ಕುಂಬಳೆ: ಕೇರಳದಲ್ಲಿ ಕಳೆದ ಕೆಲವು ತಿಂಗಳಿಂದ ನ್ಯಾಯ ಪರಿಪಾಲನೆ, ಶಾಂತಿ ಸಮಾಧಾನ ನೀಡುವ ಹೊಣೆಹೊತ್ತು ರಕ್ಷಣೆಯನ್ನೊದಗಿಸಬೇಕಾದ ಪೊಲೀಸ್ ವ್ಯವಸ್ಥೆ ಸಿಪಿಎಂ ಪಕ್ಷದ ಕೇಂದ್ರೀಕೃತ ವ್ಯವಸ್ಥೆಯಂತೆ ಕಾರ್ಯಾಚರಿಸುತ್ತಿರುವುದು ಗಂಭೀರ ವಿಷಮತೆಯನ್ನುಂಟುಮಾಡುತ್ತಿದೆ. ಇದರ ಪರಿಣಾಮ ಸ್ತ್ರೀಯರಿಗೆ ರಕ್ಷಣೆ ಇಲ್ಲದೆ ದಿಗಿಲಿನ ವಾತಾವರಣದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು ರಾಜ್ಯ ಸರಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕುಂಬಳೆ ಮಂಡಲ ಕಾಂಗ್ರೆಸ್ ಸಮಿತಿಯ ನೇತƒತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿ ಆಯೋಜಿಸಲಾದ ಕೇರಳದಲ್ಲಿ ಮಹಿಳಾ ಸಂರಕ್ಷಣಾ ಭೀತಿ-ಸರಕಾರದ ತಪ್ಪು ನಡೆ ಪ್ರತಿಭಟನಾ ಮೆರವಣಿಗೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ, ಮಹಿಳಾ ಕಾಂಗ್ರೆಸ್ ನೇತಾರೆ ಗೀತಾ ಎಲ್.ಶೆಟ್ಟಿ ಅವರಿಗೆ ಧ್ವಜ ಹಸ್ತಾಂತರಿಸಿ ಅವರು ಮಾತನಾಡಿದರು.
ರಾಜ್ಯ ಪೊಲೀಸ್ ವರಿಷ್ಠರ ನಿಲುವುಗಳನ್ನು ಸ್ವತ: ಮುಖ್ಯಮಂತ್ರಿ ವ್ಯಕ್ತಪಡಿಸುತ್ತಿರುವುದು ಪೊಲೀಸ್ ವ್ಯವಸ್ಥೆಯ ಇಂದಿನ ಸ್ಥಿತಿಯ ಮಾಪಕವಾಗಿದ್ದು, ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೆದರುತ್ತಿರುವುದು ಅದರ ದೀವಾಳಿತನದ ಸಂಕೇತವೆಂದು ಅವರು ಖೇದ ವ್ಯಕ್ತಪಡಿಸಿದರು. ಇತ್ತೀಚೆಗೆ ಮಲೆಯಾಳದ ಖ್ಯಾತ ಚಿತ್ರ ನಟಿಯೋರ್ವೆಯನ್ನು ಅಪಹರಿಸಿದ ಹೇಯ ಕೃತ್ಯ ರಾಜ್ಯದಲ್ಲಿ ನಡೆದಿರುವುದು ಆಡಳಿತ, ಕಾನೂನು ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದ್ದು, ಇಂತಹ ಗಂಭೀರ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಲಘುವಾಗಿ ಪ್ರತಿಕ್ರಿಯಿಸಿರುವುದು ದೌರ್ಭಾಗ್ಯಕರವೆಂದು ಅವರು ಟೀಕಿಸಿದರು.
ಸ್ತ್ರೀ ಸಬಲೀಕರಣ, ಸ್ವಾತಂತ್ರÂದ ಸಂರಕ್ಷಣೆ ಸರಕಾರದ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಸ್ತುತದ ರಾಜ್ಯ ಸರಕಾರದ ನಿರ್ಲಕ್ಷ ಧೋರಣೆ ಸಾಮಾನ್ಯ ಜನತೆಯ ಆತಂಕಕ್ಕೆ ಕಾರಣವಾಗಿದ್ದು ಸಾಮಾಜಿಕ ಅಸಂತುಷ್ಠಿ ತೀವ್ರಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು. ಇತ್ತೀಚೆಗೆ ಮಂಡನೆಯಾದ ನೂತನ ಸರಕಾರದ ಮುಂಗಡಪತ್ರ ಮಹಿಳೆಯರಿಗೆ ಸಂಬಂಧಿಸಿ ನಿರಾಶಾದಾಯಕವಾಗಿದ್ದು, ಸ್ತ್ರೀಯರನ್ನು ಮಧ್ಯ ಕಾಲೀನ ಯುಗದತ್ತ ಕೊಂಡೊಯ್ಯುವ ಯತ್ನವನ್ನು ಸರಕಾರ ಮಾಡುತ್ತಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು. ಮಹಿಳಾ ಸಂರಕ್ಷಣೆಯ ನಿಟ್ಟಿನಲ್ಲಿ ಸರಕಾರ ಇಬ್ಬಗೆಯ ನಿಲುವಿಂದ ಹೊರಬಂದು ನಿಷ್ಠುರ ಚೌಕಟ್ಟುಗಳ ಮೂಲಕ ಅಗತ್ಯ ನಿರ್ಣಯಗಳನ್ನು ಕೈಗೊಳ್ಳಬೇಕೆಂದು ಅವರು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಾಮಿಕುಟ್ಟಿ, ಮಂಡಲ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಭಂಡಾರಿ ಕುತ್ತಿಕಾರ್, ಮುಖಂಡರಾದ ರವಿ ಪೂಜಾರಿ, ಲೋಕನಾಥ ಶೆಟ್ಟಿ,ಯುವ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಮೊಗ್ರಾಲ್, ಲಕ್ಷ¾ಣ ಪ್ರಭು ಕುಂಬಳೆ, ಸುಮಿತ್ರಾ ಕುಲಾಲ್, ವಿಶಾಲಾಕ್ಷಿ, ಶಶಿಕಲಾ ಆರಿಕ್ಕಾಡಿ, ಆಯಿಷಾ ಮೊಹಮ್ಮದ್, ಕೇಶವ ದರ್ಭಾರ್‌ಕಟ್ಟೆ, ರಾಧಾ ಮುಳಿಯಡ್ಕ, ಭಂಡಾರಿ ಶೆಟ್ಟಿ, ಚಂದ್ರ ಕಾಜೂರು, ಶ್ರೀಧರ ರೈ ಕಿದೂರು, ಡೋಲ್ಫಿ ಡಿ’ಸೋಜಾ ಉಪಸ್ಥಿತರಿದ್ದರು.
ಪ್ರತಿಭಟನಾ ಮೆರವಣಿಗೆ ಕುಂಬಳೆ ಪೇಟೆಯ ಪ್ರಧಾನ ರಸ್ತೆಗಳಲ್ಲಿ ಸಂಚರಿಸಿ ಸಮಾಪ್ತಿಯಾಯಿತು.