Advertisement

ಸ್ತ್ರೀ ಸಾಹಸ, ಸಾಧನೆಯ ಸಂಭ್ರಮ

06:27 AM Mar 09, 2019 | |

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಅಡುಗೆ ಮನೆಯಿಂದ ಆಕಾಶದವರೆಗೂ ಸಾಧನೆಗೈದ ನಾರಿಯರ ಸಂಭ್ರಮ ನಗರದಲ್ಲಿ ಅನಾವರಣಗೊಂಡಿತ್ತು. ಸ್ತ್ರೀಯರ ಸಾಹಸ, ಸಾಧನೆ, ಆಕೆಯ ಅಂತರಂಗ ತೆರೆದಿಡುವ ಸಮಾರಂಭಗಳು, ಸ್ತ್ರೀಯರಿಗೆ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಜಾಗೃತಿ, ಮಹಿಳಾ ಆರೋಗ್ಯ ಶಿಬಿರ ಸೇರಿದಂತೆ ವಿವಿಧ-ವಿಶಿಷ್ಟ ಕಾರ್ಯಕ್ರಮಗಳಲ್ಲಿ ಸಾಧಕಿಯರ ಲೋಕ ತೆರೆದುಕೊಂಡಿತ್ತು.

Advertisement

ಸ್ತ್ರೀ ಜಾಗೃತಿ, ನೈಟಿಂಗೆಲ್‌ ಪ್ರತಿಷ್ಠಾನ, ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್ ಕಲ್ಚರ್‌, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮ, ಬೆಂಗಳೂರು ವಿವಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ವಿಭಿನ್ನವಾದ ವಿವಿಧ ಕಾರ್ಯಕ್ರಮ ಆಯೋಜಿಸಿದ್ದವು. ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ರಂಗ ಬದುಕು ಟ್ರಸ್ಟ್‌ ಪುರಭವನದಲ್ಲಿ ಹಮ್ಮಿಕೊಂಡಿದ್ದ “ನನ್ನೊಳಗಿನ ನಾನು’ ನಾಟಕ ಪ್ರದರ್ಶನ ಮಹಿಳೆಯರ ವಿಸ್ತೃತದ ಬದುಕಿನ ಅನಾವರಣ ಮಾಡಿತು. ನಟಿಯರಾದ ವಿಜಯಲಕ್ಷ್ಮೀ, ಗಂಗಾ ನಕ್ಷತ್ರಾ ಹಾಗೂ ಆಶಾ ರಾಣಿ ಅಭಿನಯ ಪ್ರೇಕ್ಷಕರ ಮನಸೆಳೆಯಿತು.

ಸಾಧಕಿಯರಿಗೆ ಸನ್ಮಾನದ ಗೌರವ: ಮಕ್ಕಳ ಜಾಗೃತಿ ಸಂಸ್ಥೆಯ ಜಾಯ್ ಶ್ರೀನಿವಾಸನ್‌, ಮಕ್ಕಳ ಕಥೆಗಾರ್ತಿ ಅಪರ್ಣಾ ಆತ್ರೇಯಾ, ಆಸಿಡ್‌ ದಾಳಿ ಸಂತ್ರಸ್ತೆ ಪ್ರಗ್ಯಾ ಪ್ರಸೂನ್‌, ರಿವೈವ್‌ ಸಂಸ್ಥೆಯ ಸಾವಿತ್ರಿ ದೇವಿ, ಮಹಿಳಾ ಹೋರಾಟಗಾರ್ತಿ ಶೋಭಾ ಕಲ್ಕುರ್‌, ಹೂವಿನ ಹೊಳೆ ಫೌಂಡೇಷನ್‌ನ ನಾಗರತ್ನಮ್ಮ, ವಿಶೇಷ ಚೇತನ ಮಕ್ಕಳ ಶಿಕ್ಷಕಿ ದೀಪಾ .ಎನ್‌, ಚಿನ್ಮಯಿ ಪ್ರವಿಣ್‌ ಅವರಿಗೆ ಈಸ್ಟರ್ನ್ ಭೂಮಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂಥ್‌, ಕ್ರೀಡಾಪಟು ಅಂಜು ಬಾಬಿ ಜಾರ್ಜ್‌ ಹಾಗೂ ಇತರರಿದ್ದರು.

