ನೆಲಮಂಗಲ: ರಾಸುಗಳಿಗೆ ರೋಗಗಳು ಬಂದಾಗ ಅಸಡ್ಡೆ ತೋರಿದರೆ, ಜಾನುವಾರುಗಳ ಪ್ರಾಣಕ್ಕೂ ಕುತ್ತಾಗಬಹುದು. ರೋಗ ಲಕ್ಷಣಗಳು ಕಂಡು ಬಂದ ತಕ್ಷಣವೇ ಸ್ಥಳೀಯ ಪಶು ಚಿಕಿತ್ಸಾಲಯದಲ್ಲಿ ತಪಾ ಸಣೆ ಮಾಡಿಸಿ ಚಿಕಿತ್ಸೆ ಕೋಡಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಆನಂದ ಮಾನೇಗಾರ್ ಹೇಳಿದರು.
ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಗಾಂಧಿ ವಿಜ್ಞಾನ ಕೇಂದ್ರದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವದ ಕಾರ್ಯ ಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಬರಡು ರಾಸು ಗಳ ತಪಾಸಣೆ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರ ದಲ್ಲಿ ಮಾತನಾಡಿದ ಅವರು, ರೈತರು ಪಶುಗಳಿಗೆ ಆಗ್ಗಾಗೆ ಕಂಡು ಬರುತ್ತಿರುವ ರೋಗಗಳ ಬಗ್ಗೆ ವೈದ್ಯರನ್ನು ಸಂಪರ್ಕಸಿ ಮಾಹಿತಿ ತಿಳಿದಿರಬೇಕು.
ರೋಗಾಣು, ಆಹಾರ ಮತ್ತು ನೀರಿನ ಮುಖಾಂತರ ಪ್ರಾಣಿಗಳ ದೇಹ ಪ್ರವೇಶಿಸುತ್ತವೆ. ಇದ್ದರಿಂದ ಪ್ರಾಣಿಗಳು ರೋಗಕ್ಕೆ ತುತ್ತಾಗಿ ತನ್ನ ಜೊತೆಯಲ್ಲಿರುವ ಎಲ್ಲಾ ಪ್ರಾಣಿಗಳಿಗೂ ರೋಗವನ್ನು ಹರಡುತ್ತವೆ. ಆದ್ದರಿಂದ, ಶಿಬಿರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಪೌಷ್ಟಿಕ ಮೇವು ತಯಾರಿಕೆ: ಹಸುಗಳನ್ನು ಬಹುತೇಕ ಹಾಲು ಉತ್ಪಾದನೆಯ ಉದ್ದೇಶದಿಂದ ಸಾಕಾಣಿಕೆ ಮಾಡುವುದ್ದರಿಂದ ಹಸುಗಳಿಗೆ ಪೌಷ್ಟಿಕ ಆಹಾರವನ್ನು ನೀಡುವುದು ಬಹುಮುಖ್ಯವಾಗಿದೆ. ಬೇಸಿಗೆ ಸಮಯದಲ್ಲಿ ಹಾಗೂ ಒಣಹುಲ್ಲು ನೀಡುವ ಸಮಯದಲ್ಲಿ ಬೆಲ್ಲ, ಯೂರಿಯಾ, ಮತ್ತು ಇತರೆ ಪೌಷ್ಟಿಕ ದ್ರವಗಳನ್ನು ನೀರಿನಲ್ಲಿ ಒಣರಾಗಿ ಹುಲ್ಲು, ಭತ್ತದ ಹುಲ್ಲು, ಜೋಳದ ಕಡ್ಡಿಗಳ ಮೇಲೆ ಸಿಂಪಡಿಸಿ, ಒಂದು ವಾರದ ಕಾಲದ ಸುರಳಿಯಾಕಾರದ ಸುತ್ತಿ ಇಟ್ಟು ನಂತರ ಹಸುಗಳಿಗೆ ನೀಡಿದರೆ, ಹಾಲಿನ ಗುಣಮಟ್ಟ ಮತ್ತು ಅಧಿಕ ಹಾಲಿನ ಉತ್ಪಾದನೆಗೆ ಸಹಕಾರಿಯಾಗಲಿದೆ ಎಂದರು.
ತಾಲೂಕು ಪಶುವೈದ್ಯಾಧಿಕಾರಿ ಡಾ.ಸಿದ್ದಪ್ಪ ಮಾತನಾಡಿ, ಮೂಕ ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಣ್ಣೆ ಗ್ರಾಮದಲ್ಲಿ ಈ ವರ್ಷದಲ್ಲಿ ಮೂರು ಬಾರಿ ರಾಸುಗಳ ಶಿಬಿರ ನಡೆಯುತ್ತಿದೆ. ತಾವು ಸಾಕಿರವ ಪ್ರಾಣಿಗಳಿಗೆ ಸರಿಯಾದ ಸಮಯಕ್ಕೆ ಲಸಿಕೆ ಹಾಕಿಸಬೇಕು. ದನಗಳ ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ರಾಸುಗಳ ಆರೋಗ್ಯ ತಪಾಸಣೆ: ಕೃಷಿ ವಿಜ್ಞಾನ ವಿಭಾಗದ ಡಾ.ಸವಿತಾ ಮಾತನಾಡಿ, ನಮ್ಮ ಕಾಲೇಜಿನ ಸುಮಾರು 20 ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಗ್ರಾಮೀಣ ಕಾರ್ಯಾನುಭವವನ್ನು ಪಡೆಯಲು ಮಣ್ಣೆ ಗ್ರಾಮಕ್ಕೆ ಆಗಮಿಸಿದ್ದಾರೆ. ಈ ಕಾರ್ಯಕ್ರಮದ ಅಡಿಯಲ್ಲಿ ಆಧುನಿಕ ಬೇಸಾಯ ಪದ್ಧತಿಯ ಪ್ರತ್ಯಕ್ಷಿಕೆ, ರಾಸುಗಳ ಆರೋಗ್ಯ ತಪಾಸಣೆ ಶಿಬಿರ, ಗಿಡಗಳ ನೆಡುವಿಕೆ ಮುಂತಾದ ವಿಷಯಗಳ ಬಗ್ಗೆ ಕಾರ್ಯಕ್ರಮ ಹಾಕಿಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ಗ್ರಾಮ ಮುಖಂಡ ಪಣಮದಲಿ ರಾಮಣ್ಣ, ಕರಿಗಿರಿಯಪ್ಪ, ಮಣ್ಣೆ ಪಶುಚಿಕಿತ್ಸ ಕೇಂದ್ರದ ಡಾ.ನಯನ್ ಕುಮಾರ್, ಡಾ.ಹೊರಕೇರಪ್ಪ, ಡಾ.ಚಂದ್ರನಾಯಕ್, ಡಾ.ಕಾವ್ಯ, ಕೃಷಿ ಅಧಿಕಾರಿ ಅಂಜನಾ ಹಾಗೂ ಮತ್ತಿತರರು ಇದ್ದರು.