Advertisement

ಐ ಲವ್‌ ಯೂ ಅಪ್ಪಾ

03:45 AM Jan 03, 2017 | |

ಕನಸಲ್ಲೂ ನಮ್ಮ ಬಗ್ಗೆಯೇ ಯೋಚಿಸುವ ಅಪ್ಪನಿಗೆ ಏನು ಕನಸುಗಳಿರಬಹುದು? ಅವನಿಗೂ ಪ್ರೀತಿಯಾಗಿತ್ತಾ? ಯಾವಾಗಲಾದರೂ ಒಮ್ಮೆ ನೆನಪಾಗುವ ಪ್ರೇಯಸಿಯೊಬ್ಬಳು ಇದ್ದಿರಬಹುದಾ? ಅಪ್ಪನ ಕಣ್ಣಂಚಲ್ಲಿ ನೀರು ಕಂಡರೆ ಯಾಕೆ ಭೂಮಿ ಬಿರಿದ ಅನುಭವವಾಗುತ್ತದೆ?

Advertisement

ಅಪ್ಪ ಈ ಭೂಮಿ ಮೇಲೆ ನಮಗೆ ಮೊದಲ ಪರಿಚಯ. ಇವರೇ ನಿಮ್ಮ ಅಮ್ಮ ಅಂತ ನಮಗೆ ಯಾರು ಹೇಳಿ ಕೊಡಬೇಕಾಗಿಲ್ಲ, ಅದು ಹೇಗೋ ನಮಗೆ ಗೊತ್ತಾಗಿ ಬಿಡುತ್ತದೆ. ಆದರೆ ಇವರೇ ನಿಮ್ಮ ಅಪ್ಪ ಅಂತ ನಮಗೇ ಅಮ್ಮ ಹೇಳಿದ ಮೇಲೇಯೇ ನಾವು ಅವನ ಹೆಗಲೇರುವುದು. ಅದೇಕೋ ಅಪ್ಪಂದಿರು ಹೆಣ್ಣು ಮಕ್ಕಳನ್ನ ಹತ್ತಿರ ಬಿಟ್ಟುಕೊಳ್ಳುವಷ್ಟು ನಮ್ಮನ್ನು ಬಿಟ್ಟುಕೊಳ್ಳುವುದಿಲ್ಲ. ಅಪ್ಪಮಗಳು, ಅಮ್ಮ ಮಗಳು, ಅಮ್ಮ ಮಗ ಈ ಎಲ್ಲಾ ಸಂಬಂಧಗಳಲ್ಲಿ ಇಲ್ಲದ ಒಂದು ಅಂತರ, ವಿಶಿಷ್ಟ ಮೌನ, ಸಾತ್ವಿಕ ಕೋಪ, ಅಕಾರಣ ಠೀವಿ, ಅಹಂ ಅಲ್ಲದ ಅಹಂ…ಇವೆಲ್ಲವೂ ಇರುವ ಒಂದು vಟಜಿಛ ಅಪ್ಪ ಮತ್ತು ಮಗನ ನಡುವೆ ಸೃಷ್ಟಿಯಾಗಿರುತ್ತದೆ. ಇದರ ಪರಿಮಾಣ ಪ್ರಾಂತ್ಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಮೇಲೆ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. 

ಮಲೆನಾಡಿನ ವಿಷಯಕ್ಕೆ ಬರುವುದಾದರೆ ನಮ್ಮಲ್ಲಿ ಅಪ್ಪ ಮಗನ ನಡುವೆ ಅಗತ್ಯಕ್ಕಿಂತ ಹೆಚ್ಚೇ ಅಂತರವಿರುತ್ತದೆ. ಅದನ್ನ ಕುವೆಂಪು “ಮಲೆನಾಡಿನ ಮರ್ಜೀ’ ಅಂತಲೇ ಕರೆದಿದ್ದಾರೆ. ತೋರಿಸಬೇಕಾದ ಪ್ರೀತಿಯನ್ನೆಲ್ಲಾ ಮಗನಿಗೆ ಬುದ್ಧಿ ಬೆಳೆಯುವುದಕ್ಕೂ ಮೊದಲೇ ತೋರಿಸಿ ಮಗ ಬೆಳೆಯುತ್ತಾ ಹೋದಂತೆ ಅವನಿಂದ ಬೇಕಂತಲೇ ಅಂತರ ಕಾಪಾಡಿಕೊಳ್ಳುತ್ತಾರೆ.

ಜಾಸ್ತಿ ಸಲುಗೆ ಕೊಟ್ಟರೆ ದಾರಿ ತಪ್ಪುತ್ತಾರೆ ಅನ್ನೊ ಭಯವೋ, ಯಾವಾಗಲೂ ಅನುಮಾನದ ಕಣ್ಣಿಟ್ಟಿರಬೇಕಂತಲೋ, ದಂಡಿಸಿದರೆ ಮಾತ್ರ ