Advertisement

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

02:51 PM Jun 15, 2024 | Team Udayavani |

ಪ್ರತೀ ವರ್ಷ ಜೂನ್‌ ಮೂರನೇ ರವಿವಾರದಂದು ಅಂತಾರಾಷ್ಟ್ರೀಯ ತಂದೆಯರ ದಿನ (ಫಾರ್ದಸ್‌ ಡೇ) ಆಚರಿಸುತ್ತೇವೆ. ಜೀವ ಕೊಟ್ಟು ಜೀವನ ರೂಪಿಸಿದ ತಂದೆಗೆ ಕೇವಲ ವರ್ಷಕೊಮ್ಮೆ ಹೂ ಗುತ್ಛ ಕೊಟ್ಟು ಮುಗುಳ್ನಗುತ್ತಾ ತಬ್ಬಿಕೊಂಡು ಬಿಟ್ಟರೆ ಸಂತೃಪ್ತಿಯಾಗಿ ಸಂಬಂಧಕ್ಕೆ ನ್ಯಾಯ ಒದಗಿಸಿದಂತಾಗುವುದಿಲ್ಲ. ಜವಾಬ್ದಾರಿ, ಕರ್ತವ್ಯ ಮುಗಿಯುವುದೂ ಇಲ್ಲ. ತಂದೆಯ ಋಣ ಒಂದು ದಿನದಲ್ಲಿ ಸುಲಭವಾಗಿ ತೀರಿಸಲು ಸಾಧ್ಯವೇ ಇಲ್ಲ.

Advertisement

ಪುರಾಣ, ಇತಿಹಾಸಗಳಲ್ಲಿ ತಂದೆಯ ವಚನಕ್ಕೆ ಬೆಲೆಕೊಟ್ಟು, ತಂದೆ ವಚನ ಭ್ರಷ್ಟರಾಗದಂತೆ ನೋಡಿಕೊಂಡ ಮಕ್ಕಳ ನಿದರ್ಶನಗಳಿವೆ. ಪುರುಷೋತ್ತಮನಾದ ಶ್ರೀರಾಮಚಂದ್ರ ದಶರಥನ ಮಾತನ್ನು ನೆರವೇರಿಸಲು ಸಪತ್ನಿಕನಾಗಿ ವನವಾಸಕ್ಕೆ ತೆರಳಿ ಪಿತೃವಾಕ್ಯ ಪರಿಪಾಲಕ ಎಂಬ ಬಿರುದಿಗೆ ಪಾತ್ರನಾದ. ಭಗವಂತನ ಆರನೇಯ ಅವತಾರವಾದ ಪರಶುರಾಮ, ತಂದೆ ಜಮದಗ್ನಿಗಳ ಆದೇಶದಂತೆ ತಾಯಿ ರೇಣುಕಾದೇವಿಯ ತಲೆಯನ್ನು ಕಡಿದು ತಂದೆಯ ಮಾತನ್ನು ಮೀರದ ಪುತ್ರ ಎಂಬ ಹೆಗ್ಗಳಿಕೆ ಅವನದಾಯಿತು.

ನಮಸ್ಕರಿಸುವಾಗ ಮಾತೃದೇವೋಭವ ಎಂದು ತಾಯಿಗೆ ಮೊದಲ ಸ್ಥಾನ ಕೊಟ್ಟರು, ಸಂಸಾರದಲ್ಲಿ ಘನತೆ ಗೌರವ ಜವಾಬ್ದಾರಿಯುತ ವಿಶಿಷ್ಟ ಸ್ಥಾನ ತಂದೆಯದು. ಮನೆಯ ಹಿರಿಯ ಕಿರಿಯರೆಲ್ಲರ ಬೇಕು-ಬೇಡಗಳನ್ನು ಪೂರೈಸಿ ರಕ್ಷಣೆ ನೀಡಬಲ್ಲ ಏಕೈಕ ನಂಬಿಕಸ್ಥ ಸಮರ್ಥ ವ್ಯಕ್ತಿ ಅಪ್ಪನ ತ್ಯಾಗಕ್ಕೆ, ಪ್ರೀತಿ, ವಾತ್ಸಲ್ಯಕ್ಕೆ ಬೆಲೆ ಕಟ್ಟಲಾದೀತೇ?

