Advertisement
ಕಾನೂನು ಸುವ್ಯವಸ್ಥೆಯ 8 ಡಿಸಿಪಿ ಹುದ್ದೆಗಳ ಪೈಕಿ, ಎರಡರಲ್ಲಿ ಐಪಿಎಸ್ ಅಧಿಕಾರಿಗಳಾದ ಡಾ. ಕಲಾಕೃಷ್ಣಸ್ವಾಮಿ ಹಾಗೂ ಇಶಾಪಂಥ್ ಇದ್ದಾರೆ. ಸಂಚಾರ ವಿಭಾಗದ ಮೂರು ಡಿಸಿಪಿ ಹುದ್ದೆಗಳಲ್ಲಿ ಸಾರಾ ಫಾತೀಮಾ, ಡಾ.ಸೌಮ್ಯಲತಾ ಎಸ್.ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ನಗರ ಸಶಸ್ತ್ರ ಮೀಸಲು ಪಡೆ (ಸಿಎಆಆರ್) ಡಿಸಿಪಿಯಾಗಿ ವರ್ತಿಕಾ ಕಟಿಯಾರ್ ಸೇವೆ ಸಲ್ಲಿಸುತ್ತಿದ್ದಾರೆ.
Related Articles
Advertisement
ಡಾ.ಕಲಾ ಕೃಷ್ಣಸ್ವಾಮಿ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿದೇಶಿ ಪ್ರಜೆಗಳು, ಅನ್ಯ ರಾಜ್ಯಗಳ ನಿವಾಸಿಗಳು ಅತಿ ಹೆಚ್ಚು ವಾಸವಿರುವ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಫ್ರಿಕನ್ ಪ್ರಜೆಗಳ ಉಪಟಳದ ಜತೆಗೆ, ರೊಹಿಂಗ್ಯಾ ಮುಸ್ಲಿಂರ ಕ್ಯಾಂಪ್‌ಗ್ಳು ಇವೆ ಎನ್ನಲಾದ ಈಶಾನ್ಯ ವಿಭಾಗದ ಡಿಸಿಪಿ ಡಾ.ಕಲಾ ಕೃಷ್ಣಸ್ವಾಮಿ.
ಅತ್ಯಂತ ಸೂಕ್ಷ ವಿಭಾಗದಲ್ಲಿ ಒಂದು ವರ್ಷದಿಂದ ಡಿಸಿಪಿಯಾಗಿರುವ ಡಾ. ಕಲಾ ಕೃಷ್ಣಸ್ವಾಮಿ, ಏರೋ ಇಂಡಿಯಾ, ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದ ವೇಳೆ ಬಿಗಿ ಬಂದೋಬಸ್ತ್, ಕಾನೂನು ಸುವ್ಯಸ್ಥೆಯ ನೇತೃತ್ವ ವಹಿಸಿದ್ದರು. ಜತೆಗೆ, ಪುಲ್ವಾಮ ಘಟನೆ ಹಿನ್ನೆಲೆಯಲ್ಲಿ ಉಗ್ರನ ಪರವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಕಾಶ್ಮೀರ ಮೂಲದ ಯುವಕ ಬಂಧನ ಕೂಡ ಡಾ,ಕಲಾ ಅವರ ನೇತೃತ್ವದಲ್ಲಿ ನಡೆದಿತ್ತು.
ಸಾರಾ ಫಾತಿಮಾ: ರಾಜಧಾನಿಯಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುವ ಪ್ರದೇಶವೆಂದು ಗುರುತಿಸಲಾಗಿರುವ ಹೆಬ್ಟಾಳ ಬ್ರಿಡ್ಜ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ದೇವನಹಳ್ಳಿ ವ್ಯಾಪ್ತಿಯನ್ನು ಒಳಗೊಂಡಿರುವ ಉತ್ತರ ವಿಭಾಗದ (ಸಂಚಾರ) ಡಿಸಿಪಿಯಾಗಿ ಸಾರಾ ಫಾತಿಮಾ ಸೇವೆ ಸಲ್ಲಿಸುತ್ತಿದ್ದಾರೆ. ಸಂಚಾರ ನಿರ್ವಹಣೆ ಜವಾಬ್ದಾರಿ ಜತೆಗೆ ಏರ್‌ಪೋರ್ಟ್ ರಸ್ತೆಯ ವಿವಿಐಪಿಗಳ ಸಂಚಾರ, ಗಣ್ಯರ ಕಾರ್ಯಕ್ರಮಗಳು, ಸಮಾವೇಶಗಳ ಸಂಧರ್ಭಗಳಲ್ಲಿ ಆಗುವ ಭಾರೀ ಸಂಚಾರ ದಟ್ಟಣೆ ನಿರ್ವಹಣೆಯ ಹೊಣೆಯನ್ನು ಡಿಸಿಪಿ ಸಾರಾ ನಿಭಾಯಿಸುತ್ತಿದ್ದಾರೆ.
ಡಾ.ಸೌಮ್ಯಲತಾ: ಪ್ರತಿ ನಿತ್ಯ, ದಿನದ ಬಹುತೇಕ ಎಲ್ಲಾ ಅವಧಿಯಲ್ಲೂ ತೀವ್ರ ಸಂಚಾರದಟ್ಟಣೆಗೆ ಸಾಕ್ಷಿಯಾಗಿರುವ ಮೈಸೂರು ರಸ್ತೆ, ಗೊರಗುಂಟೆಪಾಳ್ಯ ಜಂಕ್ಷನ್ ಸೇರಿದಂತೆ ಪಶ್ಚಿಮ ವಿಭಾಗದ ಸಂಚಾರ ನಿರ್ವಹಣೆಯ ಉಸ್ತುವಾರಿಯನ್ನು ಡಾ.ಸೌಮ್ಯಲತಾ ಹೊತ್ತಿದ್ದಾರೆ.
ವರ್ತಿಕಾ ಕಟಿಯಾರ್: 2015ರ ನವೆಂಬರ್ 10ರಂದು ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿ ಹತೋಟಿಗೆ ತರಲು ಜೀವದ ಹಂಗು ತೊರೆದು ಪ್ರಯತ್ನಿಸಿ, ಸೈ ಎನಿಸಿಕೊಂಡಿದ್ದ ಅಂದಿನ ಕೊಡಗು ಎಸ್ಪಿ ವರ್ತಿಕಾ ಕಟಿಯಾರ್, ಸದ್ಯ ನಗರ ಸಶಸ್ತ್ರ ಮೀಸಲು ಪಡೆ ಕೇಂದ್ರ ಕಚೇರಿಯ ಡಿಸಿಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲಾಖೆಯ ಶಸ್ತ್ರಾಸ್ತ್ರಗಳ ರಕ್ಷಣೆ, ವಿವಿಐಪಿಗಳ ಭದ್ರತೆ, ಅಗತ್ಯ ಸಂಧರ್ಭಗಳಲ್ಲಿ ಬಂದೋಬಸ್ತ್ ನಿಯೋಜನೆ ಸೇರಿದಂತೆ ಹಲವು ಆಡಳಿತಾತ್ಮಕ ಜವಾಬ್ದಾರಿಗಳನ್ನು ವರ್ತಿಕಾ ನಿರ್ವಹಿಸುತ್ತಿದ್ದಾರೆ.
* ಮಂಜುನಾಥ ಲಘುಮೇನಹಳ್ಳಿ