Advertisement

“ಇನ್ನಿಂಗ್ಸ್‌’ಮುಗಿಸಿದ ವಿಂಡೀಸ್‌ ಬ್ಯಾಟಿಂಗ್‌ ದೈತ್ಯ ವೀಕ್ಸ್‌

11:08 PM Jul 02, 2020 | Sriram |

ಬ್ರಿಜೌಟೌನ್‌: ವೆಸ್ಟ್‌ ಇಂಡೀಸಿನ ದೈತ್ಯ ಬ್ಯಾಟ್ಸ್‌ಮನ್‌, ವಿಶ್ವವಿಖ್ಯಾತ ಮೂರು “ಡಬ್ಲ್ಯು’ಗಳಲ್ಲಿ ಕೊನೆಯವರಾಗಿದ್ದ ಸರ್‌ ಎವರ್ಟನ್‌ ವೀಕ್ಸ್‌ ಇನ್ನಿಲ್ಲ.

Advertisement

95ರ ಇಳಿ ವಯಸ್ಸಿನ ಅವರು ಬುಧವಾರ ನಿಧನ ಹೊಂದಿದರು. ಇದರೊಂದಿಗೆ 50ರ ದಶಕದ ಕೆರಿಬಿಯನ್‌ ಕ್ರಿಕೆಟಿನ ವೈಭವಕ್ಕೆ ಕಾರಣವಾಗಿದ್ದ ತಾರೆಯೊಂದು ಕಣ್ಮರೆ ಯಾದಂತಾಯಿತು. “ಡಬ್ಲ್ಯುಯುಗ’ ಸಮಾಪ್ತಿಯಾಯಿತು.

ಬಾರ್ಬಡಾಸ್‌ ಮೂಲದ ಎವರ್ಟನ್‌ ವೀಕ್ಸ್‌ ಸಮಕಾಲೀನ ಕ್ರಿಕೆಟಿಗರಾದ ಫ್ರ್ಯಾಂಕ್‌ ವೊರೆಲ್‌ ಮತ್ತು ಕ್ಲೈಡ್‌ ವಾಲ್ಕಾಟ್‌ ಅವರೊಂದಿಗೆ ವಿಂಡೀಸಿನ ಕ್ರಿಕೆಟ್‌ ಪಾರಮ್ಯಕ್ಕೆ ಅಮೋಘ ಕೊಡುಗೆ ಸಲ್ಲಿಸಿದ ಹೀರೋ. ಮೂವರೂ 1948ರಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿ “ತ್ರೀ ಡಬ್ಲ್ಯುಸ್‌’ ಎಂದೇ ವಿಶ್ವಖ್ಯಾತರಾದರು. ವಿಶ್ವ ಕ್ರಿಕೆಟಿನ ಘಟಾನುಘಟಿ ಬೌಲರ್‌ಗಳಲ್ಲೂ ಭೀತಿ ಹುಟ್ಟಿಸಿದರು.

“ತ್ರೀ ಡಬ್ಲ್ಯುಸ್‌’ಗಳಲ್ಲಿ ಆಲ್‌ರೌಂಡರ್‌ ಆಗಿದ್ದ ಫ್ರ್ಯಾಂಕ್‌ ವೊರೆಲ್‌ 1967ರಲ್ಲೇ ನಿಧನರಾಗಿದ್ದರು. ಬ್ಯಾಟ್ಸ್‌ಮನ್‌ ಆಗಿದ್ದ ಕ್ಲೈಡ್‌ ವಾಲ್ಕಾಟ್‌ 2006ರಲ್ಲಿ ಕೊನೆಯುಸಿ ರೆಳೆದಿದ್ದರು.

ನಿವೃತ್ತಿ ಬಳಿಕ ಕೋಚ್‌, ವಿಶ್ಲೇಷಕ, ತಂಡದ ಮ್ಯಾನೇಜರ್‌, ಮ್ಯಾಚ್‌ ರೆಫ್ರಿ ಆಗಿ ಸೇವೆ ಸಲ್ಲಿಸಿದ್ದ ವೀಕ್ಸ್‌, ಐಸಿಸಿ ಹಾಲ್‌ ಆಫ್ ಫೇಮ್‌ ಗೌರವಕ್ಕೂ ಪಾತ್ರರಾಗಿದ್ದರು.
ಕಳೆದ ವರ್ಷ ಎವರ್ಟನ್‌ ವೀಕ್ಸ್‌ ಹೃದಯಾಘಾತಕ್ಕೆ ಒಳಗಾಗಿದ್ದರೂ ಸಾವಿನ ದವಡೆಯಿಂದ ಪಾರಾಗಿದ್ದರು. ಆದರೆ ಈ ಬಾರಿ ಸಾವಿಗೆ “ಬೌಲ್ಡ್‌’ ಆಗುವುದು ತಪ್ಪಲಿಲ್ಲ.

