ಬೆಂಗಳೂರು: ರಾಜ್ಯದ ವಿವಿಧ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಸುಮಾರು 4 ಸಾವಿರ ಅಭ್ಯರ್ಥಿಗಳಿಗೆ ಹಾಜರಾತಿ ಕೊರತೆ ಎದುರಾಗಿದ್ದು, ವಾರ್ಷಿಕ ಪರೀಕ್ಷೆಯ ಪ್ರವೇಶ ಪತ್ರ ದೊರೆಯುವುದು ಬಹುತೇಕ ಅನುಮಾನ! ಮಾ.4ರಿಂದ 23ರ ವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದ್ದು, ರಾಜ್ಯದಲ್ಲಿ 1016 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿರುವ ಪರೀಕ್ಷೆಗೆ ವಿಜ್ಞಾನ ವಿಭಾಗದ 2,17,000, ವಾಣಿಜ್ಯ ವಿಭಾಗದ 2,61,000 ಹಾಗೂ ಕಲಾ ವಿಭಾಗದ 2,01,000 ವಿದ್ಯಾರ್ಥಿಗಳು ಸೇರಿ 6,80,000 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಪರೀಕ್ಷೆ ನೋಂದಣಿ ಮಾಡಿಕೊಂಡಿರುವ ಬಹುತೇಕ ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯಲ್ಲಿದ್ದಾರೆ. ಇದರಲ್ಲಿ ಸುಮಾರು 4 ಸಾವಿರ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆ ಕಾಡುತ್ತಿದೆ. ವಾರ್ಷಿಕವಾರು ಶೇ.75ರಷ್ಟು ಹಾಜರಾತಿಯನ್ನು ಕಾಪಾಡಿಕೊಳ್ಳಬೇಕೆಂಬ ನಿಯಮ ಹಿಂದಿನಿಂದಲೂ ಇದೆ. ಹಾಜರಾತಿ ಕೊರತೆ ಎದುರಿಸುತ್ತಿರುವ ವಿದ್ಯಾ ರ್ಥಿ ಗಳನ್ನು ಆಗಿಂದಾಗ್ಗೆ ಕಾಲೇಜಿನಿಂದ ಎಚ್ಚರಿಸಲಾಗುತಿತ್ತು. ಅಂತಹ ವಿದ್ಯಾರ್ಥಿಗಳ ಪಾಲಕ, ಪೋಷಕರಿಗೆ ಸಂದೇಶವನ್ನು ಕಾಲೇಜಿನಿಂದ ರವಾನೆ ಮಾಡಲಾಗುತ್ತಿತ್ತು ಮತ್ತು ನೋಟಿಸ್ ಕೂಡ ನೀಡಲಾಗುತಿತ್ತು. ಇಷ್ಟಾದರೂ ಸುಮಾರು 4 ಸಾವಿರ ವಿದ್ಯಾರ್ಥಿಗಳು ಹಾಜರಾತಿ ಕೊರತೆ ಎದುರಿಸುತ್ತಿರುವುದು ದುರದೃಷ್ಟಕರ ಎಂದು ಪಿಯು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಶೇ.75ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾ ರ್ಥಿ ಗಳನ್ನು ಪಿಯು ಇಲಾಖೆ ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸೇರಿಸಿದ್ದು, ಅಂತಹ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯ ಪ್ರವೇಶ ಪತ್ರವನ್ನು ವಿತರಿಸದಂತೆ ಕಾಲೇಜಿನ ಪ್ರಾಂಶುಪಾಲರಿಗೂ ಖಡಕ್ ಸೂಚನೆ ನೀಡಿದೆ. ನ್ಯಾಯಾಲಯದ ನಿರ್ದೇಶನದಂತೆ ಶೇ.75 ಹಾಜರಾತಿಯನ್ನು ಕಡ್ಡಾಯವಾಗಿ ವಿದ್ಯಾರ್ಥಿ ಶೈಕ್ಷಣಿಕ ವರ್ಷದಲ್ಲಿ ಪಡೆದಿರಬೇಕು. ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಶೇ.75ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳ ಪರೀಕ್ಷಾ ಪ್ರವೇಶ ಪತ್ರವನ್ನು ಪಿಯು ಇಲಾಖೆಗೆ ಹಿಂದಿರುಗಿಸುವಂತೆಯೂ ಪ್ರಾಂಶುಪಾಲರಿಗೆ ನಿರ್ದೇಶಿಸಲಾಗಿದೆ ಎಂದು ಸರ್ಕಾರಿ ಪದವಿ ಕಾಲೇಜಿ9ನ ಪ್ರಾಂಶುಪಾಲರೊಬ್ಬರು ವಿವರ ನೀಡಿದರು.
