Advertisement

ಅಮಾನತು ಪ್ರಶ್ನಿಸಿ ಪತ್ನಿಯೊಂದಿಗೆ ಎಫ್‌ಡಿಸಿ ಧರಣಿ

01:16 PM Aug 19, 2021 | Team Udayavani |

ಗಜೇಂದ್ರಗಡ: ಸಮರ್ಪಕ ಕಾರಣಗಳಿಲ್ಲದೇ ತಮ್ಮನ್ನು ಅಮಾನತು ಮಾಡಿರುವುದನ್ನು ಪ್ರಶ್ನಿಸಿ ಪಟ್ಟಣದ ತಹಶೀಲ್ದಾರ್‌ ಕಚೇರಿ ಎಫ್‌ಡಿಸಿ ಜೆ.ಪಿ.ಜಯರಾಮ್‌ ಅವರು ಪತ್ನಿಯೊಂದಿಗೆ ಕಾರ್ಯಾಲಯ ಮುಂಭಾಗ ಮಂಗಳವಾರ ಸಂಜೆ ಧರಣಿ ನಡೆಸಿದರು.

Advertisement

ಎಫ್‌ಡಿಸಿ ಜೆ.ಪಿ.ಜಯರಾಮ್‌ ಅವರ ವ್ಯಾಪ್ತಿಯ ಕಡತಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೋಟಿಸ್‌ ನೀಡಲಾಗಿತ್ತು. ಆದರೆ ಎಫ್‌ ಡಿಸಿ ಜೆ.ಪಿ.ಜಯರಾಮ್‌ ಅವರು ನೋಟಿಸ್‌ ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಆ.6ರಂದು ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಂದಾಯ ನಿರೀಕ್ಷಕರೊಂದಿಗೆ ವಾಗ್ವಾದವೂ ನಡೆದಿತ್ತು. ಈ ಕುರಿತು ಕಂದಾಯ ನಿರೀಕ್ಷಕರು ನೀಡಿದ್ದ ದೂರಿನನ್ವಯ ತಹಶೀಲ್ದಾರರು ಜಿಲ್ಲಾಧಿ ಕಾರಿಗಳಿಗೆ ವರದಿ ಸಲ್ಲಿಸಿದ್ದರು. ವರದಿ ಆಧರಿಸಿ ಜಿಲ್ಲಾಧಿಕಾರಿಗಳು ಎಫ್‌ಡಿಸಿ ಜೆ.ಪಿ.ಜಯರಾಮ್‌ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಆದೇಶ ಹೊರ ಬೀಳುತ್ತಿದ್ದಂತೆ ಎಫ್‌ಡಿಸಿ ಜೆ.ಪಿ. ಜಯರಾಮ್‌ ಅವರು ಪತ್ನಿಯೊಂದಿಗೆ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದರು.

ಈ ವೇಳೆ ಮಾತನಾಡಿದ ಅಮಾನತುಗೊಂಡ ಎಫ್‌ಡಿಸಿ ಜೆ.ಪಿ.ಜಯರಾಮ್‌, ಕಳೆದ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತ ಬಂದಿದ್ದೇನೆ. ನನ್ನ ಕಾರ್ಯಕ್ಷೇತ್ರದ ವ್ಯಾಪ್ತಿಯ ಎಲ್ಲ ಕಡತಗಳನ್ನು ನಿರ್ವಹಣೆ ಮಾಡಿದ್ದೇನೆ. ಆದರೆ ನನಗೆ ಈ ಹಿಂದಿನ ತಹಶೀಲ್ದಾರರು ನೀಡಿದ ನೋಟಿಸ್‌ ಗೆ ಉತ್ತರವನ್ನೂ ನೀಡಿದ್ದೇನೆ. ಆದರೆ ಈಗ ಸಮರ್ಪಕ ಕಾರಣಗಳಿಲ್ಲದೇ ವಿನಾಕಾರಣ ನನ್ನನ್ನು ಅಮಾನತು ಮಾಡಿರುವುದು ಸರಿಯಲ್ಲ. ತಹಶೀಲ್ದಾರ್‌ ಸಮ್ಮುಖದಲ್ಲಿ ನಡೆದ ಮಾತುಕತೆಯನ್ನು ಯಾವ ಅರ್ಥದಲ್ಲಿ ಬಿಂಬಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಮನವಿ ಮಾಡಿದರು.

ನನ್ನ ಪತಿ ಇಂದು, ನಿನ್ನೆ ನೌಕರಿಗೆ ಸೇರಿದವರಲ್ಲ. ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ ಸೇರಿದಂತೆ ವಿವಿಧೆಡೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ಯಾವುದೋ ದುರುದ್ದೇಶದಿಂದ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ನಿಷ್ಠಾವಂತ ಸಿಬ್ಬಂದಿಯನ್ನು ಅಮಾನತು ಮಾಡಿರುವುದು ಖಂಡನೀಯ. ಈ ಕುರಿತು ಮೇಲಧಿಕಾರಿಗಳು ತಕ್ಷಣ ಪರಿಶೀಲಿಸಿ ನನ್ನ ಪತಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಕುಟುಂಬ ಸಮೇತ ತಹಶೀಲ್ದಾರ್‌ ಕಚೇರಿ ಮುಂದೆ ಕುಳಿತುಕೊಳ್ಳುತ್ತೇವೆ ಎಂದು ಅಳಲು ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next