ವಿಟ್ಲ : ಗ್ರಾಮೋತ್ಸವ ಸಮಾರಂಭಕ್ಕಾಗಿ ಏರ್ಪಡಿಸಿದ ಸಮಾಲೋಚನೆ ಸಭೆಯಿಂದ ಅಭಿನಂದನೆ ಸಭೆಯವರೆಗೆ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಒಂದು ಕಾರ್ಯಕ್ರಮ ಇನ್ನೊಂದಕ್ಕೆ ಪ್ರೇರಣೆ, ಆದರ್ಶವಾಗಿರ ಬೇಕು. ಕಲ್ಪನೆಯಲ್ಲೇ ಉಳಿದಾಗ ವಾಸ್ತವ ಮರೆಯುವ ಸಾಧ್ಯತೆ ಇರುತ್ತದೆ, ಗ್ರಾಮೋತ್ಸವ ವಾಸ್ತವವಾಗಿ ಹೊರ ಹೊಮ್ಮಿದೆ. ಸಮಾಜದ ಹಿತಕ್ಕಾಗಿ ಗ್ರಾಮೋತ್ಸವ ನಡೆದಿದೆ. ಲೋಕಕಲ್ಯಾಣದ ಹಿಂದೆ ಭಗವಂತನ ಸೇವೆ ಅಡಗಿದೆ. ಭಗವಂತನ ಮೇಲೆ ಭಕ್ತಿ ಹಾಗೂ ವಿಶ್ವಾಸ ದಿಂದ ಇದ್ದಾಗ ಯಶಸ್ಸಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಒಡಿಯೂರು ಶ್ರೀ ಜನ್ಮದಿನೋತ್ಸವ-ಗ್ರಾಮೋತ್ಸವದ ಯಶಸ್ಸಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಾಧ್ವಿ ಮಾತಾನಂದಮಯೀ ಆಶೀರ್ವಚನ ನೀಡಿದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಮಾತನಾಡಿ, ಕ್ಷೇತ್ರದ ಸೇವೆಯಲ್ಲಿ ಸಮರ್ಪಣೆ ಭಾವದ ಕಾರ್ಯ ಎಲ್ಲರಿಂದ ನಡೆದಿದೆ. ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ ಕಾರ್ಯಕ್ರಮಗಳು ಯಶಸ್ವಿಯಾಗಿವೆ. ಎಲ್ಲರಲ್ಲಿ ಸ್ವಚ್ಛತೆಯ ಎಚ್ಚರ ಹಾಗೂ ಅರಿವು ಮೂಡಿದೆ. ಪ್ರತಿಯೊಬ್ಬರ ಶಕ್ತಿ ಮೀರಿದ ಕೆಲಸ ನಿರ್ವಹಣೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ. ಗ್ರಾಮೋತ್ಸವದ ಅಂಗವಾಗಿ ಕಳೆದ ಗ್ರಾಮೋತ್ಸವದಿಂದ ಪ್ರಸಕ್ತ ಸಾಲಿನ ಗ್ರಾಮೋತ್ಸವದ ವರೆಗೆ ಅರ್ಹ ಫಲಾನುಭವಿಗಳಿಗೆ ಮತ್ತು ಸೂಕ್ತ ಯೋಜನೆಗಳಿಗೆ ಒಟ್ಟು 37 ಲಕ್ಷ ರೂ.ಗಳ ವಿನಿಯೋಗವಾಗಿದೆ ಎಂದರು.
ಒಡಿಯೂರು ಶ್ರೀ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಜಿ. ತಾಳಿಪ್ಪಾಡಿಗುತ್ತು ಮಾತನಾಡಿ, ಸೇವೆಯ ಅವಕಾಶವನ್ನು ಪ್ರತಿಯೊಬ್ಬರು ಉಪಯೋಗಿಸಿ ಕೊಳ್ಳಬೇಕು. ಭಕ್ತಿಯಿಂದ ಮಾಡುವ ಕಾರ್ಯ ಸಣ್ಣದಾದರೂ ಬಹಳಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದರು.
