ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ, ಕೊಡುಗೆಗಳನ್ನು ಪ್ರತಿ ಮನೆಗೆ ತಲುಪಿಸಲು ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಮೋರ್ಚಾಗಳ ಸಮಾವೇಶ ನಡೆಸಿ ಚುನಾವಣೆಗೆ ಸ್ಪಷ್ಟ ಸಂದೇಶ ರವಾನಿಸಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮೋರ್ಚಾ ಸಮಾವೇಶಗಳ ರಾಜ್ಯ ಸಂಚಾಲಕ ಬಿ.ವೈ.ವಿಜಯೇಂದ್ರ ತಿಳಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶಕ್ಕೆ ಪೂರ್ವಭಾವಿಯಾಗಿ ಎಲ್ಲ ಜಿಲ್ಲೆಗಳಲ್ಲಿ ಸಂಚಾಲಕರು, ಸಹ ಸಂಚಾಲಕರನ್ನು ನೇಮಿಸಿ ಒಂದು ಸುತ್ತಿನ ಸಭೆ ನಡೆಸಲಾಗುತ್ತಿದೆ.
ಫೆ.16ರಂದು ಎಲ್ಲ ಮೋರ್ಚಾಗಳ ರಾಜ್ಯ ಪದಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದರು. ಪಕ್ಷದಲ್ಲಿರುವ 7 ಮೋರ್ಚಾಗಳಾದ ಯುವ, ಎಸ್ಸಿ, ಎಸ್ಟಿ, ಒಬಿಸಿ, ಮಹಿಳಾ ಮೋರ್ಚಾ, ರೈತ ಮೋರ್ಚಾ ಮತ್ತು ಅಲ್ಪಸಂಖ್ಯಾತ ಮೋರ್ಚಾಗಳ ಸಶಕ್ತೀಕರಣ, ಸಕ್ರಿಯಗೊಳಿಸುವ ಗುರಿಯನ್ನು ಸಮಾವೇಶಗಳು ಹೊಂದಿವೆ ಎಂದರು.
ಹಳೇ ಮೈಸೂರು ಭಾಗದಲ್ಲಿ 150 ಸ್ಥಾನಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ನಿರ್ದಿಷ್ಟವಾಗಿ ಇಂತಿಷ್ಟೇ ಸ್ಥಾನ ಗೆಲ್ಲುತ್ತೇವೆ ಎಂದು ಈಗಲೇ ಹೇಳುವುದಿಲ್ಲ. 224 ವಿಧಾನಸಭೆ ಕ್ಷೇತ್ರಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಬಿಜೆಪಿ ನೆಲೆಯೇ ಇಲ್ಲವೆಂಬ ಭ್ರಮೆಯಲ್ಲಿದ್ದ ಪ್ರತಿಪಕ್ಷಗಳಿಗೆ ಕೆ.ಆರ್.ಪೇಟೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ಶಕ್ತಿ ಏನೆಂಬುದು ತೋರಿಸಿಕೊಟ್ಟಿದ್ದೇವೆ. ಫೆ. 20ರಂದು ಯುವ ಮೋರ್ಚಾ ಮೊದಲ ಸಮಾವೇಶವು ಮಂಡ್ಯ ನಗರದಲ್ಲಿ ನಡೆಯಲಿದೆ. ಕೇಂದ್ರದ ನಾಯಕರು ಬರುವ ನಿರೀಕ್ಷೆಯಿದೆ ಎಂದು ಹೇಳಿದರು.
224 ವಿಧಾನಸಭೆ ಕ್ಷೇತ್ರಗಳಲ್ಲಿ ಮೋರ್ಚಾ ಸಮಾವೇಶ ಸಂಘಟಿಸಲಾಗುತ್ತದೆ. ತುಮಕೂರು ಮಹಾನಗರದಲ್ಲಿ ಯುವ ಸಮಾವೇಶ ನಡೆಸಿದರೆ, ಗುಬ್ಬಿಯಲ್ಲಿ ಮಹಿಳಾ ಸಮಾವೇಶ ನಡೆಸುತ್ತೇವೆ. ತುರುವೇಕೆರೆಯಲ್ಲಿ ರೈತ ಸಮಾವೇಶ ನಡೆಯಲಿದೆ. ಮಾರ್ಚ್ 15ರೊಳಗೆ ಎಲ್ಲ ಜಿಲ್ಲೆ ಗಳಲ್ಲಿ ಮೋರ್ಚಾಗಳ ಸಮಾವೇಶಗಳನ್ನು ಪೂರ್ಣಗೊಳಿಸುವ ಗುರಿಯಿಟ್ಟುಕೊಳ್ಳಲಾಗಿದೆ ಎಂದರು. ಸಮಾವೇಶಗಳ ರಾಜ್ಯ ಸಹ ಸಂಚಾಲಕರಾದ ಪಕ್ಷದ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಇದ್ದರು.
ಎರಡು ಕೋಟಿ ಗುರಿ
ಸಮಾವೇಶಗಳ ಮೂಲಕ 2 ಕೋಟಿ ಮತದಾರರನ್ನು ತಲುಪುವ ಹಾಗೂ 50 ಲಕ್ಷ ಹೊಸ ಮತದಾರರನ್ನು ಸದಸ್ಯರನ್ನಾಗಿ ನೋಂದಣಿ ಮಾಡುವ ಗುರಿಯಿದೆ. ಅಭಿವೃದ್ಧಿ ವಿಚಾರವಾಗಿ ಪಕ್ಷ ಹೊಂದಿರುವ ದೂರದರ್ಶಿತ್ವ ಮನದಟ್ಟು ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಹಿಂದುತ್ವ, ಅಭಿವೃದ್ಧಿ ಅಜೆಂಡಾ ಮಾತ್ರವಲ್ಲ, ಚುನಾವಣೆಯಲ್ಲಿ ಗೆಲ್ಲಲು ಬ್ರಹ್ಮಾಸ್ತ್ರ ಸೇರಿ ಯಾವೆಲ್ಲ ಅಸ್ತ್ರ ಬಳಸಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ಆಯಾ ಭಾಗಕ್ಕೆ ಅಗತ್ಯವಿರುವ ಅಸ್ತ್ರ ಬಳಕೆಯಾಗಲಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಾನು ಕ್ರಿಯಾಶೀಲನಾಗಿದ್ದೆ. ಈಗ ಡಬಲ್ ಆಕ್ಟಿವ್ ಆಗಿದ್ದೇನೆ ಎಂದರು.