Advertisement
2011ರಲ್ಲಿ ನಗರದ ಮಟ್ಟಿಗೆ ಪಿಒಪಿ ಗಣೇಶನ ಅಬ್ಬರ ಜೋರಾಗಿತ್ತು. ಹಾಗಾಗಿ, ಆಸುಪಾಸು ವರ್ಷಗಳಲ್ಲಿ ಪಿಒಪಿ ಗಣೇಶನ ಮೂರ್ತಿಗಳ ಸಂಖ್ಯೆ 10ರಿಂದ 12 ಲಕ್ಷ ಇತ್ತು. ಈಗ ಜನರಲ್ಲಿ ಜಾಗೃತಿ ಉಂಟಾಗಿದೆ. ಪರಿಣಾಮ 10ರಿಂದ 12 ಲಕ್ಷ ಮಣ್ಣಿನ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಆಗುತ್ತಿದೆ. ಅಂದರೆ, ಶೇ.80ರಷ್ಟು ಮಣ್ಣಿನ ಮೂರ್ತಿಗಳನ್ನು ಇಡಲಾಗುತ್ತಿದೆ. ಕೆರೆ, ಕಲ್ಯಾಣಿಗಳು, ಮೊಬೈಲ್ ಟ್ಯಾಂಕರ್‌ಗಳಲ್ಲಿ ವಿಸರ್ಜನೆಯಾಗುವ ಗಣೇಶನ ಮೂರ್ತಿಗಳ ಸಮೀಕ್ಷೆಯನ್ನು ವಿವಿಧ ಸಂಘಟನೆಗಳು ಮಾಡಿದ್ದು, ಅವುಗಳು ನೀಡಿದ ಮಾಹಿತಿ ಇದಾಗಿದೆ.
Related Articles
Advertisement
ಸಾಮಾಜಿಕ ಜಾಲತಾಣ ಮಾತ್ರವಲ್ಲದೇ, ಬಿಬಿಎಂಪಿ, ಜಲಮಂಡಳಿ, ರೋಟರಿ, ಫ್ರೆಂಡ್ ಆಫ್ ಲೇಕ್ ಸಂಘಟನೆಗಳು ಪಾಲಿಕೆ ವ್ಯಾಪ್ತಿಯಲ್ಲಿ ಜಾಗೃತಿ ಜಾಥಾ ನಡೆಸಿದರ ಪರಿಣಾಮ ಹಂತ-ಹಂತವಾಗಿ ಮಣ್ಣಿನ ಗಣೇಶ ಮೂರ್ತಿ ಬಗ್ಗೆ ಒಲವು ತೋರಿದ್ದಾರೆ. ಪಿಒಪಿ ಗಣೇಶ ಮೂರ್ತಿ ಕೆರೆಯಲ್ಲಿ ವಿಸರ್ಜಿಸಿದರೆ ವರ್ಷವಾದರೂ ಕರಗುವುದಿಲ್ಲ. ಮಣ್ಣಿನ ಗಣೇಶ ಮೂರ್ತಿ ಒಂದು ಗಂಟೆಯಲ್ಲಿ ಸಂಪೂರ್ಣ ಕರಗಲಿದೆ ಎಂದು ಚಿತ್ರಕಲಾ ಪರಿಷತ್ತಿನ ಪ್ರಾಧ್ಯಾಪಕ ಹಾಗೂ ಸ್ವತಃ ಕಲಾವಿದರಾದ ಕೆ. ವಿಶಾಲ್ ತಿಳಿಸಿದರು.
ಆಕರ್ಷಕ ರಿಯಾಯಿತಿ: ಸಾರ್ವಜನಿಕರು ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಂಘ-ಸಂಸ್ಥೆಗಳು ವಿವಿಧ ಆಕರ್ಷಕ ರಿಯಾಯಿತಿ ನೀಡುತ್ತಿವೆ. ಸಮರ್ಪಣ ಸಂಸ್ಥೆ 11ರಿಂದ 19 ಇಂಚಿನ ಗಣೇಶ ಮೂರ್ತಿಗಳಿಗೆ ಬೆಳ್ಳಿ ಮತ್ತು ಬಂಗಾರದ ನಾಣ್ಯಗಳನ್ನು ಹಾಕುತ್ತಿದ್ದು, ಅದೃಷ್ಟ ಪರೀಕ್ಷಿಸಿಕೊಳ್ಳಿ ಎಂದು ಜನರನ್ನು ಆಕರ್ಷಿಸಲಾಗುತ್ತಿದೆ. ರೋಟರಿ ಬೆಂಗಳೂರು ಗ್ರೀನ್ ಸಿಟಿ ಎಂಬ ಸಂಸ್ಥೆ ಮಣ್ಣಿನ ಗಣೇಶ ಮೂರ್ತಿ ಕೊಂಡುಕೊಂಡರೆ ಹೂವಿನಕುಂಡ ಉಚಿತವಾಗಿ ನೀಡುವ ಮೂಲಕ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಲು ಆಕರ್ಷಿಸುತ್ತಿದೆ.
ಶಿವಮೊಗ್ಗದಿಂದ ಬರ್ತಿವೆ ಮೂರ್ತಿಗಳು: ಮಣ್ಣಿನ ಗಣೇಶ ಮೂರ್ತಿಗಳಿಗಾಗಿ ಬೆಂಗಳೂರಿನಿಂದ ಬೇಡಿಕೆ ಬರುತ್ತಿವೆ. ಕಳೆದ ವರ್ಷ ಹತ್ತು ಮೂರ್ತಿಗಳಿಗೆ ಆರ್ಡರ್ ಬಂದಿತ್ತು. ಈ ವರ್ಷ ಮೂರುಪಟ್ಟು ಅಂದರೆ 30 ಗಣೇಶ ಮೂರ್ತಿಗೆ ಬೇಡಿಕೆಗಳು ಬಂದಿವೆ. ಈಗಾಗಲೇ ಮೂರ್ತಿಗಳ ತಯಾರಿಕೆ ನಡೆದಿದೆ. ಈ ಗಣೇಶ ಮೂರ್ತಿಗಳು ಕನಿಷ್ಠ 4 ಅಡಿ ಎತ್ತರವಿದ್ದು, 80ರಿಂದ 90 ಕೆಜಿ ತೂಗುತ್ತವೆ. ಕಳೆದ ನಾಲ್ಕೈದು ವರ್ಷದಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಆರ್ಥಿಕಮಟ್ಟವೂ ಸುಧಾರಿಸಿದೆ. ಒಂದು ಮೂರ್ತಿಯನ್ನು 12 ಸಾವಿರದಿಂದ 15 ಸಾವಿರ ರೂ.ಗೆ ಮಾರಾಟ ಮಾಡಲಾಗುವುದು ಎನ್ನುತ್ತಾರೆ 25 ವರ್ಷಗಳಿಂದ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿರುವ ಪರಶುರಾಮ್.
ಪ್ರಸಕ್ತ ವರ್ಷ ಮಣ್ಣಿನ ಮೂರ್ತಿಗಳಿಗೆ ಭಾರಿ ಬೇಡಿಕೆ ಇದ್ದು, 4 ಇಂಚಿನಿಂದ 5 ಅಡಿವರೆಗೆ ಒಂದು ಸಾವಿರಕ್ಕೂ ಅಧಿಕ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ. ನಗರದಲ್ಲಿ ಮಣ್ಣಿನ ಕೊರತೆ ಎದುರಾಗಿದ್ದು, ಮಾಗಡಿಯಿಂದ ಮಣ್ಣನ್ನು ತರಿಸಲಾಗುತ್ತಿದೆ.-ರಮೇಶ್, ಗಣೇಶ ಮೂರ್ತಿ ಕಲಾವಿದ. ಮಣ್ಣಿನ ಗಣೇಶನ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಲಕ್ಷಾಂತರ ಮಣ್ಣಿನ ಗಣೇಶ ಮೂರ್ತಿಗಳು ಬೇಕಾಗಿರುವುದರಿಂದ ಶಿವಮೊಗ್ಗದಿಂದಲೂ ಮೂರ್ತಿಗಳು ಬರುತ್ತವೆ. ಬಹುತೇಕ ಮೂರ್ತಿಗಳು ಬೆಂಗಳೂರು ಸುತ್ತಲಿನ ಹಳ್ಳಿಗಳಿಂದ ಬರುತ್ತವೆ.
-ಕೆ.ವಿಶಾಲ್, ಚಿತ್ರಕಲಾ ಪರಿಷತ್ತು * ಮಂಜುನಾಥ ಗಂಗಾವತಿ