ಹೊಸದಿಲ್ಲಿ: ಖಾದಿ ಗ್ರಾಮೋದ್ಯೋಗ ಆಯೋಗದ ಗೋಡೆ ಕ್ಯಾಲೆಂಡರ್ ಹಾಗೂ ಟೇಬಲ್ ಡೈರಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿರುವುದಕ್ಕೆ ರಾಜಕೀಯ ಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.
“ಇದು ಮಂಗಳಯಾನ ಎಫೆಕ್ಟ್’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರೆ, ಗಾಂಧೀಜಿ ಅವರು ರಾಷ್ಟ್ರಪಿತ, ಮೋದಿ ಏನು? ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ. ಖಾದಿ ಮತ್ತು ಗಾಂಧೀಜಿ ಅವರು ನಮ್ಮ ದೇಶದ ಇತಿಹಾಸ, ಸ್ವಾವಲಂಬನೆ ಹಾಗೂ ಹೋರಾಟದ ಸಂಕೇತಗಳು. ಗಾಂಧೀಜಿ ಅವರ ಫೋಟೋ ತೆಗೆದು ಹಾಕುವುದು ಪಾಪ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇìವಾಲಾ ಟೀಕಿಸಿದ್ದಾರೆ.
ಆದರೆ ಈ ವಿವಾದ ಅನಗತ್ಯ ಎಂದು ಪ್ರಧಾನಿ ಕಾರ್ಯಾಲಯ ಬಣ್ಣಿಸಿದೆ. ಮತ್ತೂಂದೆಡೆ, ಕ್ಯಾಲೆಂಡರ್‌ನಲ್ಲಿ ಗಾಂಧೀಜಿ ಭಾವಚಿತ್ರವನ್ನೇ ಹಾಕಬೇಕು ಎಂಬ ನಿಯಮವಾಗಲಿ, ಸಂಪ್ರದಾಯವಾಗಲಿ ಇಲ್ಲ ಎಂದು ಖಾದಿ ಗ್ರಾಮೋದ್ಯೋಗ ಆಯೋಗದ ಮುಖ್ಯಸ್ಥ ವಿ.ಕೆ. ಸಕ್ಸೇನಾ ಸಮರ್ಥಿಸಿಕೊಂಡಿದ್ದಾರೆ. 2002, 2005, 2011, 2013 ಹಾಗೂ 2016ರಲ್ಲೂ ಕ್ಯಾಲೆಂಡರ್‌ನಲ್ಲಿ ಗಾಂಧೀಜಿ ಚಿತ್ರ ಪ್ರಕಟ ವಾಗಿರಲಿಲ್ಲ. ಮೋದಿ ಅವರು ಪ್ರಧಾನಿ ಯಾದ ಬಳಿಕ, ಖಾದಿ ಬಳಕೆಗೆ ಸಲಹೆ ಮಾಡಿದ ಬಳಿಕೆ ಖಾದಿ ಮಾರಾಟ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
“ಮಂಗಳಯಾನ ಎಫೆಕ್ಟ್’ ಅಂದಿದ್ದೇಕೆ?: ಖಾದಿ ಆಯೋಗದ ಕ್ಯಾಲೆಂಡರ್‌ನಲ್ಲಿ ಮೋದಿ ಭಾವಚಿತ್ರ ಬಳಸಿದ್ದನ್ನು ಟೀಕಿಸಲು ರಾಹುಲ್ ಗಾಂಧಿ “ಮಂಗಳಯಾನ ಎಫೆಕ್ಟ್’ ಎಂಬ ಪದ ಬಳಸಿದ್ದಾರೆ. 2014ರಲ್ಲಿ ಮೊದಲ ಯತ್ನದಲ್ಲೇ ಇಸ್ರೋದ ಮಂಗಳಯಾನ ಯಶಸ್ವಿಯಾಗಿತ್ತು. ಆ ಮಹತ್ವಾಕಾಂಕ್ಷಿ ಯೋಜನೆಗೆ ಮನಮೋಹನ್ ಸಿಂಗ್ ಅವರು ಚಾಲನೆ ಕೊಟ್ಟಿದ್ದರಾದರೂ, ಮೋದಿ ಅವರು ಸಂಪೂರ್ಣ ಶ್ರೇಯಸ್ಸು ಪಡೆದುಕೊಂಡರು ಎಂದು ರಾಹುಲ್ ಆಗ ಹರಿಹಾಯ್ದಿದ್ದರು. ಅದೇ ರೀತಿ ಖಾದಿಗೂ, ಗಾಂಧಿಗೂ ಅವಿನಾಭಾವ ಸಂಬಂಧವಿದ್ದರೂ, ಶ್ರೇಯಸ್ಸನ್ನು ಮೋದಿ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಲು ರಾಹುಲ್ ಈ ರೀತಿ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.