ಮಹಾನಗರ: ಮಂಗಳೂರಿನ ದಸರಾ ಮಹೋತ್ಸವ ಈ ನೆಲದ ಕಲೆ, ಸಂಸ್ಕೃತಿಯ ಪ್ರತೀಕ. ತಾಯ್ನೆಲದಲ್ಲಿ ನಡೆಯುತ್ತಿರುವ ಈ ಉತ್ಸವ ವಿಶ್ವ ವಿಖ್ಯಾತಗೊಂಡಿರುವುದು ಹೆಮ್ಮೆಯ ವಿಚಾರ ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ| ಜಯಮಾಲಾ ಹೇಳಿದರು. ದಸರಾ ಮಹೋತ್ಸವದ ಅಂಗವಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಗುರುವಾರ ನಡೆದ ಕ್ರೀಡಾ ಸಾಧಕರಿಗೆ ಸಮ್ಮಾನ ಹಾಗೂ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಗುರುವಾರ ಮುಖ್ಯ ಅತಿಥಿಯಾಗಿದ್ದರು.
ಬಾಲ್ಯದಿಂದಲೇ ಈ ದೇಗುಲವನ್ನು ನಾನು ಬಲ್ಲೆ. ಕುದ್ರೋಳಿ ದೇವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗೆ ಒತ್ತು ನೀಡಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಜೆ. ಆರ್. ಲೋಬೋ, ನಿರೂಪಕಿ ಅನುಶ್ರೀ ಮುಖ್ಯ ಅತಿಥಿಗಳಾಗಿದ್ದರು. ಕುದ್ರೋಳಿ ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಪದ್ಮರಾಜ್ ಆರ್., ಕಾರ್ಯದರ್ಶಿ ಮಾಧವ ಸುವರ್ಣ, ಎ.ಜೆ. ಆಸ್ಪತ್ರೆಯ ನಿರ್ದೇಶಕ ಪ್ರಶಾಂತ್ ಮಾರ್ಲ, ಯುನಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಅಜ್ಮಲ್, ಬೆಂಗಳೂರು ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ವೇದಕುಮಾರ್, ಅಭಿವೃದ್ಧಿ ಸಮಿತಿಯ ಉರ್ಮಿಳಾ ರಮೇಶ್ ಕುಮಾರ್, ಬಿ.ಜಿ. ಸುವರ್ಣ, ದೇವೇಂದ್ರ ಪೂಜಾರಿ, ಶೇಖರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಸಮ್ಮಾನ
ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿದ ಎಂ. ಆರ್. ಪೂವಮ್ಮ, ಜಗದೀಶ್ ಕೆ., ಪ್ರದೀಪ್ ಆಚಾರ್ಯ, ದೇವಿಕಾ, ಪಂಚಮಿ ಬೋಳಾರ್, ರವಿಕುಮಾರ್ ಬಲ್ಲಾಳ್‌ಬಾಗ್ ಸೇರಿದಂತೆ ಇತರ ಸಾಧಕರನ್ನು ಸಮ್ಮಾನಿ ಸಲಾಯಿತು. ಪತ್ರಕರ್ತ ವಿಜಯ್ ಕೋಟ್ಯಾನ್, ಶಿವಪ್ರಸಾದ್ ಸಮ್ಮಾನಿತರ ವಿವರ ಓದಿದರು. ಪತ್ರಕರ್ತ ಕೀರ್ತಿರಾಜ್ ಪಡು ನಿರೂಪಿಸಿದರು.