ಇವರ್ ವೈಫ್ ಈಸ್ ವೆರಿ ಸೆಕ್ಸಿ … ಹಾಗಂತ ಒಂದು ಎಸ್.ಎಂ.ಎಸ್ ಅವನ ಫೋನ್‌ಗೆ ಬರುತ್ತದೆ. ಅದನ್ನು ನೋಡುತ್ತಿದ್ದಂತೆಯೇ ಒಮ್ಮೆ ಶೇಕ್ ಆಗುತ್ತಾನೆ ಅವನು. ಕ್ರಮೇಣ ಅಂತಹ ಮೆಸೇಜ್‌ಗಳು ಜಾಸ್ತಿ ಆಗುತ್ತದೆ. ಮೆಸೇಜ್ ಕಳಿಸುತ್ತಿರುವವರು ತನ್ನ ಹೆಂಡತಿಗೆ ಪರಿಚಯವಿರಬಹುದಾ, ಅವಳ ಹಳೆಯ ಬಾಯ್‌ಫ್ರೆಂಡ್ ಇರಬಹುದಾ, ತನ್ನ ಹೆಂಡತಿಗೆ ಬೇರೊಬ್ಬನ ಜೊತೆಗೆ ಅಫೇರ್ ಇರಬಹುದಾ … ಇಂಥಾ ನೂರೆಂಟು ಸಂಶಯಗಳು ಅವನನ್ನು ಎಡಬಿಡದೆ ಕಾಡುತ್ತದೆ.
ಆದರೆ, ಹೆಂಡತಿಗೆ ಇವನ್ನೆಲ್ಲಾ ಹೇಳಿಕೊಳ್ಳುವುದಕ್ಕಾಗುವುದಿಲ್ಲ. ಹಾಗಂತ ಇದನ್ನು ಬಿಟ್ಟಾಕುವ ಹಾಗೂ ಇಲ್ಲ. ಕೊನೆಗೆ ಅವನ ಸ್ನೇಹಿತ ಒಂದು ಉಪಾಯ ಹೇಳಿಕೊಡುತ್ತಾನೆ. ಇದೆಲ್ಲಾ ಆಗುವುದಕ್ಕಿಂತ ಮುನ್ನ, ಅವನಿಗೊಂದು ಪತ್ರ ಬಂದಿರುತ್ತದೆ. ಅದರಲ್ಲಿ ಯಾರೋ ಹನಿಮೂನ್ ಪ್ಯಾಕೇಜ್ ಗಿಫ್ಟ್ ಮಾಡಿರುತ್ತಾರೆ. ಬಹುಶಃ ಹನಿಮೂನ್‌ಗೆ ಕಳಿಸುತ್ತಿರುವವರೇ ಇವೆಲ್ಲಾ ಮಾಡುತ್ತಿರಬಹುದು ಎಂಬ ಗುಮಾನಿಯ ಮೇಲೆ ಹನಿಮೂನ್‌ಗೆ ಹೋಗುವುದಕ್ಕೆ ಹೇಳುತ್ತಾನೆ.
ಅಲ್ಲಿ ಅವನನ್ನು ಕಾಡುತ್ತಿರುವವರು ಸಿಕ್ಕರೂ ಸಿಗಬಹುದು ಎಂದು ಹನಿಮೂನ್‌ಗೆ ಕಳಿಸುತ್ತಾನೆ. ಹೀಗೆ ಆ ನವದಂಪತಿ ಬೈನೇಕಾಡು ಎಂಬ ರೆಸಾರ್ಟ್‌ಗೆ ಹನಿಮೂನ್‌ಗೆಂದು ಹೋಗುತ್ತಾರೆ … ಇದನ್ನು ಓದುವಾಗ ಕುತೂಹಲ ಜಾಸ್ತಿ ಆಗಬಹುದು. ಯಾರು ಈ ರೀತಿ ಮಾಡುತ್ತಿರಬಹುದು ಎಂದು ಆಶ್ಚರ್ಯವಾಗಬಹುದು. ಗಂಡನ ತರಹವೇ ಪ್ರೇಕ್ಷಕರಿಗೂ, ಇದು ಆಕೆಯ ಹಳೆಯ ಬಾಯ್‌ಫ್ರೆಂಡ್ ಇರಬಹುದಾ, ಬೇರೊಬ್ಬನ ಜೊತೆಗೆ ಅಫೇರ್ ಇರಬಹುದಾ … ಇಂಥಾ ನೂರೆಂಟು ಸಂಶಯಗಳು ಕಾಡಬಹುದು.
“ಮೇಘ ಅಲಿಯಾಸ್ ಮ್ಯಾಗಿ’ ಚಿತ್ರದ ಹೈಲೈಟ್ ಇದು ಎಂದರೆ ತಪ್ಪಿಲ್ಲ. ಚಿತ್ರದ ಹೆಸರಿಗೂ, ಮೊದಲಾರ್ಧದಲ್ಲಿ ನಡೆಯುವ ಕಥೆಗೂ ಸಂಬಂಧವೇ ಇಲ್ಲ. ಮೊದಲಾರ್ಧವೆಲ್ಲಾ ಇಂಥದ್ದೊಂದು ಸಸ್ಪೆನ್ಸ್‌ನೊಂದಿಗೆ ನೋಡಿಸಿಕೊಂಡು ಹೋಗುವ ಚಿತ್ರ, ಕ್ರಮೇಣ ಹಿಡಿತ ಕಳೆದುಕೊಳ್ಳುತ್ತದೆ. ಹಾಗೆ ನೋಡಿದರೆ, ವಿಶಾಲ್ ಪುಟ್ಟಣ್ಣ ತನ್ನ ಮೊದಲ ಚಿತ್ರವನ್ನು ವಿಪರೀತ ಎಳೆದಾಡಿಲ್ಲ ಅಥವಾ ಬೇಡದ್ದನ್ನು ತುರುಕುವುದಕ್ಕೆ ಹೋಗಿಲ್ಲ. ಚಿತ್ರಕ್ಕೆ ಎಷ್ಟು ಬೇಕೋ, ಏನು ಬೇಕೋ ಅದನ್ನೇ ಹೇಳುತ್ತಾ ಹೋಗಿದ್ದಾರೆ.
