ಸುಬ್ರಹ್ಮಣ್ಯ: ಸಾಧನೆಗೆ ಕಠಿನ ಶ್ರಮ ಜತೆಗೆ ಛಲ ಅವಶ್ಯ. ಜೀವನದಲ್ಲಿ ಶಿಸ್ತು, ಸಾಧಿಸಬೇಕೆಂಬ ಹಂಬಲದಿಂದ ಮುನ್ನಡೆದರೆ ಸಾಧನೆ ಸಿದ್ಧಿಸುತ್ತದೆ ಎಂಬುದಕ್ಕೆ ಅಭಿಜ್ಞಾ ರಾವ್ ಅವರೇ ಸಾಕ್ಷಿ ಎಂದು ಸುಬ್ರಹ್ಮಣ್ಯ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಲೋಕೇಶ್ ಬಿ.ಎನ್.ಹೇಳಿದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಅಭಿಜ್ಞಾ ರಾವ್ ಬಿ. ಅವರಿಗೆ ಮಂಗಳವಾರ ಶಾಲು ಹೊದೆಸಿ, ಫಲಪುಷ್ಪ, ಕಿರು ಕಾಣಿಕೆ ನೀಡಿ, ಸಿಹಿ ತಿನ್ನಿಸಿ ಅವರು ಮಾತನಾಡಿದರು.
ನಗರಗಳಲ್ಲಿ ಕಲಿಕೆಗೆ ಸಾಕಷ್ಟು ವ್ಯವಸ್ಥೆಗಳಿರುತ್ತವೆ. ಗ್ರಾಮೀಣ ಭಾಗದಲ್ಲಿ ಅಷ್ಟು ಸೌಕರ್ಯಗಳು ಇರುವುದಿಲ್ಲ. ಇದೆಲ್ಲದರ ಮಧ್ಯೆ ಈಕೆ ಗ್ರಾಮೀಣ ಭಾಗದ ವಿದ್ಯಾರ್ಥಿಯಾಗಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಪ್ರಶಂಸನೀಯ. ಆಕೆ ಮುಂದೆ ಮತ್ತಷ್ಟು ಸಾಧನೆ ಮಾಡುವಂತಾಗಲಿ ಎಂದು ಅವರು ಹೇಳಿದರು.
ಪತ್ರಕರ್ತ ಭರತ್ ನೆಕ್ರಾಜೆ ಮಾತನಾಡಿ ಅಭಿಜ್ಞಾ ಸಾಧನೆಯಿಂದ ನಮಗೆ ಅತೀವ ಸಂತಸವಾಗಿದೆ. ಆಕೆ ಪತ್ರಕರ್ತನ ಮಗಳು ಎಂಬುದು ಹೆಮ್ಮೆಯ ವಿಷಯ ಎಂದರು. ಪತ್ರಕರ್ತರಾದ ರತ್ನಾಕರ ಸುಬ್ರಹ್ಮಣ್ಯ, ವಿಶ್ವನಾಥ ನಡುತೋಟ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್ ವಿಶ್ವಕರ್ಮ, ಅಭಿಜ್ಞಾ ಸಾಧನೆಯ ಗುಣಗಾನ ಮಾಡಿ, ಉಜ್ವಲ ಭವಿಷ್ಯ ಹಾರೈಸಿದರು.
ಗದ್ಗದಿತರಾದ ತಾಯಿ-ಮಗಳು
ಅಭಿಜ್ಞಾ ರಾವ್ ಅವರ ತಂದೆ ಬಿ. ವಿಠಲ್ ರಾವ್ ಉದಯವಾಣಿ ಪತ್ರಿಕೆಯಲ್ಲಿ ಸುದೀರ್ಘ ಅವಧಿ ಪತ್ರಕರ್ತರಾಗಿದ್ದವರು. ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಪುತ್ರಿಯ ಸಾಧನೆ ಖುಷಿ ತಂದಿದೆ. ಈ ಹೊತ್ತು ವಿಠಲ್ ರಾವ್ ಇರಬೇಕಿತ್ತು, ಮತ್ತಷ್ಟು ಖುಷಿ ಪಡುತ್ತಿದ್ದರು ಎಂದು ಸಭಿಕರು ಹೇಳಿದಾಗ ಅಭಿಜ್ಞಾ ರಾವ್ ಹಾಗೂ ಅವರ ತಾಯಿ ಆಶಾ ಬಿ. ರಾವ್ ಗದ್ಗದಿತರಾದರು. ಸಭಿಕರ ಕಣ್ಣುಗಳಲ್ಲೂ ನೀರು ಜಿನುಗಿತು.