ನನ್ನ ಅಪ್ಪ ತುಂಬಾ ನಿಷ್ಠಾವಂತರು. ಶಿಸ್ತು, ಪ್ರಾಮಾಣಿಕತೆಗೆ ಹೆಸರಾದವರು. ಸಮಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರು. ಅವರನ್ನು ನೆರಳಿನಂತೆ ಅನುಸರಿಸುತ್ತಿದ್ದ ಸಾಧ್ವಿ ನನ್ನಮ್ಮ. ಮನೆ ತುಂಬಾ ಮಕ್ಕಳು. ಬಂದು ಹೋಗುವ ನೆಂಟರಿಷ್ಟರು, ಅತಿಥಿಗಳು ಎಲ್ಲರನ್ನೂ ಆಧರಿಸಿ ಉಪಚರಿಸಿ ಗೌರವದಿಂದ ಕಾಣುತ್ತಿದ್ದರು.

ಅಪ್ಪ ಜ್ಞಾನ ಭಂಡಾರವಿದ್ದಂತೆ. ಓದುವುದು ಅವರ ಹವ್ಯಾಸ ಯಾವ ಪುಸ್ತಕವಾದರೂ ಸರಿ ಓದಿ ಮುಗಿಸುವವರೆಗೂ ಮಲಗುತ್ತಿರಲಿಲ್ಲ. ತೆಲುಗು ಹಿಂದಿ, ಕನ್ನಡ , ಸಂಸ್ಕೃತ ಮತ್ತು ಇಂಗ್ಲಿಷ್‌ ಪುಸ್ತಕಗಳು ಅವರ ಗ್ರಂಥಾಲಯದಲ್ಲಿದ್ದವು. ಮಕ್ಕಳಿಗೂ ಹೇಳುತ್ತಿದ್ದರು ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಳ್ಳಿ ಯಾವ ಗೆಳೆಯರು ಬೇಕಾಗುವುದಿಲ್ಲ, ಸುಮ್ಮನೆ ಕಾಡು ಹರಟೆಯಲ್ಲಿ ಸಮಯ ವ್ಯರ್ಥ ಮಾಡಬೇಡಿರೆಂದು. ಅಪ್ಪನಿಗೆ ಶಾಸ್ತ್ರ ಪಾಠವು ಆಗಿತ್ತು, ಸಂಸ್ಕೃತ ಜ್ಞಾನವು ಇತ್ತು. ಅವರು ಮಾತನಾಡುವಾಗ ಸರ್ವಜ್ಞನ ವಚನಗಳು, ಸೋಮೇಶ್ವರ ಶತಕ, ಪುರಾಣ ಅನೇಕ ಧಾರ್ಮಿಕ ಗ್ರಂಥಗಳ ವಿಚಾರಗಳನ್ನು ಸಮಯೋಚಿತವಾಗಿ ಉದಾಹರಿಸುತ್ತಿದ್ದರು.

Advertisement

ಪುಟ್ಟ ಮಕ್ಕಳಿದ್ದಾಗ ಹೆಗಲ ಮೇಲೆ ಕೂಡಿಸಿಕೊಂಡು ಪ್ರಪಂಚದ ಪರಿಚಯ ಮಾಡಿಸುತ್ತಿದ್ದರು. ಸ್ವಲ್ಪ ಬೆಳೆದ ಮೇಲೆ ಕೈ ಹಿಡಿದು ನಡೆಸುತ್ತಾ ಪ್ರಾಣಿ ಪಕ್ಷಿ, ಮರ ಗಿಡಗಳ ವಿಚಾರ ಪಾಠದ ರೀತಿಯಲ್ಲಿ ತಿಳಿಸುತ್ತಿದ್ದರು. ಸಂಜೆ ಕೆಲಸದಿಂದ ಹಿಂದೆತಿರುಗಿದ ಮೇಲೆ ಮಕ್ಕಳ ಅಂದಿನ ದಿನಚರಿಯ ಬಗ್ಗೆ ವಿಚಾರಿಸುತ್ತಿದ್ದರು. ಹೋಂ ವರ್ಕ್‌ ಮಾಡದಿದ್ದರೆ, ಪದ್ಯಗಳನ್ನು, ಮಗ್ಗಿಯನ್ನು ಕಂಠಪಾಠ ಮಾಡದಿದ್ದರೆ ಬೆತ್ತದ ರುಚಿಯನ್ನು ನೋಡಬೇಕಾಗುತಿತ್ತು.