ಆದರೆ, ಇವನ್ನೆಲ್ಲಾ ಯಾರು ಮಾಡುತ್ತಿರಬಹುದು ಎಂಬ ರಹಸ್ಯ ಬಯಲಾದಾಗ, ಚಿತ್ರ ಕ್ರಮೇಣ ನಿಧಾನವಾಗುತ್ತದೆ. ಈ ಸಂದರ್ಭದಲ್ಲಿ ಒಂದಿಷ್ಟು ಥ್ರಿಲ್‌ನ ಅವಶ್ಯಕತೆ ಇತ್ತು. ಆದರೆ, ಮೇಲಿಂದ ಮೇಲೆ ಒಂದೇ ವಿಷಯ ರಿಪೀಟ್ ಆಗಿ ಚಿತ್ರ ಬಹಳ ನೀರಸವಾಗಿ ಮುಕ್ತಾಯವಾಗಿ ಹೋಗುತ್ತದೆ. ಬಹುಶಃ ಈ ಹಂತದಲ್ಲಿ ನಿರ್ದೇಶಕರು ಇನ್ನಷ್ಟು ಚುರುಕಾಗಿ ಚಿತ್ರವನ್ನು ನಿರೂಪಿಸಿದ್ದರೆ ಚಿತ್ರ ಕೆಲವರಿಗಾದರೂ ಇಷ್ಟವಾಗುತಿತ್ತೋ ಏನೋ? ಒಟ್ಟಾರೆ ಈ ಚಿತ್ರದ ಮೂಲಕ ಹುಡುಗರಿಗೂ ಇಷ್ಟ-ಕಷ್ಟಗಳಿರುತ್ತವೆ,
ಅವರಿಗೂ ತಮ್ಮ ಕನಸಿನ ಹುಡುಗಿ ಹೀಗ್ಹೀಗೆ ಇರಬೇಕೆಂಬ ಕಲ್ಪನೆಗಳು ಇರುತ್ತವೆ ಮತ್ತು ಅದಕ್ಕೆ ಹುಡುಗಿಯರು ಸ್ಪಂದಿಸದಿದ್ದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಇದನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದರೆ, ವಿಶಾಲ್ ಮೊದಲ ಪ್ರಯತ್ನದಲ್ಲೇ ಸೈ ಎನಿಸಿಕೊಳ್ಳುತ್ತಿದ್ದರು. ಇಡೀ ಚಿತ್ರದ ಹೈಲೈಟ್ ಎಂದರೆ ಅದು ಸುಕೃತಾ ಮಾಡಿರುವ ಮ್ಯಾಗಿ ಪಾತ್ರ. ಸುಕೃತ ತಮ್ಮ ಶಕ್ತಿಮೀರಿ ಆ ಪಾತ್ರವನ್ನು ಚೆನ್ನಾಗಿ ಮಾಡುವ ಪ್ರಯತ್ನ ಪಾಡಿದ್ದಾರೆ.
ಆದರೆ, ಅದನ್ನು ಇನ್ನಷ್ಟು ಸಮರ್ಥವಾಗಿ ಕಟ್ಟಿಕೊಡುವ ಅವಶ್ಯಕತೆ ಇತ್ತು. ಏಕೆಂದರೆ, ಸುಕೃತ ಅಭಿನಯ ಬಹಳಷ್ಟು ಕಡೆ ಕೃತಕವಷ್ಟೇ ಅಲ್ಲ, ಪ್ರಯತ್ನಪೂರ್ವಕವಾಗಿ ಮಾಡುತ್ತಿದ್ದಾರೆ ಎಂದನಿಸುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಜಾಗ್ರತೆ ವಹಿಸಬೇಕಿತ್ತು. ಇನ್ನು ತೇಜ್ ಗೌಡ ಮತ್ತು ನೀತು ಬಾಲ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅತೀಶಯ ಜೈನ್ ಅವರ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಪೈಕಟ್ಟು ಮತ್ತು ಜಯಪ್ರಕಾಶ್ ಅವರ ಛಾಯಾಗ್ರಹಣದಲ್ಲಿ ಕತ್ತಲು-ಬೆಳಕಿನಾಟ ಚೆನ್ನಾಗಿದೆ.
ಚಿತ್ರ: ಮೇಘ ಅಲಿಯಾಸ್ ಮ್ಯಾಗಿ
ನಿರ್ಮಾಣ: ವಿನಯ್ ಕುಮಾರ್
ನಿರ್ದೇಶನ: ವಿಶಾಲ್ ಪುಟ್ಟಣ್ಣ
ತಾರಾಗಣ: ಸುಕೃತ ವಾಗ್ಲೆ, ತೇಜ್ ಗೌಡ, ನೀತು ಬಾಲ ಮುಂತಾದವರು
* ಚೇತನ್ ನಾಡಿಗೇರ್