Advertisement

9 ರಂದು ಸನ್ಮಾನ ಸಮಾರಂಭ: ಆಂಜನೇಯ ಗುರೂಜಿ

07:27 PM Apr 07, 2021 | Team Udayavani |

ದಾವಣಗೆರೆ : ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ಮೂರನೇ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಸೇವೆ ಸಲ್ಲಿಸಿದ ಪದಾಧಿಕಾರಿಗಳ ಸನ್ಮಾನ ಮತ್ತು ಶೇ. 7.5 ಮೀಸಲಾತಿ ಕುರಿತಂತೆ ಮುಂದಿನ ಹಂತದ ಹೋರಾಟ ರೂಪುರೇಷೆ ಸಭೆ ಏ. 9 ರಂದು ದಾವಣಗೆರೆಯ ನಾಯಕ ಸಮಾಜದ ಹಾಸ್ಟೆಲ್‌ ಸಭಾಂಗಣದಲ್ಲಿ ನಡೆಯಲಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಮುಖಂಡ ಎನ್‌.ಎಂ. ಆಂಜನೇಯ ಗುರೂಜಿ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಸೇವೆ ಸಲ್ಲಿಸಿದ ಜಿಲ್ಲಾ ವಾಲ್ಮೀಕಿ ನಾಯಕ ಪದಾಧಿಕಾರಿಗಳಿಗೆ ಶ್ರೀ ಮಠದ ವತಿಯಿಂದ ಸನ್ಮಾನಿಸಲಾಗುವುದು. ಶುಕ್ರವಾರ ಬೆಳಗ್ಗೆ 10:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಜನಹಳ್ಳಿಯ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಅಧ್ಯಕ್ಷತೆ ವಹಿಸುವರು ಎಂದರು. ಬಹು ದಿನಗಳ ಬೇಡಿಕೆಯಾದ ಶೇ.7.5 ಮೀಸಲಾತಿಗೆ ಒತ್ತಾಯಿಸಿ ಹಲವಾರು ಬಾರಿ ಸರ್ಕಾರಗಳಿಗೆ ಮನವಿ ಸಲ್ಲಿಕೆ, ಪಾದಯಾತ್ರೆ ಒಳಗೊಂಡಂತೆ ಹಲವಾರು ಹೋರಾಟ ನಡೆಸಲಾಗಿದೆ.

ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಭರವಸೆ ನೀಡಿದ್ದ ಭರವಸೆ ಅನುಷ್ಠಾನಕ್ಕೆ ಬಾರದ ಹಿನ್ನೆಲೆಯಲ್ಲಿ ಮುಂದಿನ ಹಂತದ ಹೋರಾಟದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು. ಕೇಂದ್ರ ಸರ್ಕಾರ ವಾಲ್ಮೀಕಿ ನಾಯಕ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಕ್ಕೆ ಅನ್ವಯ ಆಗುವಂತೆ ಶೇ. 7.5 ಮೀಸಲಾತಿ ನೀಡಿರುವುದನ್ನೂ ರಾಜ್ಯ ಸರ್ಕಾರವೂ ನೀಡಬೇಕು.

ನ್ಯಾಯಮೂರ್ತಿ ನಾಗಮೋಹನ ದಾಸ್‌ ಸಮಿತಿ ಸಹ ಮೀಸಲಾತಿಗೆ ಒಪ್ಪಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮೀಸಲಾತಿ ನೀಡುವ ವಿಶ್ವಾಸ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ. ವೀರಣ್ಣ ಮಾತನಾಡಿ, ಮೇ 30 ರಂದು ದಾವಣಗೆರೆಯ ಹೊಂಡದ ವೃತ್ತದಲ್ಲಿ ಲುಂಗೆಪ್ಪ, ಬಸಪ್ಪ ಮತ್ತು ಬಡಗಿ ಕೃಷ್ಣಪ್ಪ ಸ್ಮರಣಾರ್ಥ ಸರ್ವ ಧರ್ಮ ವಿವಾಹ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾಹ ಮಹೋತ್ಸವ ಉದ್ಘಾಟಿಸುವರು. ಸಂಸದರು, ಜಿಲ್ಲೆಯ ಶಾಸಕರು, ಗಣ್ಯರು ಭಾಗವಹಿಸುವರು. ಆಸಕ್ತರು ಮೊ: 95917-10333, 80951-71787, 78920-39944, 87469-52478, 80504-08545 ಗೆ ಸಂಪರ್ಕಿಸಬಹುದು. ಸಾಮೂಹಿಕ ವಿವಾಹ ಮಹೋತ್ಸವ ನಡೆಸಲು ಜಿಲ್ಲಾಡಳಿತದ ಅನುಮತಿ ನೀಡಬೇಕಾಗುತ್ತದೆ. ಕೊರೊನಾ ಮಾರ್ಗಸೂಚಿ ಆಧಾರದಲ್ಲಿ ಮುಂದಿನ ಹೆಜ್ಜೆ ಇಡಲಾಗುವುದು. ಎಷ್ಟೇ ಜೋಡಿಗಳು ಬಂದರೂ ವಿವಾಹ ನಡೆಸಿಕೊಡಲಾಗುವುದು ಎಂದು ತಿಳಿಸಿದರು. ಮಂಜುನಾಥ ಶ್ಯಾಗಲೆ, ಗೋವಿಂದರಾಜ್‌, ಅಣ್ಣಾಪುರದ ಹೇಮಣ್ಣ, ಗುಮ್ಮನೂರು ಶಂಭುಲಿಂಗಪ್ಪ, ಚೇತನ್‌, ಗುಡಾಳ್‌ ವೆಂಕಟೇಶ್‌ ಎಸ್‌.ಕೆ. ಸ್ವಾಮಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next