Advertisement

ವಿಷ ಪ್ರಸಾದ ಪ್ರಕರಣದ ಹಿಂದಿದೆ ಸ್ತ್ರೀ ಸಂಘರ್ಷ

12:30 AM Jan 30, 2019 | |

ಚಿಕ್ಕಬಳ್ಳಾಪುರ: ಚಿಂತಾಮಣಿಯ ನರಸಿಂಹಪೇಟೆಯಲ್ಲಿರುವ ಗಂಗಮ್ಮ ಗುಡಿ ಬಳಿ ಕಳೆದ ಶುಕ್ರವಾರ ಭಕ್ತರಿಗೆ ವಿಷ ಪ್ರಸಾದ ವಿತರಿಸಿ ಇಬ್ಬರು ಮಹಿಳೆಯರನ್ನು ಬಲಿ ಪಡೆದ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಘಟನೆಗೆ ಸ್ತ್ರೀ ಸಂಘರ್ಷವೇ
ಕಾರಣವಾಗಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿಷ ಪ್ರಸಾದ ವಿತರಣೆ ಆಗಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.

Advertisement

ಪೂರ್ವ ನಿಯೋಜಿತವಾಗಿಯೇ ವಿಷ ಪ್ರಸಾದ ಹಂಚಿಕಯಾಗಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿಂತಾಮಣಿ ನಗರ ಠಾಣೆ ಪೊಲೀಸರು ಮೂವರು ಮಹಿಳೆಯರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರನ್ನು ಚಿಂತಾಮಣಿಯ ಸಾಲಿಪೇಟೆ ನಿವಾಸಿ ಲಕ್ಷ್ಮೀ ಕೋಂ ಮಂಜುನಾಥ (46), ಅಮರಾವತಿ ಕೋಂ ಮುನಿರಾಜು (28) ಹಾಗೂ ಸಾಲಿಪೇಟೆ ಹೂವಿನ ವ್ಯಾಪಾರಿ ಪಾವರ್ತಮ್ಮ ಕೋಂ ರಾಮಚಂದ್ರಪ್ಪ (40) ಎಂದು ಗುರುತಿಸಲಾಗಿದೆ. ಮೂವರು ತಾವೇ ಕೇಸರಿಬಾತ್‌ಗೆ ವಿಷ ಬೆರೆಸಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. 

ಸ್ತ್ರೀ ಸಂಘರ್ಷ: ಗಂಗಮ್ಮ ಗುಡಿ ದೇವಾಲಯದ ಬಳಿ ವಿಷ ಪ್ರಸಾದ ವಿತರಿಸಿದ ಲಕ್ಷ್ಮೀ, ದೇವಾಲಯದ ಪಕ್ಕದಲ್ಲಿಯೆ ಇದ್ದ ಲೋಕೇಶ್‌ ಎಂಬಾತನ ಜತೆಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಷಯ ಲೋಕೇಶ್‌ ಹೆಂಡತಿ ಶ್ರೀಗೌರಿಗೆ ತಿಳಿದಿತ್ತು. ಈ ಬಗ್ಗೆ ಲೋಕೇಶ್‌ಗೆ ಅನೇಕ ಬಾರಿ ಬುದಿಟಛಿವಾದ ಹೇಳಿದರೂ ಆತ ಲಕ್ಷ್ಮೀ ಒಡನಾಟ ಬಿಟ್ಟಿರಲಿಲ್ಲ. ಶ್ರೀಗೌರಿಯನ್ನು ಎರಡೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಲೋಕೇಶ್‌, ಕಳೆದ ಮೂರು ತಿಂಗಳಿನಿಂದ ಚಿಂತಾಮಣಿ ತಾಲೂಕು ಬಿಟ್ಟು ಬೇರೆ ಕಡೆ ವಾಸವಾಗಿದ್ದ. ಹೀಗಾಗಿ, ಲೋಕೇಶ್‌ ಜತೆ ಸಂಬಂಧ ಹೊಂದಿದ್ದ ಲಕ್ಷ್ಮೀ, ಶ್ರೀಗೌರಿಯನ್ನು ಕೊಲೆ ಮಾಡುವ ಸಂಚು ರೂಪಿಸಿ, ಶುಕ್ರವಾರ ಭಕ್ತರಿಗೆ ಪ್ರಸಾದ ವಿತರಿಸುವ ನೆಪದಲ್ಲಿ ಪ್ರತ್ಯೇಕವಾಗಿ ಎರಡು ಕಪ್‌ಗ್ಳಲ್ಲಿನ ಕೇಸರಿಬಾತ್‌ಗೆ ವಿಷ ಬೆರೆಸಿ ತನ್ನ ಮನೆ ಕೆಲಸಕ್ಕೆ ಬರುತ್ತಿದ್ದ ಅಮರಾವತಿ ಮೂಲಕ ಶ್ರೀಗೌರಿ ಮನೆಗೆ ಕಳುಹಿಸಿದ್ದಳು. ವೃತ್ತಿಯಲ್ಲಿ ಅಕ್ಕಸಾಲಿಗರಾಗಿರುವ ಲಕ್ಷ್ಮೀ, ಚಿನ್ನವನ್ನು ಕರಗಿಸುವ ನವಸಾಗರ
(ಪಾದರಸ) ಮಾದರಿಯ ವಿಷವನ್ನು ಬೆರೆಸಿದ್ದಳು ಎನ್ನಲಾಗಿದೆ.