ವಿದ್ಯಾರ್ಥಿಗಳ ಹಾಜರಾತಿ ಮಾಹಿತಿಯನ್ನು ಇಲಾಖೆಗೆ ಮತ್ತು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಲು ಫೆ.26 ಕೊನೆಯ ದಿನವಾಗಿದೆ. ಬಹುತೇಕ ಕಾಲೇಜಿನ ಪ್ರಾಂಶುಪಾಲರು ಈಗಾಗಲೇ ಈ ಮಾಹಿತಿಯನ್ನು ಅಪ್‌ಡೇಟ್ ಮಾಡಿದ್ದಾರೆ. ಪಿಯು ಇಲಾಖೆಗೆ ಈಗಾಗಲೇ ಬಂದಿರುವ ಮಾಹಿತಿ ಪ್ರಕಾರ ಸುಮಾರು 4 ಸಾವಿರ ವಿದ್ಯಾರ್ಥಿಗಳು ಹಾಜರಾತಿ ಕೊರತೆ ಎದುರಿಸುತ್ತಿದ್ದು, ಕಳೆದ ಕೆಲವು ವರ್ಷದಲ್ಲಿ ಇದೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ ಎಂದೂ ಇಲಾಖೆ ಮೂಲಗಳು ತಿಳಿಸಿವೆ.
ಈ ವಿದ್ಯಾರ್ಥಿಗಳ ಭವಿಷ್ಯ?: ಕರ್ನಾಟಕ ಶಿಕ್ಷಣ ಕಾಯ್ದೆ 2006ರ ಪ್ರಕಾರ ಪಿಯುಸಿ, ಎಸ್ಸೆಸ್ಸೆಲ್ಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯು ವಾರ್ಷಿಕ ಪರೀಕ್ಷೆ ಎದುರಿಸಬೇಕಾದರೆ ಶೇ.75ರಷ್ಟು ಹಾಜರಾತಿ ಇರಲೇ ಬೇಕು. ದ್ವಿತೀಯ ಪಿಯುಸಿಯಲ್ಲಿ ಹಾಜರಾತಿ ಕೊರತೆ ಎದುರಿಸುತ್ತಿರುವ ಪ್ರಸಕ್ತ ಸಾಲಿನ 4 ಸಾವಿರ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. 2020-21ನೇ ಸಾಲಿನಲ್ಲಿ ಹೊಸದಾಗಿ ದ್ವಿತೀಯ ಪಿಯುಸಿಗೆ ಪ್ರವೇಶ ಪಡೆದು, ಪೂರ್ಣ ಹಾಜರಾತಿಯೊಂದಿಗೆ 2021ರಲ್ಲಿ ನಡೆಯ ಲಿರುವ ವಾರ್ಷಿಕ ಪರೀಕ್ಷೆ ಬರೆಯಬಹುದಾಗಿದೆ. ಇದನ್ನು ಹೊರತುಪಡಿಸಿ ಈ ವರ್ಷದ ಪರೀಕ್ಷೆ ಬರೆಯಲು ಬೇರೆ ಯಾವುದೇ ಸಾಧ್ಯತೆ ಇರುವುದಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪರೀಕ್ಷೆಗೆ ಸಹಕರಿಸಲು ಪ್ರಾಂಶುಪಾಲರಿಗೆ ನಿರ್ದೇಶನ
ಬೆಂಗಳೂರು: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು ಸಹಕರಿಸಿ ಎಂದು ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜಿನ ಪ್ರಾಂಶುಪಾಲರಿಗೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಿಸಿದೆ. ಮಾ.4ರಿಂದ 23ರ ವರೆಗೆ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ನಡೆಯಲಿದೆ. ಪದವಿ ತರಗತಿ ಬೋಧಿಸುತ್ತಿ ರುವ ಕೆಲವು ಪ್ರಥಮ ದರ್ಜೆ ಕಾಲೇಜುಗಳನ್ನು ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪದವಿ ಕಾಲೇಜಿನ ಕಟ್ಟಡ ಹಾಗೂ ಕೊಠಡಿಗಳನ್ನು ಮತ್ತು ಇತರೆ ಮೂಲ ಸೌಕರ್ಯಗಳನ್ನು ನೀಡಲು ಪ್ರಾಂಶುಪಾಲರು ಸಹರಿಸಬೇಕೆಂದು ಇಲಾಖೆ ನಿರ್ದೇಶಿಸಿದೆ. ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇಲಾಖಾ ವ್ಯಾಪ್ತಿಯ ಸರ್ಕಾರಿ ಅಥವಾ ಖಾಸಗಿ ಅನುದಾನಿತ ಪದವಿ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳ ಕಟ್ಟಡ ಅಥವಾ ಕೊಠಡಿ, ಇತರೆ ಸೌಲಭ್ಯಗಳನ್ನು ನೀಡಿ, ಸಿಬ್ಬಂದಿ ನೆರವಿನೊಂದಿಗೆ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಸಹಕರಿಸುವಂತೆ ಸೂಚಿಸಲಾಗಿದೆ.
ಹಾಜರಾತಿ ಕೊರತೆಯಿಂದ ಪರೀಕ್ಷೆ ವಂಚಿತರಾದವರು!
ವರ್ಷ ವಿದ್ಯಾರ್ಥಿಗಳು
2015 2050
2016 4720
2017 4204
2018 3700
2019 2500
2020 4000(ಅಂದಾಜು)