ಪುಸ್ತಕಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕಾಗುತ್ತಿತ್ತು. ಊಟದ ವಿಷಯದಲ್ಲಿಯೂ ಅಷ್ಟೇ, ರಾತ್ರಿ ಎಲ್ಲರೂ ಒಟ್ಟಿಗೆ ಕೂಡುತ್ತಿದ್ದೆವು. ಏನು ಬಡಿಸುತ್ತಾರೋ ಅದನ್ನು ಸಂತೋಷವಾಗಿ ತಿನ್ನ ಬೇಕಾಗಿತ್ತು. ಅನ್ನ ಚೆಲ್ಲುವಂತಿರಲಿಲ್ಲ. ಹಬ್ಬಗಳಲ್ಲಿ ಬಾಳೆ ಎಲೆ ಹಾಕಿ ಹತ್ತಾರು ಬಗೆಯ ಖಾದ್ಯಗಳನ್ನು ಬಡಿಸಿ ತೀರ್ಥ ಕೊಟ್ಟು ಗೋವಿಂದ ಎಂದು ಹೇಳುವವರೆಗೂ ಯಾರು ತಿನ್ನುವಂತಿರಲಿಲ್ಲ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಾಕಿಸಿಕೊಳ್ಳಬೇಕಾಗಿತ್ತು. ಹೆಜ್ಜೆಹೆಜ್ಜೆಗೂ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಸನ್ಮಾರ್ಗ ತೋರಿಸುತ್ತಿದ್ದ ಅಪ್ಪ ಜೀವನದಲ್ಲಿ ಎದುರಿಸಿದ ಕಷ್ಟಗಳೆಷ್ಟೋ.

ಆರ್ಥಿಕ ತೊಂದರೆ ಸಾವು ನೋವು ಮಕ್ಕಳ ಸೋಲು, ಗೆಲುವು ಅವರ ಭವಿಷ್ಯದ ಚಿಂತೆ, ಎಲ್ಲದರ ನಡುವೆಯೂ ಅಪ್ಪ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಿರಲಿಲ್ಲ. ಮಕ್ಕಳು ತಪ್ಪು ಮಾಡಿದಾಗ ಮನಸ್ಸಿಗೆ ನಾಟುವಂತೆ ತಿಳಿಸಿ ಹೇಳುತ್ತಿದ್ದರು. ಅವರು ಹೇಳುವ ರೀತಿಯಲ್ಲಿ ಮತ್ತೆ ತಪ್ಪು ಮಾಡಬಾರದು ಎಂದು ಅನಿಸಿಬಿಡುತ್ತಿತ್ತು. ಮಕ್ಕಳು ಸ್ವಾವಲಂಬಿಗಳಾಗಬೇಕು, ಸಮಾಜಕ್ಕೆ ಹೊರೆಯಾಗಬಾರದು ಎನ್ನುವುದೇ ಅಪ್ಪನ ಆಸೆಯಾಗಿತ್ತು. ಸಮಾಜಕ್ಕೆ ನಿಮ್ಮ ಕೈಲಾದ ಸೇವೆ ಮಾಡಿ ಹಸಿದವರಿಗೆ ಅನ್ನ ನೀಡಿ, ಹಂಚಿ ತಿನ್ನುವುದರಲ್ಲಿ ಆನಂದವಿದೆ ಎಂದು ಆಗಾಗ ಹೇಳುತ್ತಿದ್ದರು. ದೇಶ ಸೇವೆ ಈಶ ಸೇವೆ ಎಂದು. ಜೀವನದ ಪ್ರತೀ ಹೆಜ್ಜೆಗೂ ಶಕ್ತಿ ತುಂಬಿ ಮಕ್ಕಳ ಮಾರ್ಗದರ್ಶಿಯಾದ ಅಪ್ಪ ನಮ್ಮೊಡನೆ ಇಲ್ಲದಿರಬಹುದು. ಅವರ ಪ್ರಭಾವಳಿ ಎಲ್ಲರ ಮೇಲೆ ಬೆಳಕ ಚೆಲ್ಲಿದೆ ಇದು ಕೇವಲ ನನ್ನ ತಂದೆಯ ಉದಾಹರಣೆ.

