Advertisement

ಫೆ. 19-28: ಕಡತ ವಿಲೇವಾರಿ ಅಭಿಯಾನ: ಸಚಿವ ಸುನಿಲ್‌ ಕುಮಾರ್‌

12:15 AM Feb 06, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಫೆ. 19ರಿಂದ 28ರ ವರೆಗೆ ಕಡತ ವಿಲೇವಾರಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಹೇಳಿದ್ದಾರೆ.

Advertisement

ಪ್ರಸ್‌ಕ್ಲಬ್‌ನಲ್ಲಿ ಶನಿವಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾ.ಪಂ.ನಿಂದ ಜಿಲ್ಲಾ ಮಟ್ಟದ ಕಚೇರಿಯ ವರೆಗೆ ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕಡತಗಳ ವಿಲೇವಾರಿ ನಡೆಯಲಿದೆ. ಇನ್ನು ಮುಂದೆ ಯಾವ ಅಧಿಕಾರಿಯೂ ತನ್ನಲ್ಲಿ ಬರುವ ಕಡತಗಳನ್ನು ವಿಲೇವಾರಿ ಮಾಡದೆ ಇಟ್ಟುಕೊಳ್ಳದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮರಳು ಸಮಸ್ಯೆ ನಿವಾರಣೆಗೆ ಕ್ರಮ
ಜಿಲ್ಲೆಯಲ್ಲಿ ಮರಳು ಪೂರೈಕೆ ಸಮಸ್ಯೆ ಇದೆ. ಶೀಘ್ರದಲ್ಲೇ ಸೂಕ್ತ ಪರಿಹಾರ ಕಂಡು ಕೊಳ್ಳಲಾಗುವುದು ಎಂದರು.

ತುಳು ಅಧಿಕೃತ ಭಾಷೆ: ಪೂರಕ ಪ್ರಕ್ರಿಯೆ
ತುಳುವನ್ನು ಅಧಿಕೃತ ಭಾಷೆಯಾಗಿ ಮಾಡಿ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗುವಂತೆ ಮಾಡುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಡತಗಳನ್ನು ಸಿದ್ಧಗೊಳಿಸಿ ಕಾನೂನು ಇಲಾಖೆಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಜತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಂಗ ಮಂದಿರ:ಅನುದಾನ ಸೂತ್ರ ಜಾರಿ
ರಂಗಮಂದಿರಗಳಿಗೆ ಅನುದಾನ ಕುರಿತಂತೆ ಸೂತ್ರ ರಚಿಸಲಾಗಿದೆ. ಜಿಲ್ಲಾ ಮಟ್ಟದ ರಂಗ ಮಂದಿರಗಳಿಗೆ 5 ಕೋ.ರೂ. ಹಾಗೂ ತಾಲೂಕು ಮಟ್ಟದ ರಂಗಮಂದಿರಗಳಿಗೆ 3 ಕೋ.ರೂ ನೀಡಲಾಗುವುದು. ಹೆಚ್ಚುವರಿ ಮೊತ್ತವನ್ನು ಸ್ಥಳೀಯಾಡಳಿತವೇ ಭರಿಸಬೇಕಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೂ ಆಗಿರುವ ಸುನಿಲ್‌ ಕುಮಾರ್‌ ಹೇಳಿದರು.

Advertisement

ಅಕ್ರಮ ದನ ಸಾಗಾಟ: ಕಟ್ಟುನಿಟ್ಟಿನ ಕ್ರಮ
ದನ ಕಳ್ಳತನ, ಅಕ್ರಮ ಸಾಗಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಪೊಲೀಸ್‌ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಪದೇಪದೆ ಕಾನೂನನ್ನು ಉಲ್ಲಂಘನೆ ಮಾಡಿ, ಪ್ರಚೋದನೆ ಕೊಡುವ ಕೆಲಸ ಆಗುತ್ತಿದ್ದು, ಇನ್ನು ಅಂತಹ ಯಾವುದೇ ಚಟುವಟಿಕೆಯನ್ನು ಸಹಿಸುವುದಿಲ್ಲ ಎಂದರು.

ಶಾಸಕ ವಾದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಅವರನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ ಅಭಿನಂದನ ನುಡಿಗಳನ್ನಾಡಿದರು. ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ಜಿತೇಂದ್ರ ಕುಂದೇಶ್ವರ ನಿರೂಪಿಸಿದರು.

ಶ್ರದ್ಧಾಂಜಲಿ
ಶನಿವಾರ ನಿಧನರಾದ ಹಿರಿಯ ಪತ್ರಕರ್ತ ಬಿ.ಟಿ. ರಂಜನ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಪ್ರಾರ್ಥನೆ ಸಲ್ಲಿಸಲಾಯಿತು.

ವಿದ್ಯುತ್‌ ಬೆಲೆ ಏರಿಕೆ ಇಲ್ಲ
ವಿದ್ಯುತ್‌ ದರ ಏರಿಕೆ ತೀರ್ಮಾನ ಮಾಡುವುದು ಸರಕಾರವಲ್ಲ; ಕರ್ನಾಟಕ ವಿದ್ಯುತ್‌ತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ). ಆದರೆ ಈಗ ಸರಕಾರದ ಎದುರು ವಿದ್ಯುತ್‌ ಬೆಲೆ ಏರಿಕೆಯ ಯಾವುದೇ ಪ್ರಸ್ತಾವ ಇಲ್ಲ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next