್ಲದಿದ್ದರೆ ಪ್ರಕೃತಿ ಅರ್ಥಾತ್ ಪ್ರಕೃತಿಯ ಅಧಿದೇವತೆಯಾಗಿರುವ ದುರ್ಗೆಯೇ ಪಾಠಕಲಿಸುತ್ತಾಳೆ. – ಉಷಾ ಕಟ್ಟೇಮನೆ