ಹುತ್ಮಾತ ಯೋಧನ ಪತ್ನಿ, ಪೋಷಕರಿಗೆ ಗೌರವ: ಪುಲ್ವಾಮ ಉಗ್ರರ ದಾಳಿ ವೇಳೆ ಹುತಾತ್ಮರಾದ ವೀರ ಯೋಧ ಎಚ್‌.ಗುರು ಅವರ ಪತ್ನಿ ಎಸ್‌.ಕಲಾವತಿ ಅವರನ್ನು ಗೌರವಿಸುವ ಮೂಲಕ ಕೆಎಸ್‌ಆರ್‌ಟಿಸಿಯಿಂದ ಮಹಿಳಾ ದಿನ ಆಚರಿಸಲಾಯಿತು. ಕಲಾವತಿ ಅವರಿಗೆ ಕೆಎಸ್‌ಆರ್‌ಟಿಸಿಯಿಂದ 25 ಸಾವಿರ ನಗದು ಮತ್ತು ಉಚಿತ ಬಸ್‌ ಪಾಸ್‌ ಹಾಗೂ ಎಚ್‌.ಗುರು ಅವರ ಪೋಷಕರಾದ ಹೊನ್ನಯ್ಯ ಹಾಗೂ ಚಿಕ್ಕತಾಯಮ್ಮ ಅವರಿಗೆ ಉಚಿತ ಬಸ್‌ ಪಾಸ್‌ ನೀಡಲಾಯಿತು. ಸಂಸ್ಥೆಯ 17 ವಿಭಾಗ ಮತ್ತು 2 ಕಾರ್ಯಾಗಾರಗಳಿಂದ ಒಬ್ಬ ಮಹಿಳಾ ನಿರ್ವಾಹಕಿ ಮತ್ತು ಒಬ್ಬ ಮಹಿಳಾ ತಾಂತ್ರಿಕ ಸಿಬ್ಬಂದಿ ಹಾಗೂ ಭದ್ರತಾ ರಕ್ಷಕಿ ಸೇರಿ ಒಟ್ಟು 49 ಮಹಿಳಾ ಸಿಬ್ಬಂದಿಯನ್ನು ಈ ವೇಳೆ ಸನ್ಮಾನಿಸಲಾಯಿತು.

ಮಹಿಳಾ ಜಾಗೃತಿ: ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಮತ್ತು ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ ಬೆಂಗಳೂರು ಜಿಲ್ಲಾ ಸಮಿತಿಯಿಂದ ಹೆಣ್ಣು ಮಕ್ಕಳ ಘನತೆ ಹಾಗೂ ಭದ್ರತೆ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.