ಅಮರಾವತಿ ಇದನ್ನು ಕೊಟ್ಟು ಬಂದಿದ್ದಳು. ಆದರೆ, ಶ್ರೀಗೌರಿ ಪ್ರಸಾದ ಸ್ವೀಕರಿಸದೆ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಸಾದ ಸೇವಿಸಿದ್ದ ಶ್ರೀಗೌರಿ ತಾಯಿ, ಸರಸ್ವತಮ್ಮ ಕೋಲಾರ ಆಸ್ಪತ್ರೆಯಲ್ಲಿ ಶನಿವಾರವೇ ಕೊನೆಯುಸಿರೆಳೆದಿದ್ದರು. ಇನ್ನೊಂದು ಕಪ್ಪನ್ನು
ದೇಗುಲಕ್ಕೆ ಬಂದಿದ್ದ ರಾಜು ಎಂಬಾತನಿಗೆ ವಿತರಿಸಿದ್ದು, ರಾಜು ಅದನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ, ತನ್ನ ಹೆಂಡತಿ ರಾಧಾ, ಅಣ್ಣ ಗಂಗಾಧರ್‌, ಆತನ ಹೆಂಡತಿ ಕವಿತಾ, ಮಕ್ಕಳಾದ ಗಾನವಿ, ಚರಣಿಗೆ ವಿತರಿಸಿದ್ದ. ಈ ಪೈಕಿ ಕವಿತಾ ವಿಷ ಪ್ರಸಾದ ಸೇವಿಸಿ ಮೃತಪಟ್ಟಿದ್ದಳು. ಗಾಣವಿ, ಚರಣಿ, ಗಂಗಾಧರ್‌, ರಾಜು ಮತ್ತಿತರರು ತೀವ್ರ ಅಸ್ವಸ್ಥಗೊಂಡು ಕೋಲಾರದ
ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಕವಿತಾ, ಶ್ರೀಗೌರಿ ತಾಯಿ ಸರಸ್ವತಮ್ಮ ಅವರ ಅಂಗಾಂಗಳನ್ನು ಎಫ್ಎಸ್‌ಎಲ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷೆಯ ಫ‌ಲಿತಾಂಶಕ್ಕಾಗಿ ಪೊಲೀಸರು ಎದುರು
ನೋಡುತ್ತಿದ್ದಾರೆ.

ಲೋಕೇಶ್‌ ಬಂಧನ: ಈ ಮಧ್ಯೆ, ಲೋಕೇಶ್‌ನನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಆತನ ಪಾತ್ರ ಇದೆಯೋ, ಇಲ್ಲವೋ ಎಂಬುದು ವಿಚಾರಣೆ ಬಳಿಕ ತಿಳಿಯಲಿದೆ ಎಂದು ಕೇಂದ್ರ ವಲಯದ ಐಜಿಪಿ, ಬಿ.ದಯಾನಂದ್‌ ಸುದ್ದಿಗಾರರಿಗೆ ತಿಳಿಸಿದರು.

Advertisement

ಗಮನ ಸೆಳೆದಿದ್ದ “ಉದಯವಾಣಿ’ ವರದಿ
ಜ.28ರ ಸೋಮವಾರದಂದು, ವಿಷ ಪ್ರಸಾದಕ್ಕೆ ಅನೈತಿಕ ಸಂಬಂಧವೇ ಕಾರಣ ಎಂಬ ಶೀರ್ಷಿಕೆಯಡಿ “ಉದಯವಾಣಿ’ ವರದಿ ಪ್ರಕಟಿಸಿ ಎಲ್ಲರ ಗಮನ ಸೆಳೆದಿತ್ತು. ಇದರ ಆಧಾರದಲ್ಲಿಯೇ ಚಿಂತಾಮಣಿ ನಗರ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ, ಇದೀಗ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಷ ಪ್ರಸಾದ ವಿತರಣೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ವಿಷ ಪ್ರಸಾದ ಹಂಚಿದ ಮೂವರು ಮಹಿಳೆಯರನ್ನು ಈಗಾಗಲೇ ಬಂಧಿಸಲಾಗಿದೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಶ್ರೀಗೌರಿ ಎಂಬಾಕೆಯನ್ನು ಕೊಲೆ
ಮಾಡಲು ಲಕ್ಷ್ಮೀ ಹಾಗೂ ಅಮರಾವತಿ ಮತ್ತು ಪಾವರ್ತಮ್ಮ ಎಂಬುವರು ಸಂಚು ರೂಪಿಸಿ, ಕೇಸರಿಬಾತ್‌ಗೆ ವಿಷ ಬೆರೆಸಿದ್ದಾರೆ. ಇದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. 

● ಬಿ.ದಯಾನಂದ್‌, ಕೇಂದ್ರ ವಲಯ ಐಜಿಪಿ.

● ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next