Advertisement

ಬಂದ್‌ ಬಿಸಿ ಮುಟ್ಟದಂತೆ ಬಿಜೆಪಿ ಕಾರ್ಯತಂತ್ರ

08:01 AM Jan 31, 2018 | Team Udayavani |

ಬೆಂಗಳೂರು: ಕನ್ನಡಪರ ಸಂಘಟನೆಗಳು ನೀಡಿರುವ ಬಂದ್‌ ಕರೆ ಹೊರತಾಗಿಯೂ ಫೆ. 4ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭವನ್ನು ಯಶಸ್ವಿಗೊಳಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಬಿಜೆಪಿ, ರಾಜ್ಯದ ವಿಧಾನಸಭಾ ಕ್ಷೇತ್ರಗಳಿಂದ ಬರುವ ಕಾರ್ಯಕರ್ತರನ್ನು ಸಮಾವೇಶ ಸ್ಥಳಕ್ಕೆ ಕರೆತರಲು ವಿಶೇಷ ತಂಡಗಳನ್ನು ರಚಿಸುತ್ತಿದೆ.

Advertisement

ಫೆ. 4ರಂದು ಬೆಂಗಳೂರು ಮಾತ್ರ ಬಂದ್‌ ಇರುವುದರಿಂದ ರಾಜ್ಯದ ಇತರೆ ಭಾಗಗಳಿಂದ ಕಾರ್ಯಕರ್ತರು ಬೆಂಗಳೂರಿಗೆ ಬರುವುದಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ, ಬೆಂಗಳೂರು ಹೊರವಲಯದಿಂದ ಸಮಾವೇಶ ನಡೆಯುವ ಅರಮನೆ ಮೈದಾನಕ್ಕೆ ಕರೆತರುವುದೇ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಕಾರ್ಯಕರ್ತರ ವಿಶೇಷ ತಂಡಗಳನ್ನು ರಚಿಸುತ್ತಿರುವ ಬಿಜೆಪಿ, ಹೊರಗಿನಿಂದ ಬರುವ ಕಾರ್ಯಕರ್ತರಿಗೆ ಬೆಂಗಳೂರು ನಗರದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡು ಅವರನ್ನು ಸಮಾವೇಶ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿಯನ್ನು ತಂಡಗಳಿಗೆ ವಹಿಸುತ್ತಿದೆ.

ಬಂದ್‌ಗೆ ಕರೆ ನೀಡಿರುವ ಪ್ರತಿಭಟನಾಕಾರರು ಎಲ್ಲೆಲ್ಲಿ ಕಾರ್ಯಕರ್ತರು ಅಥವಾ ಅವರ ವಾಹನಗಳಿಗೆ ತಡೆಹಾಕಬಹುದು ಎಂಬುದನ್ನು ಅಂದಾಜಿಸಿರುವ ಪಕ್ಷದ ಮುಖಂಡರು ಈಗಾಗಲೇ ಅಂತಹ ಸ್ಥಳಗಳ ಪಟ್ಟಿ ಮಾಡಿದ್ದಾರೆ. ಅಂತಹ ಸ್ಥಳಗಳಲ್ಲಿ ಈ ತಂಡಗಳು ನಿಲ್ಲಲಿದ್ದು, ಯಾರಾದರೂ ಅಡ್ಡಿಪಡಿಸಲು ಮುಂದಾದರೆ ಅದಕ್ಕೆ ಅವಕಾಶವಾಗದಂತೆ ನೋಡಿಕೊಂಡು, ಹೊರಭಾಗದಿಂದ ಬಂದಿರುವ ಕಾರ್ಯಕರ್ತರನ್ನು ಸುರಕ್ಷಿತವಾಗಿ ಸಮಾವೇಶದ ಸ್ಥಳಕ್ಕೆ ಕರೆತರಲಿದ್ದಾರೆ. ಸಮಾವೇಶದ ಒಟ್ಟಾರೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಬಿಜೆಪಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮತ್ತು ಸಮಾವೇಶ ಆಯೋಜನೆ ಕುರಿತಂತೆ ರಚಿಸಿರುವ ನಿರ್ವಹಣಾ ಸಮಿತಿ ಕಳೆದ ನಾಲ್ಕು ದಿನಗಳಿಂದ ಈ ಕುರಿತು ಸತತ ಸಭೆಗಳನ್ನು ನಡೆಸುತ್ತಿದ್ದು, ಸಮಾವೇಶ ಯಶಸ್ವಿಗೊಳಿಸುವ ಕುರಿತು ಎಲ್ಲಾ ಕೋನಗಳಿಂದಲೂ ಸಮಾಲೋಚನೆ ನಡೆಸುತ್ತಿದೆ. ಇದು ಕೇವಲ ಪರಿವರ್ತನಾ ರ್ಯಾಲಿಯ ಸಮಾರೋಪ ಮಾತ್ರವಲ್ಲದೆ, ಮುಂಬರುವ ವಿಧಾನಸಭೆ ಚುನಾವಣೆಯ ಪ್ರಚಾರ ಕಾರ್ಯದ ಉದ್ಘಾಟನೆಯೂ ಆಗಿರುವುದರಿಂದ ಯಾವುದೇ ಲೋಪವಾಗದಂತೆ ಸಮಾವೇಶ ಆಯೋಜಿಸಲು ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಖಾಸಗಿ ವಾಹಗಳಿಗೆ ಆದ್ಯತೆ: ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರನ್ನು ಸಮಾವೇಶಕ್ಕೆ ಕರೆತರಲು ಈ ಬಾರಿ ಖಾಸಗಿ ವಾಹನಗಳನ್ನೇ ಬಿಜೆಪಿ ಹೆಚ್ಚಾಗಿ ನೆಚ್ಚಿಕೊಳ್ಳಲಿದೆ. ಜ.25ರಂದು ಮೈಸೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಮಾವೇಶದ ವೇಳೆ ಕಾರ್ಯಕರ್ತರನ್ನು ಕರೆತರಲು ಕೆಲವು ಸರ್ಕಾರಿ ಬಸ್‌ಗಳನ್ನು ಕಾಯ್ದಿರಿಸಲಾಗಿತ್ತು. ಆದರೆ, ಬಂದ್‌ ನೆಪವೊಡ್ಡಿ ಕೊನೇ ಕ್ಷಣದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳನ್ನು ಓಡಿಸಲು ಕಷ್ಟಸಾಧ್ಯ ಎಂದು ಹೇಳಿತ್ತು. ಈ ಹಿನ್ನೆಲೆಯಲ್ಲಿ ಫೆ.4ರಂದೂ ಈ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಲು ಖಾಸಗಿ ವಾಹನಗಳ ಮೊರೆ ಹೋಗಲು ಬಿಜೆಪಿ ನಿರ್ಧರಿಸಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೆ ಸೂಚನೆ ನೀಡಲಾಗಿದೆ. ಅನಿವಾರ್ಯ ಸಂದರ್ಭ
ಹೊರತುಪಡಿಸಿ ಉಳಿದಂತೆ ಕಾರ್ಯಕರ್ತರನ್ನು ಕರೆತರಲು ಸರ್ಕಾರಿ ಬಸ್‌ಗಳನ್ನು ಕಾಯ್ದಿರಿಸುವುದು ಬೇಡ. ಸಾಧ್ಯವಾದಷ್ಟು ಖಾಸಗಿ ಬಸ್‌ಗಳನ್ನು ಗುತ್ತಿಗೆಗೆ ಪಡೆಯಿರಿ ಎಂದು ತಿಳಿಸಲಾಗಿದೆ. ಬಂದ್‌ ಇದ್ದರೂ ಖಾಸಗಿ ವಾಹನಗಳ ಓಡಾಟಕ್ಕೆ ಅಡ್ಡಿಪಡಿಸಲು ಅವಕಾಶವಿಲ್ಲದ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಮಧ್ಯಾಹ್ನ 3.30ಕ್ಕೆ ಪ್ರಧಾನಿ ಕಾರ್ಯಕ್ರಮ ಫೆ.4ರಂದು ಮಧ್ಯಾಹ್ನ 2.30ಕ್ಕೆ ವಿಶೇಷ ವಿಮಾನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3.30ರ ವೇಳೆಗೆ ಸಮಾವೇಶ ನಡೆಯಲಿರುವ ಅರಮನೆ ಮೈದಾನಕ್ಕೆ ಬರಲಿದ್ದು, ಕಾರ್ಯಕ್ರಮ ಮುಗಿದ ಬಳಿಕ ದೆಹಲಿಗೆ ವಾಪಸಾಗಲಿದ್ದಾರೆ. ಈ ಬಾರಿ ರಾಜ್ಯಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ
ತುಮಕೂರು ಸಿದ್ಧಗಂಗಾ ಮಠಕ್ಕೆ ತೆರಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಪ್ರಧಾನಿ ಕಚೇರಿಯಿಂದ ಇದುವರೆಗೆ  ಯಾವುದೇ ಮಾಹಿತಿ ಬಂದಿಲ್ಲ. ಸದ್ಯದ ಮಾಹಿತಿಯಂತೆ ಅಂದು ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ಒಂದೇ ಕಾರ್ಯಕ್ರಮ ನಿಗದಿಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next