Advertisement

ಅತ್ಯುತ್ತಮ ಬ್ಯಾಟಿಂಗ್‌ ಸರಾಸರಿ
ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ಎವ ರ್ಟನ್‌ ವೀಕ್ಸ್‌, ಕ್ರಿಕೆಟ್‌ ಜಗತ್ತು ಕಂಡ ಹಾರ್ಡ್‌ ಹಿಟ್ಟರ್‌ಗಳಲ್ಲಿ ಒಬ್ಬರಾಗಿದ್ದರು. 1948ರ ಇಂಗ್ಲೆಂಡ್‌ ಪ್ರವಾಸದ ವೇಳೆ ಬ್ರಿಜ್‌ ಟೌನ್‌ನಲ್ಲಿ ಟೆಸ್ಟ್‌ಕ್ಯಾಪ್‌ ಧರಿಸುವಾಗ ವೀಕ್ಸ್‌ಗೆ 22 ವರ್ಷ. ಸರಿಯಾಗಿ ಒಂದು ದಶಕದ ಬಳಿಕ ಪಾಕಿಸ್ಥಾನ ಎದುರು ಟ್ರಿನಿ ಡಾಡ್‌ನ‌ಲ್ಲಿ ಕೊನೆಯ ಟೆಸ್ಟ್‌ ಆಡಿದರು. ಈ ಅವಧಿಯಲ್ಲಿ 48 ಟೆಸ್ಟ್‌ ಗಳಿಂದ 58.61ರ ಸರಾಸರಿಯಲ್ಲಿ 4,455 ರನ್‌ ಪೇರಿಸಿದ ಹೆಗ್ಗಳಿಕೆ ಇವರದಾಗಿತ್ತು. ಇದರಲ್ಲಿ 15 ಶತಕ ಸೇರಿದೆ. ಟಾಪ್‌-10 ಟೆಸ್ಟ್‌ ಸರಾಸರಿಯ ಯಾದಿಯಲ್ಲಿ ವೀಕ್ಸ್‌ ಹೆಸರು ತಪ್ಪದೇ ಕಾಣಿಸಿಕೊಳ್ಳುತ್ತಲೇ ಇದೆ.

ವಿಶ್ವದಾಖಲೆಯ ಸತತ 5 ಶತಕ
ಟೆಸ್ಟ್‌ ಪದಾರ್ಪಣೆ ಮಾಡಿದ ವರ್ಷ ದಲ್ಲೇ ಸತತ 5 ಪಂದ್ಯಗಳಲ್ಲಿ ಶತಕ ಬಾರಿಸಿ ವಿಶ್ವದಾಖಲೆ ಸ್ಥಾಪಿಸಿದ ಅಮೋಘ ಸಾಹಸ ವೀಕ್ಸ್‌ ಅವರದಾಗಿತ್ತು (141, 128, 194, 162, 101). ಇದರಲ್ಲಿ ಒಂದು ಶತಕ ಇಂಗ್ಲೆಂಡ್‌ ಎದುರು ಕಿಂಗ್‌ಸ್ಟನ್‌ನಲ್ಲಿ ಬಂದಿತ್ತು. ಉಳಿದ 4 ಸೆಂಚುರಿ ಭಾರತ ಪ್ರವಾಸದ ವೇಳೆ ಹೊಸದಿಲ್ಲಿ, ಮುಂಬಯಿ ಮತ್ತು ಕೋಲ್ಕತಾ ಟೆಸ್ಟ್‌ಗಳಲ್ಲಿ ಬಂದಿದ್ದವು. ಕೋಲ್ಕತಾ ಪಂದ್ಯದ ಎರಡೂ ಇನ್ನಿಂಗ್ಸ್‌ ಗಳಲ್ಲಿ ಶತಕ ಬಾರಿಸಿದ್ದರು. ಚೆನ್ನೈಯಲ್ಲಿ ಸತತ 6ನೇ ಶತಕ ಹೊಡೆಯುವ ಧಾವಂತ ದಲ್ಲಿದ್ದರು. ಆದರೆ 90ಕ್ಕೆ ರನೌಟ್‌ ಆಗಿ ನಿರಾಸೆ ಅನುಭವಿಸಬೇಕಾಯಿತು.

ವೀಕ್ಸ್‌ ಅವರ ಈ ಸತತ 5 ಟೆಸ್ಟ್‌ ಶತಕಗಳ ವಿಶ್ವದಾಖಲೆ 72 ವರ್ಷಗಳ ಬಳಿಕವೂ ಅಜೇಯವಾಗಿ ಉಳಿದಿದೆ. 2002ರಲ್ಲಿ ದ್ರಾವಿಡ್‌ ಸತತ 4 ಶತಕ ಬಾರಿಸಿದ್ದನ್ನು ಹೊರತುಪಡಿಸಿದರೆ, ವೀಕ್ಸ್‌ ದಾಖಲೆ ಸಮೀಪ ಸುಳಿದವರು ಯಾರೂ ಇಲ್ಲ.

ಕಂಬನಿ ಮಿಡಿದ ಕ್ರಿಕೆಟ್‌ ಜಗತ್ತು
ಎವರ್ಟನ್‌ ವೀಕ್ಸ್‌ ನಿಧನಕ್ಕೆ ಕ್ರಿಕೆಟ್‌ ಜಗತ್ತು ಕಂಬನಿ ಮಿಡಿದಿದೆ. ಐಸಿಸಿ, ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ರಿಕ್ಕಿ ಸ್ಕೆರಿಟ್‌, ಮೆರಿಲ್‌ಬಾನ್‌ ಕ್ರಿಕೆಟ್‌ ಕ್ಲಬ್‌ ಸದ್ಯರು, ಬಾರ್ಬಡಾಸ್‌ ಕ್ರಿಕೆಟ್‌ ಮಂಡಳಿ, ಮಾಜಿ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ, ವಿವಿಎಸ್‌ ಲಕ್ಷ್ಮಣ್‌, ರವಿಶಾಸ್ತ್ರಿ, ಡ್ಯಾರನ್‌ ಸಮ್ಮಿ, ಮೈಕ್‌ ಆಥರ್ಟನ್‌ ಮೊದಲಾದವರೆಲ್ಲ ಶೋಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next