Advertisement

‘ತುಳು ಭಾಷೆಗೆ ಒಲಿಸಿಕೊಳ್ಳುವ ಗುಣ ಇದೆ’

02:33 PM Jun 02, 2018 | |

ಮಹಾನಗರ : ತುಳು ಭಾಷೆ ಎಲ್ಲರನ್ನು, ಎಲ್ಲವನ್ನು ಒಲಿಸಿಕೊಳ್ಳುವ ಗುಣವನ್ನು ಹೊಂದಿದೆ. ಪ್ರೀತಿಯನ್ನು ಪಸರಿಸಿ ಎಲ್ಲರನ್ನು ಬಳಸಿಕೊಳ್ಳುವ ಗುಣ ತುಳು ಜನರಲ್ಲಿ ಇದೆ ಎಂದು ಮಂಗಳೂರು ವಿ.ವಿ. ಕುಲಪತಿ  ಪ್ರೊ| ಕೆ.ಭೈರಪ್ಪ ಹೇಳಿದರು.

Advertisement

ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ತುಳುವನ್ನು ಅಳವಡಿಸಿ ಕೊಳ್ಳಲು ಹಾಗೂ ಈ ಶೈಕ್ಷಣಿಕ ವರ್ಷದಿಂದಲೇ ನಗರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ತುಳುವಿನಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭಿಸಲು ವಿಶೇಷ ಆಸಕ್ತಿ ವಹಿಸಿದ ಕುಲಪತಿಯವರನ್ನು ನಾಡಿನ ತುಳುವರ ಪರವಾಗಿ ಅಕಾಡೆಮಿ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಅಭಿನಂದನ ಕಾರ್ಯ ಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ನಾಲ್ಕು ವರ್ಷಗಳ ತನ್ನ ಸೇವಾ ಅವಧಿಯಲ್ಲಿ ತುಳು ಭಾಷಿಗರ ನಡುವೆ ಇದ್ದು ಇಲ್ಲಿಯ ಉನ್ನತವಾದ ಸಂಸ್ಕೃತಿಯನ್ನು ತಿಳಿಯುವ, ಕಲಿಯುವ ಅವಕಾಶವಾಗಿದೆ. ತಾನು ವಿಜ್ಞಾನ ಕ್ಷೇತ್ರದಿಂದ ಬಂದಿದ್ದರೂ ಇಲ್ಲಿಯ ಜನರ ಸಾಂಸ್ಕೃತಿಕ ಮನಸ್ಸನ್ನು ಅರಿಯುವ ಪ್ರಯತ್ನ ಮಾಡಿದ್ದೇನೆ ಎಂದರು.

ಸ್ಪಂದಿಸುವ ಗುಣ ದೊಡ್ಡದು
ಪ್ರಕೃತಿಯ ನಡುವೆ ಸಾಂಸ್ಕೃತಿಕ ವಿಶೇಷತೆಗಳನ್ನು ಉಳಿಸಿಕೊಂಡು ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಿಕೊಂಡು ಮಂದುವರಿಯುತ್ತಿರುವ ನಗರ ಮಂಗಳೂರು. ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್‌, ಕೃಷಿ, ಕೈಗಾರಿಕೆಗಳ ನಡುವೆ ಭಾಷೆ, ಸಾಹಿತ್ಯ, ಸಂಸ್ಕೃತಿ, ನಾಡು ನುಡಿ ಎಲ್ಲದಕ್ಕೂ ಸ್ಪಂದಿಸುವ ದೊಡ್ಡ ಗುಣ ತುಳುನಾಡಿನಲ್ಲಿದೆ ಎಂದು ಹೇಳಿದರು.

ಹಿರಿಯ ಜನಪದ ವಿದ್ವಾಂಸ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಮ್ಮಾನ ನೆರವೇರಿಸಿದರು. ಮಂಗಳೂರು ವಿ.ವಿ.ಯ ತುಳು ಪೀಠದ ಅಧ್ಯಕ್ಷ ಪ್ರೊ| ಬಿ. ಶಿವರಾಮ ಶೆಟ್ಟಿ ಅಭಿನಂದನ ಭಾಷಣ ಮಾಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಅಧ್ಯಕ್ಷತೆ ವಹಿಸಿದ್ದು. ಅಕಾಡೆಮಿ ಸದಸ್ಯ, ಮಂಗಳೂರು ವಿ.ವಿ. ಉಪಕುಲಸಚಿವ ಪ್ರಭಾಕರ್‌ ನೀರುಮಾರ್ಗ ಸ್ವಾಗತಿಸಿದರು. ರಿಜಿಸ್ಟ್ರಾರ್‌ ಚಂದ್ರಹಾಸ ರೈ ಬಿ. ಪ್ರಸ್ತಾವನೆಗೈದರು. ಡಾ| ವಾಸುದೇವ ಬೆಳ್ಳೆ ನಿರೂಪಿಸಿ, ಸುಧಾ ನಾಗೇಶ್‌ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next