Advertisement

ಬೆಂಗಳೂರು ವಿವಿಯಲ್ಲಿ ಮಹಿಳಾ ದಿನ: ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದಿಂದ ಹಮ್ಮಿಕೊಂಡಿದ್ದ ಮಹಿಳಾ ದಿನದ ಕಾರ್ಯಕ್ರಮದಲ್ಲಿ  ಮಾತನಾಡಿದ ಪ್ರತಿಭಾ ನಂದಕುಮಾರ್‌, ಪುರುಷ ಮತ್ತು ಮಹಿಳೆ ಒಟ್ಟಾಗಿ ಸಮಾಜದ ಅಸಮತೋಲನ ನಿವಾರಿಸಬೇಕು ಎಂದರು. ಹಾಗೇ, ಅರ್ಧನಾರೀಶ್ವರ ಪರಿಕಲ್ಪನೆಯಲ್ಲಿರುವ ಸ್ತ್ರೀವಾದದ ಹಿನ್ನೆಲೆ ವಿವರಿಸಿದರು. ಕುಲಪತಿ ಪ್ರೊ.ವೇಣುಗೋಪಾಲ್‌ ಇದ್ದರು. ಸಮಾರಂಭದಲ್ಲಿ ನಿವೃತ್ತ ಬೋಧಕ ಮತ್ತು ಬೋಧಕೇತರ ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಮಹಿಳೆಯರ ಹಕ್ಕುಗಳ ಕುರಿತು ಉಪನ್ಯಾಸ: ವಿಶ್ವವಿದ್ಯಾಲಯ ಕಾನೂನು ಕಾಲೇಜು ಹಾಗೂ ಕಾನೂನು ಅಧ್ಯಯನ ವಿಭಾಗದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ಚಿಂತಕರು ಹಾಗೂ ರೈತಪರ ಹೋರಾಟಗಾರ್ತಿ ಸುನಂದಾ ಜಯರಾಮ್‌ ಅವರಿಂದ ಉಪನ್ಯಾಸ ಏರ್ಪಡಿಸಲಾಗಿತ್ತು. ಮಹಿಳೆಯರ ಹಕ್ಕು ಹಾಗೂ ಕಾನೂನುಗಳನ್ನು ಸರಿಯಾಗಿ ಅನುಷ್ಠಾನಗೊಳಸಿದರೆ ದೌರ್ಜನ್ಯ ಕಡಿಮೆಯಾಗುತ್ತದೆ. ಮಹಿಳಾ ಅಧ್ಯಯನದ ತುರ್ತು ಅಗತ್ಯ, ವ್ಯಾಪ್ತಿ ಹಾಗೂ ಮಹತ್ವದ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸಬೇಕು ಎಂದರು.

ಪುರುಷ ಪ್ರಧಾನ ಕ್ಷೇತ್ರದಲ್ಲಿ ಮಹಿಳೆಯ ಪಾದರ್ಪಣೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಚರಣೆ ನಡೆಸುತ್ತಿರುವ ಬಿಐಎಎಲ್‌ ಫೆ.19ರಂದು ಏರ್‌ಕ್ರಾಫ್ಟ್ ರೆಸ್‌ಕ್ಯೂ ಆಂಡ್‌ ಫೈಟಿಂಗ್‌ ತಂಡಕ್ಕೆ 14 ಮಹಿಳೆಯೆರನ್ನು ನೇಮಕ ಮಾಡಿಕೊಂಡಿದೆ. ಇದರೊಂದಿಗೆ ಬೆಂಗಳೂರು ವಿಮಾನ ನಿಲ್ದಾಣ ಇಷ್ಟೊಂದು ಸಂಖ್ಯೆಯ ಮಹಿಳಾ ಅಗ್ನಿಶಾಮಕ ತಂಡ ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಕರ್ನಾಟಕದ ಎಲ್ಲೆಡೆಯಿಂದ ನೇಮಕ ಮಾಡಿರುವ ಮಹಿಳೆಯರು, ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೂಲ ತರಬೇತಿ ಪಡೆಯುತ್ತಿದ್ದಾರೆ. ಭಾರತೀಯ ವಿಮಾನ ಯಾನ ಕ್ಷೇತ್ರದ ಅಗ್ನಿಶಾಮಕ ದಳದಲ್ಲಿನ ಮಹಿಳೆಯರ ಪ್ರತಿನಿಧ್ಯಕ್ಕೆ ಸಂಬಂಧಿಸಿದಂತೆ ಇದು ಗಮನಾರ್ಹ ಮೈಲುಗಲ್ಲಾಗಿದೆ.

