ಕೆ.ಆರ್.ಪುರ: ಅವಘಡದಲ್ಲಿ ಗಾಯಗೊಂಡ ಅಥವಾ ದೈಹಿಕ ಅಸಮರ್ಥತತೆಯಿಂದ ತೊಂದರೆಗೆ ಸಿಲುಕಿದವರನ್ನು ಕಂಡು ಗಾಬರಿಗೊಳ್ಳದೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಪ್ರಾಣ ರಕ್ಷಣೆಗೆ ಮುಂದಾಗುವಂತೆ ರೆಡ್ ಕ್ರಾಸ್ ಸಂಸ್ಥೆಯ ತರಬೇತುದಾರ ಡಾ.ನಾರಾಯಣ ಸ್ವಾಮಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೆ.ಆರ್.ಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗಾಗಿ ರೆಡ್ ಕ್ರಾಸ್ ಸಂಸ್ಥೆ ಏರ್ಪಡಿಸಿದ್ದ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಅಪಘಾತ, ಅವಘಡ ಸಂಭವಿಸುವುದು ಸಾಮಾನ್ಯ. ಹಾಗೇ ವಿವಿಧ ಕಾಯಿಲೆಗಳಿಂದ ಬಳಲುವವರು ಕೆಲವೊಮ್ಮೆ ನಡು ರಸ್ತೆಯಲ್ಲೇ ಪ್ರಜ್ಞಾಹೀನ ಸ್ಥಿತಿ ತಲುಪುತ್ತಾರೆ.
ಇಂತಹ ಸಂದರ್ಭದಲ್ಲಿ ಅಪಾಯದಲ್ಲಿರುವ ವ್ಯಕ್ತಿಗಳಿಗೆ ನೆರವಾಗಲು ಹಿಂಜರಿಯಬಾರದು. ವಿದ್ಯಾರ್ಥಿಗಳು ಪ್ರಾಥಮಿಕ ಚಿಕಿತ್ಸೆ ಮತ್ತು ಹೃದಯಕ್ಕೆ ಸಂಬಂಧಿಸಿದ ಸಿಪಿಆರ್ ಚಿಕಿತ್ಸೆ ವಿಧಾನ ಕಲಿತಾಗ ಹಲವರ ಪ್ರಾಣ ರಕ್ಷಿಸಬಹುದು ಎಂದರು.
ಜತೆಗೆ ಅಪಘಾತದ ಗಾಯಾಳುಗಳು ಹಾಗೂ ರೋಗಪೀಡಿತರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವುದು ಹೇಗೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಇದೇ ವೇಳೆ ವಿದ್ಯುತ್ ಶಾಕ್, ಈಜುವಾಗ ನೀರು ಕುಡಿದು ಹೃದಯ ಬಡಿತ ನಿಂತ ಸಂದರ್ಭಗಳಲ್ಲಿ ಹಾಗೂ ಉಸಿರಾಟದ ಸಮಸ್ಯೆ ಎದುರಾದಾಗ ಅನುಸರಿಸಬೇಕಾದ ಪ್ರಥಮ ಚಿಕಿತ್ಸಾ ಕ್ರಮಗಳನ್ನೂ ಪ್ರತ್ಯಕ್ಷಿಕೆ ಮೂಲಕ ವಿವರಿಸಲಾಯಿತು.
ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ.ಕೆ.ನಾರಾಯಣ್, ಐಕ್ಯುಎಸಿ ಸಹ ಸಂಚಾಲಕ ಪ್ರೊ.ಎಲ್.ಫ್ರಾನ್ಸಿಸ್ ಮರಿಯಾ ಆನಂದ್, ಡಾ.ಎಚ್.ವಿ.ಅಂಜನ್ ರೆಡ್ಡಿ, ಕೀರ್ತಿರಾಜ್, ಸೇರಿದಂತೆ ಇತರರಿದ್ದರು.