ಹೌದು ನೀವು ಒದಿದ್ದು ನೂರಕ್ಕೆ ನೂರರಷ್ಟು ಸರಿಯಾಗಿದೆ, ಭಾವನೆಗಳು ಮಾರಾಟಕ್ಕಿವೆ ಸೋಶಿಯಲ್ ಮೀಡಿಯಾದ ಲೈಕು, ಕಮೆಂಟಿಗಾಗಿ.
ಅದೊಂದು ಕಾಲವಿತ್ತು ಮನೆಯಲ್ಲಿ ನಡೆದ ನೋವು ನಲಿವಿನ ಚರ್ಚೆಗಳು ನಾಲ್ಕು ಗೋಡೆ ಬಿಟ್ಟು ದೂರ ಹೋಗದ ಹಾಗೆ ನಮ್ಮ ನಮ್ಮಲ್ಲೆ ಉಳಿದು ಬಿಡುತ್ತಿತ್ತು. ಅಷ್ಟಕ್ಕೂ ತೀರಾ ಯಾವುದೋ ವ್ಯಕ್ತಿಯಿಂದಲೋ ಅಥವಾ ಅದ್ಯಾವುದೋ ಬೇಡವಾದ ವಿಚಾರಕ್ಕೆ ಮನಸ್ಸಿಗೆ ನೋವಾದಾಗ ನಮ್ಮದೇ ಪುಟ್ಟ ಡೈರಿಯಲ್ಲಿ ತೋಚಿದ್ದನ್ನು ಗೀಚಿ ಅಥವಾ ತೀರಾ ಹತ್ತಿರದವರೊಡನೆ ಹಂಚಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದೆವು.
ಕಾಲ ಕಳೆದಂತೆ, ತಂತ್ರಜ್ಞಾನ ಬೆಳೆದಂತೆ ಪುಸ್ತಕದ ಬದಲು ಮೊಬೈಲ್ ಬಂತೋ ನೀತಿ ಕಥೆಗಳನ್ನು ಹೇಳುತ್ತಿದ್ದ ಅಜ್ಜಿಯರಿಗೆ ಧಾರಾವಾಹಿಗಳ ಹುಚ್ಚು ಹಿಡಿದದ್ದು ಒಂದು ಕಡೆಯಾದರೆ, ಅಂಗಳದಲ್ಲಿ ಗೋಲಿ, ಕುಂಟೆಬಿಲ್ಲೆ ಆಡುತ್ತಿದ್ದ ಹುಡುಗರಿಗೆ ಪಬ್ಜಿ, ಕ್ಯಾಂಡಿಕ್ರಶ್‌ನಂತ ಆಟ ಆಡುವ ಹುಚ್ಚು ಇನ್ನೊಂದು ಕಡೆ, ಇವೆಲ್ಲದರ ನಡುವೆ ನಮ್ಮ ಯುವ ಪೀಳಿಗೆ ಲೈಕು, ಕಮೆಂಟಿನ ಮೋಹಕ್ಕೆ ಬಲಿಯಾಗಿ “ಜಾಣರು ಪೆದ್ದರಂತೆ, ಪೆದ್ದರು ಜಾಣರಂತೆ’ ವರ್ತಿಸಿ ರಾತೋ ರಾತ್ರಿ ಫೇಮಸ್ ಆಗುತ್ತಿ ರುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಅಷ್ಟಕ್ಕೂ ದಿನ ಬೆಳಗಾದರೆ ಅಂಗಳ ದಿಂದ ಹಿಡಿದು ಅಡುಗೆ ಮನೆಯ ಸುದ್ದಿಯೆಲ್ಲ ಹೊಸ ಗಾಡಿ ಕೊಂಡರೆ, ಹೊಸ ಬಟ್ಟೆ ಖರೀದಿಸಿದರೆ ಸಾಲದಕ್ಕೆ ಏನೋ ಒಂದು ಹೊಸ ತರಹದ ಅಡುಗೆ ಮಾಡಿದರೆ, ಪ್ರವಾಸಕ್ಕೆ ಹೊರಟರೆ ಮನೆ, ಅಂಗಳ, ದಾರಿ, ಬೆಟ್ಟ, ಗುಡ್ಡದಲ್ಲಿ ರೀಲ್ಸ್‌ಗಳದ್ದೆ ಅಬ್ಬರವನ್ನು ನೋಡಿ ಒಮ್ಮೆ ಆಲೋಚಿಸಿದಾಗ ನಾವು ಮಾಡುತ್ತಿರುವ ರೀಲ್ಸ್ ಪೋಸ್ಟ್‌ಗಳು ನಮಗಾಗಿ ಅಲ್ಲ ಇನ್ನೊಬ್ಬರ ಹೊಗಳಿಕೆಗಾಗಿ ಎಂಬುದಂತೂ ನೂರಕ್ಕೆ ನೂರರಷ್ಟು ಸತ್ಯ. ನೆನಪಿರಲಿ ಒಂದು ದಿನ ಹೊತ್ತು ಮೆರೆಸುವ ಜನ ಮತ್ತೂಂದು ನಕ್ಕು ಹೀಯಾಳಿಸುವುದು ಇಂದು ಸಾಮಾನ್ಯವಾಗಿದೆ.
