ಶಿರ್ವ ಇಲ್ಲಿನ ಮುಖ್ಯ ರಸ್ತೆ ಮತ್ತು ಕುತ್ಯಾರು- ಮುದರಂಗಡಿ ರಸ್ತೆಯ ಜಂಕ್ಷನ್‌ನಲ್ಲಿರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಯ ದಂಡೆಯು ಒಳಚರಂಡಿ ಕಾಮಗಾರಿಯ ವೇಳೆ ನಡೆಸಿದ ನಿರ್ಲಕ್ಷ್ಯದಿಂದಾಗಿ ಕುಸಿಯುವ ಸ್ಥಿತಿಯಲ್ಲಿದ್ದು, ಅಪಾಯದ ಪರಿಸ್ಥಿತಿ ಎದುರಾಗಿದೆ.
ಶಿರ್ವ ಮಂಚಕಲ್ ಪೇಟೆಯ ಮಧ್ಯ ಭಾಗದ ಕಾರ್ ಸ್ಟಾಂಡ್ ಬಳಿಯಿಂದ ಕುತ್ಯಾರು-ಮುದರಂಗಡಿ ರಸ್ತೆಯ ಪ್ರಭಾ ಕ್ಲಿನಿಕ್‌ವರೆಗೆ ಲೋಕೋಪಯೋಗಿ ಇಲಾಖೆಯಿಂದ ಒಳಚರಂಡಿ ಕಾಮಗಾರಿ ನಡೆದಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಯ ವೇಳೆ ಜೆಸಿಬಿಯಿಂದ ಹೊಂಡ ತೆಗೆಯುವಾಗ ಬಾವಿಯ ಆವರಣ ಗೋಡೆಯ ತಳ ಭಾಗದ ಕಲ್ಲುಗಳು ಕುಸಿದಿದ್ದು, ರಸ್ತೆಯ ಬದಿ ಬಿರುಕು ಬಿಟ್ಟಿದೆ. ಮಳೆಗಾಲ ಸಮೀಪಿಸುತ್ತಿದ್ದರೂ ದಂಡೆಯ ಕೆಳಭಾಗದ ಕಲ್ಲುಗಳನ್ನು ಕಟ್ಟದೇ ಇರುವುದರಿಂದಾಗಿ ಮಳೆಗಾಲದಲ್ಲಿ ಬಾವಿಯು ದಂಡೆ ಸಹಿತ ಕುಸಿಯುವ ಭೀತಿ ಇದೆ.
ಹಲವು ವರ್ಷಗಳ ಹಿಂದೆ ಇದೇ ಬಾವಿಯು ಮಳೆಗಾಲದಲ್ಲಿ ದಂಡೆ ಸಹಿತ ಕುಸಿದು ಬಿದ್ದಿದ್ದು ಬಳಿಕ ಪುನರ್ ನಿರ್ಮಾಣಗೊಂಡು ಸಾರ್ವಜನಿಕರ ಉಪಯೋಗಕ್ಕಾಗಿ ಬಿಟ್ಟುಕೊಡಲಾಗಿತ್ತು. ಇದೀಗ ಗುತ್ತಿಗೆದಾರರ ನಿರ್ಲಕ್ಷéದಿಂದ ಮತ್ತೂಮ್ಮೆ ಬಾವಿ ಕುಸಿಯುವ ಮೊದಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ದಂಡೆಗೆ ಕಾಯಕಲ್ಪ ನೀಡಬೇಕಾಗಿದೆ.
ಚರಂಡಿ ಕಾಮಗಾರಿ ನಡೆಯುವ ಸಮಯ ಬಾವಿಯ ಕಲ್ಲುಗಳು ಕುಸಿದಿರುವುದನ್ನು ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳು ಸರಿಪಡಿಸುವ ಭರವಸೆ ನೀಡಿದ್ದಾರೆ ಎಂದು ಶಿರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ತಿಳಿಸಿದ್ದಾರೆ.
ಬಾವಿ ದಂಡೆಯ ವಿಚಾರ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಗುತ್ತಿಗೆದಾರರನ್ನು ಕರೆಸಿ ದಂಡೆ ದುರಸ್ತಿ ಕಾಮಗಾರಿ ಕೂಡಲೇ ನಡೆಸಿ ಪೂರ್ತಿಗೊಳಿಸಲು ಸೂಚನೆ ನೀಡಲಾಗಿದೆ.
-ಜಗದೀಶ್ ಭಟ್,
ಸಹಾಯಕ ಕಾರ್ಯಕಾರಿ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಉಡುಪಿ.