ದೇವನಹಳ್ಳಿ: ಜಿಲ್ಲೆಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಗುಡುಗು ಸಮೇತ ಅಲ್ಲಲ್ಲಿ ಆಗುತ್ತಿರುವ ಮಳೆಯಿಂದ ಮಾವು, ಟೊಮೆಟೊ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದ್ದು, ಕಟಾವಿಗೆ ಸಿದ್ಧವಾಗಿರುವ ಟೊಮೇಟೊ ಮತ್ತು ಮಾವು ಬಿರುಗಾಳಿಗೆ ನೆಲಕಚ್ಚುವ ಆತಂಕ ರೈತರಲ್ಲಿ ಎದುರಾಗಿದೆ.
ಇತ್ತೀಚೆಗೆ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕಾಯಿಯ ತೊಟ್ಟಿನ ಶಕ್ತಿ ಕುಂದಿದ್ದು, ಬಿರುಗಾಳಿ ಬೀಸಿದರೆ ಕಾಯಿ ಮರಗಳಿಂದ ನೆಲ ಕಚ್ಚುತ್ತವೆ. ಬಿದ್ದ ಕಾಯಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇರುವುದಿಲ್ಲ. ಋತುವಿಗೆ ಬಂದಿದ್ದರೂ, ವ್ಯಾಪಾರಸ್ಥರು ಅದನ್ನು ಕಡಿಮೆ ಬೆಲೆಗೆ ಖರೀದಿಸಿ ಲಾಭಕ್ಕೆ ಮಾರಿಕೊಳ್ಳುತ್ತಾರೆ. ಇದರಿಂದ ನಷ್ಟ. ಅಲ್ಲಲ್ಲಿ ಸ್ವಲ್ಪ ಮಳೆಯಾಗಿದ್ದು, ಜತೆಗೆ ಬಿರುಗಾಳಿ ಬೀಸುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ರೈತರ ವಾರ್ಷಿಕ ಬೆಳೆ: ಜಿಲ್ಲಾದ್ಯಂತ ರೈತರಿಗೆ ವಾರ್ಷಿಕ ಬೆಳೆ ಮಾವು ಹಾಗೂ ತರಕಾರಿ ಬೆಳೆಗಳಲ್ಲಿ ಹೆಚ್ಚು ರೈತರು ನಂಬಿರುವ ಬೆಳೆ ಟೊಮೆಟೋ. ಈ ಎರಡೂ ಬೆಳೆಗಳು ಇನ್ನೊಂದು ವಾರದ ನಂತರ ಮಾರುಕಟ್ಟೆ ಪ್ರವೇಶಿಸಲಾಗಿದೆ. ಮೊದಲ ತಳಿಗಳಾದ ರಾಜಗೀರಾ ಮತ್ತು ಬಾದಾಮಿ ಮಾವು ಋತುವಿಗೆ ಬಂದಿದ್ದು ಇದರ ಜೊತೆಗೆ ಬಣ್ಣಕ್ಕೆ ಬರುತ್ತಿವೆ. ಕಾಯಿಗಳ ಗಾತ್ರವೂ ದೊಡ್ಡದಾಗಿದ್ದು, ಈ ಹಂತದಲ್ಲಿ ಮಳೆಗಿಂತ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಾದರೆ ಮಾವು ನೆಲ ಕಚ್ಚುತ್ತದೆ.
ಮಳೆ, ಬಿರುಗಾಳಿ ಆರ್ಭಟ: ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಫಸಲಿದ್ದರೂ ಮಾರುಕಟ್ಟೆಯಿಲ್ಲದಂತಾಗಿ ರೈತರು ನಷ್ಟಕ್ಕೆ ಗುರಿಯಾಗಿದ್ದರು. ಶೇ.50ರಷ್ಟಿದ್ದ ಫಸಲು ಇದೀಗ ಶೇ. 25ರಿಂದ ಶೇ. 40ವರೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಟೊಮೇಟೊಗೆ ಉತ್ತಮ ಬೆಲೆ ಬಂದಿರಲಿಲ್ಲ. ಈ ವರ್ಷ ಉತ್ತಮ ಬೆಲೆ ಬಂದಿದ್ದರೂ, ಮಳೆ ಬಿರುಗಾಳಿ ಆರ್ಭಟಕ್ಕೆ ಬೆಳೆ ನಷ್ಟವಾಗುವ ಭೀತಿ ರೈತರಿಗೆ ಎದುರಾಗಿದೆ.
ದ್ರಾಕ್ಷಿ ಕೇಳುವವರೇ ಇಲ್ಲ: ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಅತಿ ಹೆಚ್ಚು ರೈತರು ದ್ರಾಕ್ಷಿ ಬೆಳೆಯುವುದರಿಂದ ಮಳೆಯ ಆರ್ಭಟಕ್ಕೆ ರೈತರು ಕಂಗಾಲಾಗಿದ್ದಾರೆ. ಮತ್ತೂಂದು ಕಡೆ ಬೆಲೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ದ್ರಾಕ್ಷಿಯನ್ನು ಪ್ರತಿವರ್ಷ ಬೆಳೆದಿದ್ದು, ಈಗಷ್ಟೇ ಕೊಯ್ಲಿಗೆ ಬಂದಿರುವ ದ್ರಾಕ್ಷಿ ಖರೀದಿಗೆ ವ್ಯಾಪಾರಸ್ಥರು ಮುಂದೆ ಬರದ ಪರಿಣಾಮ, ರೈತರ ತೋಟದಲ್ಲಿರುವ ದ್ರಾಕ್ಷಿಯನ್ನು ಕೇಳುವವರೇ ಇಲ್ಲ. ಬೆಲೆ ಕುಸಿತ ಪರಿಣಾಮ ದ್ರಾಕ್ಷಿ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.
ರೈತರು ಎಷ್ಟೇ ಬೆಳೆ ಬೆಳೆದರೂ ಒಂದಲ್ಲ ಒಂದು ಸಂಕಷ್ಟ ಎದುರಿಸುತ್ತಿದ್ದೇವೆ. ಮಳೆ ಹೆಚ್ಚಾಗಿ ಆಗುತ್ತಿರುವುದರಿಂದ ಉತ್ತಮವಾಗಿ ಬಂದಿದ್ದ ಮಾವು ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ. ಬಿರುಗಾಳಿ ಸಹಿತ ಮಳೆ ಮಾವು ನೆಲಕಚ್ಚುವಂತೆ ಮಾಡಿದ್ದು, ಸರ್ಕಾರ ಕೂಡಲೇ ರೈತರಿಗೆ ಬೆಳೆಗೆ ನಷ್ಟ ಪರಿಹಾರ ನೀಡಬೇಕು.
● ನಾರಾಯಣಸ್ವಾಮಿ, ರೈತ
ಪ್ರಕೃತಿ ವಕ್ರ ದೃಷ್ಟಿ:ರೈತ ಕಂಗಾಲು ಪ್ರಕೃತಿ ವಕ್ರದೃಷ್ಟಿ ರೈತ ಮತ್ತೆ ಬೆಲೆ ತೆರುವಂತಾಗಿದೆ. ವಾರ್ಷಿಕ ಬೆಳೆಯಾದ ಮಾವು ಹೂವು ಪ್ರಾರಂಭದಿಂದ ಔಷಧ ಸಿಂಪಡಿಸಿ ಫಸಲನ್ನು ಜೋಪಾನವಾಗಿ ಕಾಪಾಡಿಕೊಂಡು ಇನ್ನೇನೂ ಒಂದು ವಾರದ ನಂತರ ಕಟಾವು ಮಾಡಿ ಮಾರುಕಟ್ಟೆಗೆ ಪೂರೈಸಬೇಕು ಎನ್ನುವಷ್ಟರಲ್ಲಿ ವರುಣನ ಆರ್ಭಟಕ್ಕೆ ಮಾವು ನೆಲಕಚ್ಚಿದೆ. ಇದನ್ನೇ ನಂಬಿದ್ದ ರೈತರಿಗೆ ದಿಕ್ಕುತೋಚದಂತಾಗಿದೆ.
ಎಸ್.ಮಹೇಶ್