Advertisement

ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲ: ಫೆ. 22 ರಿಂದ ಅತಿರುದ್ರ ಮಹಾಯಾಗ ಆರಂಭ

05:46 PM Feb 21, 2023 | Team Udayavani |

ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದ ಅಭಿವೃದ್ಧಿ ಟ್ರಸ್ಟ್‌ ಮತ್ತು ಅತಿರುದ್ರ ಮಹಾಯಾಗ ಸಮಿತಿ ಆಶ್ರಯದಲ್ಲಿ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವದೊಂದಿಗೆ ಫೆ. 22 ರಿಂದ ಮಾ.5ರ ತನಕ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ದೇಗುಲದಲ್ಲಿ ಅತಿರುದ್ರ ಮಹಾಯಾಗ ನಡೆಯಲಿದೆ ಎಂದು ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷರೂ ಆದ ಶಾಸಕ ಕೆ. ರಘುಪತಿ ಭಟ್‌ ತಿಳಿಸಿದರು.

Advertisement

ದೇಗುಲದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನಗಳ ಕಾಲ ನಿರಂತರವಾಗಿ ಯಾಗ ನಡೆಯಲಿದೆ. ಇದಕ್ಕಾಗಿ ವೇದಿಕೆ, ಯಾಗ ಮಂಟಪ ರಚಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಶೇಷವಾದ ವೇದಿಕೆಗಳನ್ನು ರಚಿಸಲಾಗಿದೆ ಎಂದರು.

ಯಾಗಕ್ಕೆ ಆಗಮಿಸುತ್ತಿರುವ 180 ಋತ್ವಿಜರ ವಾಸ್ತವ್ಯಕ್ಕಾಗಿ ವಸತಿಗೃಹ ನಿರ್ಮಿಸಲಾಗಿದೆ. 12 ದಿನಗಳ ಕಾಲ ನಡೆಯಲಿರುವ ಯಾಗದಲ್ಲಿ ಭಾಗವಹಿಸುವ 35 ಸಾವಿರದಿಂದ 1 ಲಕ್ಷದ ವರೆಗಿನ ಭಕ್ತರಿಗೆ ಅನ್ನಸಂತರ್ಪಣೆಗೆ ಬೇಕಾಗುವ ಭೋಜನ ವ್ಯವಸ್ಥೆಗೆ ಪಾಕ ಶಾಲೆ, ಭೋಜನ ಶಾಲೆ, ಉಗ್ರಾಣ ಸಜ್ಜುಗೊಳಿಸಲಾಗಿದೆ. ಭಕ್ತರಿಗೆ ಬೇಕಾಗುವ ಮಾಹಿತಿ ಕೇಂದ್ರ, ಸ್ವಾಗತ ಕೇಂದ್ರ, ಸೇವಾ ಕೇಂದ್ರ, ಧನಸಹಾಯ ಮಾಡುವ ಭಕ್ತರಿಗೆ ಪ್ರಸಾದ ಕೌಂಟರ್‌ನ ವ್ಯವಸ್ಥೆಗೊಳಿಸಲಾಗಿದೆ ಎಂದವರು ತಿಳಿಸಿದರು.

ದೇವಸ್ಥಾನ ಅಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಠಾಕೂರ್‌ ಮಾತನಾಡಿ, ಯಾಗದ ಪ್ರಯುಕ್ತ ಪ್ರತಿನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಯಾಗಕ್ಕಾಗಿ ಮಾಹೆ ವಿ.ವಿ. ಮತ್ತು ಖಾಸಗಿಯವರಿಂದ 7 ರಿಂದ 8 ಎಕರೆ ಜಾಗವನ್ನು ಬಳಸಿಕೊಳ್ಳಲಾಗಿದೆ. ದೇಗುಲ ಮತ್ತು ಭಕ್ತರ ಸಹಕಾರದೊಂದಿಗೆ ಸುಮಾರು 4 ಕೋ.ರೂ. ವೆಚ್ಚದಲ್ಲಿ ಯಾಗ ಜರಗಲಿದೆ ಎಂದರು.

ಮಾ. 2, 3, 4ರಂದು ವಾರಣಾಸಿಯ ಗಂಗಾರತಿ ತಂಡದಿಂದ “ಶಿವಾರತಿ’ ಮಾಡಿಸಲಾಗುವುದು. ಫೆ. 22ರಿಂದ ಭಕ್ತರಿಂದ ಹೊರೆಕಾಣಿಕೆ ಸ್ವೀಕರಿಸಲಾಗುವುದು. ವಿಶೇಷ ಆಕರ್ಷಣೆಯಾಗಿ ಪುಂಗನೂರು ತಳಿಯ 5 ಹಸುಗಳನ್ನು ದೇಗುಲಕ್ಕೆ ತರಲಾಗಿದೆ. ಸುಮಾರು 2,000 ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿನಿತ್ಯ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಸಚಿವರು, ಗಣ್ಯರು ಭಾಗವಹಿಸುವರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ ಎಂದು ತಿಳಿಸಿದರು.

Advertisement

ಮಾ. 4ರ ಸಂಜೆ ದೇಗುಲಕ್ಕೆ ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳನ್ನು ವಿಶೇಷ ಮೆರವಣಿಗೆಯಲ್ಲಿ ಕರೆ ತರಲಾಗುವುದು. ಸಂಜೆ 5.30ಕ್ಕೆ ಸ್ವಾಮೀಜಿಯವರು ಅನುಗ್ರಹ ಭಾಷಣ ಮಾಡಲಿದ್ದಾರೆ. ಅನಂತರ ಸ್ವಾಮೀಜಿಯವರಿಂದ ಶ್ರೀಚಂದ್ರಮೌಳೀಶ್ವರ ಸ್ವಾಮಿಗೆ ಪೂಜೆ ನೆರವೇರಲಿದೆ. ಮಾ. 5ರಂದು ಯಾಗ ಮಂಟಪದಲ್ಲಿ ಬೆಳಗ್ಗೆ 6.30ರಿಂದ ಏಕಾದಶಿ ಕುಂಡಗಳಲ್ಲಿ ಅತಿರುದ್ರ ಮಹಾಯಾಗ, 11.30ಕ್ಕೆ ಪೂರ್ಣಾಹುತಿ, ಮಧ್ಯಾಹ್ನ ಸ್ವಾಮೀಜಿಯವರಿಂದ ಕಲಶಾಭಿಷೇಕ, ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದವರು ತಿಳಿಸಿದರು.

ದೇಗುಲದ ಮೊಕ್ತೇಸರ ದಿನೇಶ್‌ ಪ್ರಭು, ಟ್ರಸ್ಟಿ ಸಂಜಯ ಪ್ರಭು, ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕುಕ್ಕೆಹಳ್ಳಿ, ಕೋಶಾಧಿಕಾರಿ ಸತೀಶ್‌ ಪಾಟೀಲ್‌, ಸಂಘಟನ ಕಾರ್ಯದರ್ಶಿ ಬಾಲಕೃಷ್ಣ ಎಸ್‌. ಮಧ್ದೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾಕರ ಇಂದ್ರಾಳಿ, ಕಾರ್ಯಾಲಯ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಶಿವಪಾಡಿಗೆ ಚಿತ್ರನಟ ರಕ್ಷಿತ್‌ ಶೆಟ್ಟಿ ಭೇಟಿ: ಪುಂಗನೂರು ಗೋವುಗಳನ್ನು ಮುದ್ದಾಡಿದ ನಟ

Advertisement

Udayavani is now on Telegram. Click here to join our channel and stay updated with the latest news.

Next