ಸಮಿತಿಯ ಉಪಾಧ್ಯಕ್ಷ ಉದ್ಯಮಿ ಕರುಣಾಕರ ಶೆಟ್ಟಿ ದೋಹಾ ಕತ್ತಾರ್, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪದ್ಮನಾಭ ಒಡಿಯೂರು, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಜಯಂತ್ ಜೆ. ಕೋಟ್ಯಾನ್, ವಾಸುದೇವ ಆರ್.ಕೊಟ್ಟಾರಿ, ಸಂತೋಷ್ ಭಂಡಾರಿ, ಯಶವಂತ ವಿಟ್ಲ, ಸಂತೋಷ್ ಕುಮಾರ್ ಮತ್ತಿತರರಿದ್ದರು.
ಲಿಂಗಪ್ಪ ಗೌಡ ಪನೆಯಡ್ಕ, ಆಶಾ ಭಾಸ್ಕರ ಶೆಟ್ಟಿ, ರಘುನಾಥ ಶೆಟ್ಟಿ ಪಟ್ಲಗುತ್ತು, ಅಜಿತ್‌ನಾಥ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಕ್ರೀಡಾ ಸಮಿತಿ ಸಂಚಾಲಕ ಸದಾಶಿವ ಶೆಟ್ಟಿ ಒಡಿಯೂರು ಸ್ವಾಗತಿಸಿ, ಕೋಶಾಧಿಕಾರಿ ಬಿ.ಕೆ. ಚಂದ್ರಶೇಖರ್ ಲೆಕ್ಕಪತ್ರ ಮಂಡಿಸಿದರು. ಒಡಿಯೂರು ತುಳು ಕೂಟದ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ ವಂದಿಸಿದರು. ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸದಾಶಿವ ಅಳಿಕೆ ನಿರೂಪಿಸಿದರು.
ಸ್ವಾಮೀಜಿ ಗದ್ಗದಿತ
ಎತ್ತಿನಹೊಳೆಯಂತಹ ನದಿ ತಿರುಗಿಸುವ ಯೋಜನೆ ಮೂಲಕ ಪ್ರಕೃತಿಯನ್ನು ಕೆಣಕುವ ಕಾರ್ಯ ಸರಿಯಲ್ಲ. ಕೇರಳ, ಕೊಡಗು ಭಾಗದಲ್ಲಿ ಪ್ರಕೃತಿ ವಿಕೋಪಕ್ಕೆ ಬಹಳಷ್ಟು ನಷ್ಟ ಸಂಭವಿಸಿದೆ. ಅಲ್ಲಿಗೆ ನಮ್ಮ ಸಹಕಾರ ಅಗತ್ಯವಿರುವ ಹಿನ್ನೆಲೆಯಲ್ಲಿ ಗ್ರಾಮೋತ್ಸವದಲ್ಲಿ ಉಳಿಕೆಯಾದ 2 ಲಕ್ಷ ರೂ. ಮೊತ್ತವನ್ನು ನೆರೆ ಪರಿಹಾರವಾಗಿ ಸಂದಾಯ ಮಾಡಲಾಗುವುದು ಎಂದು ಅವರು ಆಶೀರ್ವಚನದ ನುಡಿಗಳನ್ನಾಡುತ್ತಿದ್ದಂತೆ ಗದ್ಗದಿತರಾದರು. ಆಶೀರ್ವಚನವನ್ನು ಅರ್ಧಕ್ಕೇ ಮೊಟಕುಗೊಳಿಸಿದರು. ವಂದನಾರ್ಪಣೆಯ ಬಳಿಕ ಮತ್ತೆ ಸ್ವಾಮೀಜಿ ಆಶೀರ್ವಚನ ಮುಂದುವರಿಸಿದರು.
ಆನಂದೋತ್ಸವ
ಸಮಿತಿಯ ಪದಾಧಿಕಾರಿಗಳ ತ್ಯಾಗ ಮತ್ತು ಸೇವಾ ಮನೋಭಾವದಿಂದ ಸಾಧ್ಯವಾಗಿದೆ. ಗ್ರಾಮೋತ್ಸವ ಆನಂದೋತ್ಸವವಾಗಿ ನಡೆದಿದೆ. ಶ್ರೀ ಗುರುಗಳ ಜೀವನ ಪ್ರತಿಯೊಬ್ಬರಿಗೂ ಸಂದೇಶ.
– ಸಾಧ್ವಿ ಮಾತಾನಂದಮಯೀ
ಒಡಿಯೂರು