ಇಷ್ಟೊಂದು ಮಹತ್ವದ ಪೂಜ್ಯ ಸ್ಥಾನ ಪಡೆದಿದೆ ಅಪ್ಪ ಎನ್ನುವ ಪದವಿ. ಆದರೆ ಇದಕ್ಕೆ ಅಪವಾದ ಕೆಲವು ಅಯೋಗ್ಯರು, ತಮ್ಮ ಬೇಜವಾಬ್ದಾರಿತನದಿಂದ ದುಶ್ಚಟಗಳ ದುವ್ಯìಸನಗಳ ದಾಸರಾಗಿ ಸಂಪಾದಿಸಲು ಯೋಗ್ಯತೆ ಇಲ್ಲದೆ ಹೆಂಡತಿ ಮಕ್ಕಳಿಗೆ ಪ್ರೀತಿ, ವಿಶ್ವಾಸ ನೀಡದೆ ವಿದ್ಯೆ ಕಲಿಸದೆ ಮರ್ಯಾದೆಯಾಗಿ ಜೀವನ ಮಾಡದೆ ನಂಬಿದವರ ಬಾಳನ್ನು ನರಕ ಮಾಡಿಬಿಡುತ್ತಾರೆ. ಹೆತ್ತ ಮಕ್ಕಳನ್ನು ದುಡ್ಡಿನ ಆಸೆಗೆ ಮಾರಿ ಗುಲಾಮರನ್ನಾಗಿಸುತ್ತಾರೆ. ಹೆಣ್ಣು ಮಕ್ಕಳನ್ನು ಕಾಮುಕರ ಕೈಗೆ ಒಪ್ಪಿಸುತ್ತಾರೆ. ತಮ್ಮ ಕಂದಮ್ಮಗಳನ್ನೇ ಕಾಮಿಸಲು ಹಿಂಜರಿಯದ ಪಾಪಿಗಳು, ಇಂಥವರನ್ನು ಸಮಾಜ ಎಂದೂ ಕ್ಷಮಿಸಬಾರದು.

ಸಮಾಜದಲ್ಲಿ ಅನೇಕರು ಅಂಧ ಮಕ್ಕಳಿಗೆ, ವಿಕಲಚೇತನರಿಗಾಗಿ ಶಾಲೆಗಳನ್ನು ತೆರೆದು ಅನೇಕ ವೃತ್ತಿಪರ ಶಿಕ್ಷಣಗಳನ್ನು ನೀಡುತ್ತಾ ಅವರಿಗೆ ಬದುಕನ್ನು ರೂಪಿಸಲು ನಂಬಿಕೆ ಭರವಸೆ ನೀಡಿ ತಂದೆಯಂತೆ ಪೋಷಿಸುತ್ತಿದ್ದಾರೆ. ಸಾವಿರಾರು ಬಡ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶಾಲಾ ಕಾಲೇಜುಗಳನ್ನು ತೆರೆದು ಊಟ-ವಸತಿಗಳಿಗೆ ಅನುಕೂಲ ಕಲ್ಪಿಸಿ ಭವ್ಯ ಭವಿಷ್ಯವನ್ನು ರೂಪಿಸಲು ಅನೇಕ ಮಂದಿ ಶ್ರಮಪಡುತ್ತಿದ್ದಾರೆ. ಅಂತಹ ಮಹನೀಯರು ಮಕ್ಕಳನ್ನು ತಂದೆಯಂತೆ ಬೆಳೆಸುತ್ತಿದ್ದಾರೆ.

ಗಡಿಯನ್ನು ಕಾಯುತ್ತಿರುವ ವೀರ ಸೈನಿಕರು ತಮ್ಮ ಸಂಸಾರದಿಂದ ದೂರವಿದ್ದು ನಾಡಿನ ಸಮಸ್ತರ ನೆಮ್ಮದಿಗಾಗಿ ಎಲ್ಲರ ಭದ್ರತೆ ಒಳತಿಗಾಗಿ ಚಳಿ, ಮಳೆ, ಗಾಳಿ ಎನ್ನದೆ ರಕ್ಷಣೆ ನೀಡುತ್ತಾ ಪ್ರಾಣಾರ್ಪಣೆ ಮಾಡಿರುವ ಅವರೆಲ್ಲರೂ ತಂದೆಯ ಸಮಾನರಲ್ಲವೇ. ಪರಿಸರ, ನೆಲ, ಜಲದ ಉಳಿವಿಗಾಗಿ ನಮ್ಮ ಸಂಸ್ಕೃತಿಯ ರಕ್ಷಣೆಗಾಗಿ ಎಲೆಮರೆಯ ಕಾಯಿಯಂತೆ ಹೋರಾಟ ನಡೆಸುತ್ತಿರುವ ಎಲ್ಲ ತಂದೆ ಸಮಾನರಿಗೂ ಶುಭಾಶಯಗಳು, ನಮನಗಳು!

*ಸಾವಿತ್ರಿ ರಾವ್‌, ಕ್ಲೀವ್‌ಲ್ಯಾಂಡ್‌

Advertisement

Udayavani is now on Telegram. Click here to join our channel and stay updated with the latest news.

Next