Advertisement

ಫೆ. 11: ಪೆರ್ಡೂರು ಬಂಟರ ಸಮುದಾಯ ಭವನ ಲೋಕಾರ್ಪಣೆ

12:41 AM Feb 09, 2024 | Team Udayavani |

ಹೆಬ್ರಿ: ಕದಳೀಪ್ರಿಯ ಶ್ರೀ ಅನಂತಪದ್ಮನಾಭನ ಕ್ಷೇತ್ರವಾದ ಪೆರ್ಡೂರಿನಲ್ಲಿ 3.5 ಎಕರೆ ವಿಶಾಲವಾದ ಪ್ರದೇಶದಲ್ಲಿ ಬೃಹತ್‌ ಬಂಟರ ಸಮುದಾಯ ಭವನ ನಿರ್ಮಾಣಗೊಂಡಿದ್ದು, ಫೆ. 11ರಂದು ಲೋಕಾರ್ಪಣೆಗೊಳ್ಳಲಿದೆ. ಸಮಾರಂಭದಲ್ಲಿ ಸರ್ವರೂ ಭಾಗವಹಿಸಿ ಎಂದು ಬಂಟರ ಸಂಘ ಪೆರ್ಡೂರು ಮಂಡಲದ ಅಧ್ಯಕ್ಷ ಕೆ. ಶಾಂತಾರಾಮ ಸೂಡ ಹೇಳಿದರು.

Advertisement

ಅವರು ಗುರುವಾರ ನಡೆದ ಸಭೆಯಲ್ಲಿ ಉದ್ಘಾಟನೆ ಸಮಾರಂಭದ ಕುರಿತು ವಿವರ ನೀಡಿದರು.
ಪೆರ್ಡೂರು ಮಂಡಲ ಬಂಟರ ಸಂಘದ ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರ ನಿರಂತರ ಪರಿಶ್ರಮ ಹಾಗೂ ದಾನಿಗಳ ನೆರವಿನಿಂದ ಭವ್ಯವಾದ ಸಮುದಾಯ ನಿರ್ಮಾಣವಾಗಿದೆ. ಪೆರ್ಡೂರು ಹಾಗೂ ಸುತ್ತಲಿನ ಜನತೆಗೆ ದೂರದ ಪಟ್ಟಣದ ಸೊಬಗು ಹಾಗೂ ಆತ್ಯಾಧುನಿಕ ವ್ಯವಸ್ಥೆಯ ಸಭಾಭವನವನ್ನು ತಮ್ಮ ಊರಿನಲ್ಲೇ ಕಂಡು ಸಂಭ್ರಮಿಸುವ ಅವಕಾಶ ಒದಗಿಬಂದಿದೆ. ಫೆ. 11ರಂದು ಬೆಳಗ್ಗಿನಿಂದ ಸಂಜೆ ತನಕ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ, ಮಧ್ಯಾಹ್ನ ಸಹಭೋಜನ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ಸಂಘವು ನಿರಂತರ ಅಭಿವೃದ್ಧಿ ಹೊಂದುತ್ತ 4ವರ್ಷಗಳಲ್ಲಿ 50 ಕೋಟಿ ರೂ. ವಹಿವಾಟು ನಡೆಸಿದೆ. ಸಂಘದ ಆಶ್ರಯದಲ್ಲಿ ಸುಂದರ ಸಭಾಭವನ ನಿರ್ಮಾಣವಾಗಬೇಕು ಎಂಬ ದಶಕದ ಕನಸಿಗೆ ಪಳ್ಳಿ ಶ್ರೀನಿವಾಸ ಹೆಗ್ಡೆ ಕುಟುಂಬ ಹಾಗೂ ಸಮಾಜ ಬಾಂಧವರ ಸಹಕಾರ ದಾನಿಗಳ ಪ್ರೋತ್ಸಾಹದ ಫಲವೇ ಇಂದು ಗ್ರಾಮೀಣ ಪ್ರದೇಶದಲ್ಲಿ ಭವ್ಯ ಸಮುದಾಯ ಭವನ ಲೋಕಾರ್ಪಣೆಗೆ ಸಿದ್ಧಗೊಂಡಿದೆ ಎಂದರು.

ಸಂಘದ ಕೋಶಾಧಿಕಾರಿ ಪ್ರಮೋದ್‌ ರೈ ಪಳಜೆ, ಉಪಾಧ್ಯಕ್ಷರಾದ ದಿನೇಶ್ಚಂದ್ರ ಶೆಟ್ಟಿ ಬಜ್ಜಾಲು, ಮಹೇಶ್‌ ಶೆಟ್ಟಿ ಪೈಬೆಟ್ಟು, ರಾಜಕುಮಾರ್‌ ಶೆಟ್ಟಿ ದೊಡ್ಮನೆ, ಶಿವರಾಮ ಶೆಟ್ಟಿ ಬೆಳ್ಳರ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ ಕುತ್ಯಾರು ಬೀಡು ಸ್ವಾಗತಿಸಿ, ವಂದಿಸಿದರು.

ಸಮಾಜಮುಖಿ ಕಾರ್ಯ
ಸಮಾಜದ ಪ್ರತಿಯೊಬ್ಬರು ಆರ್ಥಿಕವಾಗಿ ಸದೃಢ‌ರಾದಾಗ ಸಮಾಜ ಬಲಿಷ್ಠ ವಾಗಲು ಸಾಧ್ಯ ಎಂಬ ಉದ್ದೇಶವನ್ನು ಇಟ್ಟುಕೊಂಡು ಬಂಟ ಸಮಾಜದಲ್ಲಿಯೇ ಮೊದಲ ಬಾರಿಗೆ ಎಂಬಂತೆ 2019ರಲ್ಲಿ ಸ್ಥಾಪಿತವಾದ ಪೆರ್ಡೂರು ಬಂಟರ ಸೌಹಾರ್ದ ಸಹಕಾರಿಯು ತನ್ನ ಲಾಭಾಂಶದಲ್ಲಿ ಪ್ರತೀ ವರ್ಷ ಸಂಘದ ವ್ಯಾಪ್ತಿಯ ಸಮಾಜದ ವಿದ್ಯಾರ್ಥಿಗಳಿಗೆ ಸುಮಾರು 7 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸುತ್ತಿದೆ. ಜತೆಗೆ ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಮತ್ತು ಉಡುಪಿ ತಾಲೂಕು ಸಮಿತಿ ಹಾಗೂ ಬಂಟ ಸಮಾಜದ ಮಹನೀಯರ ನಿರಂತರ ಸಹಕಾರದೊಂದಿಗೆ ನೊಂದವರಿಗೆ ಹಾಗೂ ಅನಾರೋಗ್ಯ ಪೀಡಿತರಿಗೆ ನೆರವಿನ ಹಸ್ತಾಂತರ ನೀಡುತ್ತಿದೆ ಎಂದು ಶಾಂತಾರಾಮ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next