Advertisement

ಶುಲ್ಕ ಮರುಪಾವತಿ ಈ ವರ್ಷವೂ ವಿಳಂಬ ಸಾಧ್ಯತೆ

12:48 AM Mar 04, 2022 | Team Udayavani |

ಉಡುಪಿ: ಕೊರೊನಾ ಕಾರಣ ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಳಂಬವಾಗಿದ್ದ ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳ ಶುಲ್ಕ ಮರುಪಾವತಿ ಪ್ರಕ್ರಿಯೆ ಈ ವರ್ಷವೂ ನಿರ್ದಿಷ್ಟ ಕಾಲಮಿತಿಯಲ್ಲಿ ಆಗದು.

Advertisement

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 20 ಸಾವಿರ ಅರ್ಜಿ ಸಹಿತವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ 2020-21ನೇ ಸಾಲಿನಲ್ಲಿ 7,62,517 ಪದವಿ ಹಾಗೂ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳು ಶುಲ್ಕ ಮರುಪಾವತಿಗೆ ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 3,336 ಅರ್ಜಿ ತಿರಸ್ಕರಿಸಲಾಗಿದೆ. 10,736 ಅರ್ಜಿ ವಿಲೇವಾರಿಗೆ ಬಾಕಿಯಿದೆ. ಕೆಲವು ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳ ಮಾಹಿತಿ ನೀಡದೆ ಇರುವುದು, ವೃತ್ತಿಪರ ಕೋರ್ಸ್‌ಗೆ ಸೇರಿದ ವಿದ್ಯಾರ್ಥಿಗಳಲ್ಲಿ ಕೆಲವರು ಕೌನ್ಸೆಲಿಂಗ್‌ ಸಂಖ್ಯೆ, ವಿಶ್ವವಿದ್ಯಾಲಯದ ನೋಂದಣಿ ಸಂಖ್ಯೆ ನೀಡದೆ ಇರುವುದರಿಂದ ಶುಲ್ಕ ಮರುಪಾವತಿ ಆಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಿಳಂಬಕ್ಕೆ ಕಾರಣ :

ಕೊರೊನಾ ಕಾರಣದಿಂದ 2021-22ನೇ ಸಾಲಿನ ಪದವಿ, ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಹಾಗೂ ತರಗತಿ ಆರಂಭ ವಿಳಂಬವಾಗಿತ್ತು. ಹೀಗಾಗಿ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಲು ಮಾರ್ಚ್‌ ಅಂತ್ಯದವರೆಗೂ ಅವಕಾಶ ನೀಡಲಾಗಿದೆ. ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ಗಳ ಸುಮಾರು 136 ಕಾಲೇಜುಗಳ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಲಿದ್ದು, ಬಹುತೇಕ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಅವಧಿ, ಪರೀಕ್ಷಾ ವೇಳೆ ಬೇರೆ ಬೇರೆಯಾಗಿರುವುದರಿಂದ ಶುಲ್ಕ ಮರುಪಾವತಿ ನೀಡಲು ವಿಳಂಬವಾಗಲಿದೆ. ಇದಕ್ಕೆ ಅನುದಾನದ ಕೊರತೆ ಇಲ್ಲ. ಆದರೆ ಎಲ್ಲ ಅರ್ಜಿಗಳನ್ನು  ಸ್ವೀಕರಿಸಿದ ನಂತರವೆ ಮಂಜೂರಾತಿ ನೀಡಬೇಕಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಕಾಲಮಿತಿಯಲ್ಲಿ ನೀಡಲು ಆಗ್ರಹ :

Advertisement

ಶುಲ್ಕ ಮರುಪಾವತಿಯನ್ನು ಸರಕಾರವು ಕಾಲೇಜು ದಾಖಲಾತಿ ಸಂದರ್ಭದಲ್ಲೇ ನೀಡಬೇಕು ಅಥವಾ ಕಾಲೇಜಿಗೆ ದಾಖಲಾದ ಒಂದು ಅಥವಾ ಎರಡು ತಿಂಗಳಲ್ಲಿ ಮಾಡಬೇಕು. ಶೈಕ್ಷಣಿಕ ವರ್ಷ ಪೂರ್ತಿಯಾದರೂ ಒಮ್ಮೊಮ್ಮೆ ಶುಲ್ಕ ಮರುಪಾವತಿಯ ಹಣ ಬರುವುದಿಲ್ಲ. ಗ್ರಾಮೀಣ ಭಾಗದ ವೃತ್ತಿಪರ ಹಾಗೂ ಸ್ನಾತಕೋತ್ತರ, ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನಿರ್ದಿಷ್ಟ ಕಾಲಮಿತಿಯಲ್ಲಿ ಸರಕಾರ ಶುಲ್ಕ ಮರುಪಾವತಿ ನೀಡಬೇಕು. ವಿದ್ಯಾರ್ಥಿಗಳು ಶುಲ್ಕ ಪಾವತಿಗಾಗಿ ಶೈಕ್ಷಣಿಕ ಸಾಲದ ಮೊರೆ ಹೋಗುವುದನ್ನು ತಪ್ಪಿಸಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹಿಸಿದ್ದಾರೆ.

15 ಸಾವಿರ ಅರ್ಜಿ :

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 8 ತಾಲೂಕು (ಹಳೇ ತಾಲೂಕು)ಗಳಿಂದ ಪ್ರಸಕ್ತ ಸಾಲಿನಲ್ಲಿ 15 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಮಂಗಳೂರು ಮತ್ತು ಉಡುಪಿ ತಾಲೂಕಿನಿಂದ ಅತಿ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಇನ್ನೂ ಒಂದು ತಿಂಗಳ ಕಾಲಾವಕಾಶ ಇರುವುದರಿಂದ ಇನ್ನಷ್ಟು ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆಯೂ ಇದೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಲೂಕು         2020 21               2021 22

ಮಂಗಳೂರು     8,708     7,106

ಬಂಟ್ವಾಳ           1,065     862

ಬೆಳ್ತಂಗಡಿ           1,855     1,644

ಪುತ್ತೂರು            1,930     1,707

ಸುಳ್ಯ    1,220     898

ಕುಂದಾಪುರ      2,950     2,971

ಉಡುಪಿ               4,625     3,856

ಕಾರ್ಕಳ               1,755     1,606

Advertisement

Udayavani is now on Telegram. Click here to join our channel and stay updated with the latest news.

Next