Advertisement

ದೊಡ್ಡವನೆಂಬ ಭಾವನೆ ಸಾಹಿತಿಗೆ ಸಲ್ಲ: ಗೀತಾ ನಾಗಭೂಷಣ

05:56 AM Mar 11, 2019 | |

ಕ‌ಲಬುರಗಿ: ಸಾಹಿತಿಗಳಿಗೆ ದೊಡ್ಡವನು ಎನ್ನುವ ಭಾವನೆ ಬಂದ ಕ್ಷಣವೇ ಸಣ್ಣವರಾಗುತ್ತಾರೆ. ಕೊನೆತನಕ ಕಲಿಯುವರೆಲ್ಲರೂ ಸಣ್ಣವರೇ ಎಂದು ಹಿರಿಯ ಸಾಹಿತಿ, ನಾಡೋಜ ಡಾ| ಗೀತಾ ನಾಗಭೂಷಣ ಹೇಳಿದರು.
 
ಕನ್ನಡ ಭವನದ ಸುವರ್ಣ ಭವನದಲ್ಲಿ ರವಿವಾರ ಕವಯಿತ್ರಿ ಗೌರಿ ಪಾಟೀಲ ಅವರ ಪ್ರಥಮ ಕವನ ಸಂಕಲನ “ಸೆರಗ ನೂಲಿನ ಕಾವು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಪ್ರತಿ ಹಂತದಲ್ಲಿ ಕಲಿಯುವುದು ಇರುತ್ತದೆ. ಆದ್ದರಿಂದ ದೊಡ್ಡ ಸಾಹಿತಿಗಳು ಸಣ್ಣ ಕಾರ್ಯಕ್ರಮಗಳಿಗೆ ಹೋಗಬಾರದು ಎನ್ನುವ ಭ್ರಮೆ ಸಲ್ಲದು ಎಂದರು.

Advertisement

ಕವಿಗಳು ಹುಟ್ಟುವುದು ಕಾಲೇಜಿನ ದಿನಗಳಲ್ಲಿ, ಹರೆಯ ವಯಸ್ಸಿನಲ್ಲಿ. ಆಗ ಸಾವಿರಾರು ಕನಸುಗಳು ಇರುತ್ತವೆ. ಹುಡುಗರು ಹುಡುಗಿಯರ ಮೇಲೆ ಪದ್ಯ, ಕವನ ಬರೆಯುತ್ತಾರೆ. ಹುಡುಗಿಯರೂ ಕದ್ದು ಮುಚ್ಚಿ ಹುಡುಗರ ಮೇಲೆ ಪದ್ಯ ಬರೆಯುತ್ತಾರೆ. ಹೀಗೆ ಪ್ರೇಮಕವಿಗಳಾದ ನಂತರ ಬೇರೆ ನೆಲೆಗಟ್ಟಿನ ಕವಿಯಾಗಿ ಉಳಿಯದಿರುವುದು ಬೇಸರದ ಸಂಗತಿ ಎಂದು ಹೇಳಿದರು. 

ಸಾಹಿತ್ಯದ ಮೂಲ ದ್ರವ್ಯ ಪ್ರೀತಿ. ಪ್ರೀತಿಯಲ್ಲಿ ಶುದ್ಧ, ಸ್ವತ್ಛ ಮನಸ್ಸಿರಬೇಕು. ಪ್ರೀತಿಯಲ್ಲಿ ಹಿಂಸೆ ಇರಕೂಡದು. ಯಾವ ವಯಸ್ಸಿನಲ್ಲಿ ಬೇಕಾದರೂ ಪ್ರತಿಭೆ ಅರಳಬಹುದು. ಪ್ರತಿಭೆ, ಅಕ್ಷರ ಹಾಗೂ ಬರೆಯಬೇಕೆಂಬ ಹಂಬಲ ಇರಬೇಕಷ್ಟೆ. ಪ್ರತಿಭೆ ಯಾರಪ್ಪನ ಸ್ವತ್ತಲ್ಲ ಎಂದರು.

ಲೇಖಕರು ಗಾಡ್‌ ಫಾದರ್‌, ಗಾಡ್‌ ಮದರ್‌ ಬಯಸಬಾರದು. ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಹೆಚ್ಚಿನದ್ದನ್ನು ಓದದವರು, ಅಕ್ಷರ ಜ್ಞಾನವೇ ಗೊತ್ತಿಲ್ಲದ ಎಷ್ಟೋ ಜನರು ವಿಶಿಷ್ಟ ಸಾಹಿತ್ಯವನ್ನು ರಚಿಸಿ ಸಾಧನೆ ಮಾಡಿದ್ದಾರೆ. ಪುಸ್ತಕಗಳು ಉತ್ತಮ ಸಂಗಾತಿಗಳು. ಪುಸ್ತಕಗಳನ್ನು ನಿರಂತರವಾಗಿ ಓದಬೇಕು. ಅನುಭವ ಗಟ್ಟಿಯಾಗುತ್ತಾ ಹೋದಂತೆ ಸಾಹಿತ್ಯ ಬೆಳೆಯುತ್ತದೆ.  ಸಾಹಿತ್ಯದ ನಶೆ ಒಮ್ಮೆ ಏರಿದ ನಂತರ ಅದನ್ನು ಇಳಿಸುವುದು ಕಷ್ಟ ಎಂದು ಹೇಳಿದರು.

ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು ಉದ್ಘಾಟಿಸಿದರು. ಹಿರಿಯ ಸಾಹಿತಿ ಡಾ| ಶಶಿಕಲಾ ಮೋಳ್ದಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ಶಾಂತಾ ಮಠ ಪುಸ್ತಕ ಪರಿಚಯಿಸಿದರು. ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮುಂತಾದವರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next