Advertisement

ಮನೋಹರ ಪ್ರಸಾದ್‌ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

02:48 AM Jul 16, 2020 | Hari Prasad |

ಮಂಗಳೂರು: ಉದಯವಾಣಿಯ ಮಂಗಳೂರು ಕಚೇರಿಯಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿ, ಅನಂತರದಲ್ಲಿ ಮುಖ್ಯ ವರದಿಗಾರರಾಗಿ, ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಹಾಗೂ ಸಹಾಯಕ ಸಂಪಾದಕರಾಗಿ ಒಟ್ಟು 36 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿ ನಿವೃತ್ತರಾದ ಮನೋಹರ ಪ್ರಸಾದ್‌ ಅವರನ್ನು ಸಂಸ್ಥೆ ವತಿಯಿಂದ ಉದಯವಾಣಿಯ ಮಂಗಳೂರು ಕಚೇರಿಯಲ್ಲಿ ಬುಧವಾರ ಹೃದಯಸ್ಪರ್ಶಿಯಾಗಿ ಬೀಳ್ಕೊಡಲಾಯಿತು.

Advertisement

ಸಂಸ್ಥೆಯ ಪರವಾಗಿ ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿರುವ ವಿನೋದ್‌ ಕುಮಾರ್‌ ಅವರು ಉಪಸ್ಥಿತರಿದ್ದು, ಮನೋಹರ ಪ್ರಸಾದ್‌ ಅವರನ್ನು ಶಾಲು ಹೊದೆಸಿ ಸಮ್ಮಾನಿಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು.

ಅಸಾಧಾರಣ ಸೇವೆ
ಈ ವೇಳೆ ಮಾತನಾಡಿದ ವಿನೋದ್‌ ಕುಮಾರ್‌ ಅವರು, ಮನೋಹರ ಪ್ರಸಾದರು ಕಳೆದ 36 ವರ್ಷಗಳಿಂದ ಉದಯವಾಣಿಯ ಸರ್ವತೋಮುಖ ಬೆಳವಣಿಗೆಗೆ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ. ವೃತ್ತಿ ಬದುಕಿನಲ್ಲಿ ತಮ್ಮ ಸುದ್ದಿ, ಲೇಖನ ಮತ್ತು ಸಾರ್ವಜನಿಕ ಸಂಪರ್ಕದ ಮೂಲಕ ಚಿರಪರಿಚಿತರಾಗಿದ್ದು, ಜನರ ಅಪಾರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿದ್ದಾರೆ. ಕರಾವಳಿ ಭಾಗದಲ್ಲಿ ಅವರು ತಮ್ಮ ಅಗಾಧ ಜ್ಞಾನ ಸಂಪನ್ನತೆಯ ಮೂಲಕ ನಡೆದಾಡುವ ವಿಶ್ವಕೋಶ ಎನಿಸಿದ್ದಾರೆ. ಉದಯವಾಣಿ ಪತ್ರಿಕೆಗೆ ಸುಮಾರು ಮೂರೂವರೆ ದಶಕಕ್ಕೂ ಹೆಚ್ಚು ಕಾಲ ನಿರಂತರ ಸೇವೆ ಸಲ್ಲಿಸಿ ರುವ ಅವರ ನಿವೃತ್ತ ಜೀವನ ಸುಖಕರ ವಾಗಿರಲಿ ಎಂದು ಹಾರೈಸಿದರು.

ಸಮ್ಮಾನ ಸ್ವೀಕರಿಸಿದ ಮನೋಹರ ಪ್ರಸಾದ್‌ ಅವರು ಮಾತನಾಡಿ, ‘ನಾನು ಉದಯವಾಣಿಯಲ್ಲಿ ಇದ್ದ ಕಾರಣ ಇಷ್ಟೊಂದು ಸಾಧನೆ ಮಾಡುವ ಜತೆಗೆ ಜನರ ಪ್ರೀತಿ-ವಿಶ್ವಾಸ ಗಳಿಸಲು ಸಾಧ್ಯವಾಗಿದೆ. ಉದಯವಾಣಿಯು ನನ್ನ ವೃತ್ತಿ ಬದುಕಿನಲ್ಲಿ ಎಲ್ಲ ರೀತಿಯ ಅವಕಾಶವನ್ನು ನೀಡಿ ಪ್ರೋತ್ಸಾಹಿಸಿದ್ದಕ್ಕೆ ನಾನು ಸದಾ ಸಂಸ್ಥೆಯ ಆಡಳಿತ ಮಂಡಳಿಯವರಿಗೆ ಹಾಗೂ ಎಲ್ಲ ಸಹೋದ್ಯೋಗಿಗಳಿಗೆ ಆಭಾರಿಯಾಗಿದ್ದೇನೆ ಎಂದರು.

ಉದಯವಾಣಿಯ ಮಾರ್ಕೆಟಿಂಗ್‌ ವಿಭಾಗ ಮುಖ್ಯಸ್ಥ ರಾಮಚಂದ್ರ ಮಿಜಾರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಾರ್ಕೆಟಿಂಗ್‌ ವಿಭಾಗದ ಸೀನಿಯರ್‌ ಮ್ಯಾನೇಜರ್‌ ಸತೀಶ್‌ ಮಂಜೇಶ್ವರ ಅವರು ಸಮ್ಮಾನ ಪತ್ರ ವಾಚಿಸಿದರು. ಸುದ್ದಿ ವಿಭಾಗದ ಡೆಪ್ಯುಟಿ ಬ್ಯೂರೋ ಚೀಫ್‌ ಸುರೇಶ್‌ ಪುದುವೆಟ್ಟು ಮತ್ತು ಮ್ಯಾಗಸಿನ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಆನಂದ್‌ ಕೆ. ಅವರು ಉದಯವಾಣಿಯಲ್ಲಿ ಮನೋಹರ ಪ್ರಸಾದ್‌ ಅವರ ಸೇವೆಯನ್ನು ಪ್ರಶಂಸಿಸಿ ಶುಭ ಹಾರೈಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next