ಮಹಿಳೆಯೊಳಗಿನ ನಾಯಕಿಗೆ ಗೌರವ: ಎಂಬೆಸಿ ಆಫೀಸ್‌ ಪಾರ್ಕ್‌ನಿಂದ ಮಹಿಳೆಯಲ್ಲಿನ ನಾಯಕತ್ವವನ್ನು ಗುರುತಿಸುವ ವಿಶೇಷ ಪರಿಕಲ್ಪನೆಯೊಂದಿಗೆ ಮಹಿಳಾ ದಿನ ಆಚರಿಸಲಾಯಿತು. 3 ಬಾರಿ ಫಿಲಂಫೇರ್‌ ಪ್ರಶಸ್ತಿ ಗಳಿಸಿ ಕ್ಯಾನ್ಸರ್‌ನಿಂದ ಬದುಕು ಗೆದ್ದು ಬಂದ ನಟಿ ಮನಿಷಾ ಕೊಯಿರಾಲಾ ಈ ಸಂಭಮ್ರದಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು, “ಕ್ಯಾನ್ಸರ್‌ ಬಂದಾಗ ಇಲ್ಲಿಗೆ ಬದುಕು ಮುಗಿಯಿತು ಎಂದು ನಾನು ಯೋಚಿಸಲಿಲ್ಲ. ಬದಲಿಗೆ, ಇಲ್ಲಿಂದ ಬದುಕಿನ ಹೋರಾಟ ಶುರು ಎಂದು ಭಾವಿಸಿ ಸದಾ ಸಕರಾತ್ಮಕ ಯೋಚನೆಗಳನ್ನು ರೂಢಿಸಿಕೊಂಡು ಬಂದೆ. ಆ ಸಕರಾತ್ಮಕ ಚಿಂತನೆಗಳೇ ನನ್ನನ್ನು ಕ್ಯಾನ್ಸರ್‌ನಿಂದ ಪಾರು ಮಾಡಿದವು. ಪ್ರೀತಿಯಿಂದ ಜೀವಿಸುವುದನ್ನು ಕಲಿತರೆ ಯಾವುದೇ ಸಾಧನೆ ಸಾಧ್ಯವಾಗುತ್ತದೆ,’ ಎಂದರು.

ಮಹಿಳಾ ದಿನದ ಮ್ಯಾರಥಾನ್‌: ಮಹಿಳೆಯರು ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ತ್ತೇಜಿಸುವ ಉದ್ದೇಶದಿಂದ ಎಂಬೆಸಿ ಮಾನ್ಯತಾ ಬ್ಯುಸಿನೆಸ್‌ ಪಾರ್ಕ್‌ನಲ್ಲಿ ಮ್ಯಾರಥಾನ್‌ ಆಯೋಜಿಸಲಾಗಿತ್ತು. ಅಲ್ಲದೆ ಈ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನು ಶಾಸ್ತ್ರೀ ವಿಶೇಷ ಅಕಾಡೆಮಿಗೆ ನೀಡಲಾಯಿತು. ಮಹಿಳೆ ಮತ್ತು ಪುರುಷರಿಗೆ ಮುಕ್ತವಾಗಿ ಆಯೋಜಿಸಿದ್ದ ಈ ಮ್ಯಾರಾಥಾನ್‌ನಲ್ಲಿ ಸುಮಾರು 2 ಸಾವಿರ ಮಂದಿ ಭಾಗವಹಿಸಿದ್ದರು.

ಪಾಲಿಕೆಯಲ್ಲಿ ಮಹಿಳಾ ದಿನ: ಮಹಿಳಾ ದಿನದ ಅಂಗವಾಗಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಮಹಿಳಾ ಅಧಿಕಾರಿ ಮತ್ತು ನೌಕರರಿಗೆ ಮಹಿಳಾ ಪ್ರಶಸ್ತಿ ಸಮಾರಂಭದಲ್ಲಿ ಮೇಯರ್‌ ಗಂಗಾಂಬಿಕೆ ಸಿಬ್ಬಂದಿಯನ್ನು ಸನ್ಮಾನಿಸಿದರು. ಉಪ ಮೇಯರ್‌ ಭದ್ರೇಗೌಡ, ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ, ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷೆ ಲಾವಣ್ಯ ಗಣೇಶ ರೆಡ್ಡಿ, ಕೌನ್ಸಿಲ್‌ ಕಾರ್ಯದರ್ಶಿ ಪಲ್ಲವಿ, ನಟ ಬ್ಯಾಂಕ್‌ ಜನಾರ್ಧನ್‌, ನಟಿ ರೇಖಾದಾಸ್‌, ನೌಕರರ ಸಂಘದ ಅಧ್ಯಕ್ಷ ಅಮೃತ್‌ರಾಜ್‌, ಗೌರವಾಧ್ಯಕ್ಷ ಎಚ್‌.ವಿ. ಅಶ್ವತ್ಥ್, ಪ್ರಧಾನ ಕಾರ್ಯದರ್ಶಿ ನಲ್ಲಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next