ನಾವು ಬದುಕಬೇಕಾಗಿರುವುದು ನಮಗಾಗಿ. ಯಾವುದೋ ಲೈಕು ಕಮೆಂಟಿಗಾಗಿ ಗಂಟೆಗಟ್ಟಲೆ ಸಮಯ ಹಾಳು ಮಾಡದೆ ನಾವು ಮಾಡಬೇಕಾಗಿರುವ ಕೆಲಸ, ಮುಟ್ಟಬೇಕಾಗಿರುವ ಗುರಿ ವಾಟ್ಸಾಪಿನ ಸ್ಟೇಟಸ್ಸಿನಲ್ಲೋ, ಇನ್‌ಸ್ಟಾಗ್ರಾಮಿನ ಪೋಸ್ಟು, ರೀಲ್ಸುಗಳಲ್ಲಿರದೆ, ಮನಸ್ಸಿನಲ್ಲಿದ್ದರೆ ಮಾತ್ರ ಯಶಸ್ಸಿನ ಮೆಟ್ಟಿಲೇರಬಹುದು.
ನಿರಂತರವಾಗಿ ಶ್ರಮವಹಿಸಿ ಅದು ತಿಂಗಳಾದರೂ ಸರಿ ವರ್ಷಗಳಾದರೂ ಸರಿ
ನಿಮ್ಮ ಗುರಿಯಡೆಗೆ ಗಮನವಿಟ್ಟು ದುಡಿದು ಮುಂದೊಂದು ದಿನ ಒಬ್ಬ ಸಾಹೇ ಬನೋ, ಒಬ್ಬ ಯಶಸ್ವಿ ಉದ್ಯಮಿಯಾಗಿಯೋ ಅಥವಾ ಸಾಧಕನಾಗಿ ಅಂದು ನೀವು ಹಾಕುವ ಪೋಸ್ಟು, ಸ್ಟೇಟಸ್ಸುಗಳು ಸಾವಿರಾರು ಜನರಿಗೆ ಪ್ರೇರಣೆಯಾಗಬೇಕು. ಬೆಳೆದರೆ ಇವನಂತೆ ಬೆಳೆಯಬೇಕೆಂದು ಜನ ಕೊಂಡಾಡಬೇಕು. ಅಂತದೊಂದು ಯಶಸ್ಸು ಸಾಧಿಸಿದರೆ ಲೈಕು, ಕಮೆಂಟುಗಳೇನು ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ನಿಮ್ಮನ್ನು ಹಿಂಬಾಲಿಸಲು ಶುರುವಿಟ್ಟುಕೊಂಡ ಬಿಡುತ್ತಾರೆ.
ಕೊನೆಯದಾಗಿ ಹೇಳುವುದಾದರೆ ಆಯ್ಕೆ ನಿಮ್ಮದು. ಸಾಮಾನ್ಯನಾಗುತ್ತಿರೋ ಇಲ್ಲ ಅಸಾಮಾನ್ಯನಾಗುತ್ತಿರೋ ಎಂಬುದು ನಿಮ್ಮ ಕೈಯಲ್ಲಿದೆ, ಮೊಬೈಲಿನಲ್ಲಲ್ಲ.
- ಸಂತೋಷ ಈ. ಬಿರಾದಾರ
ವಿಜಯಪುರ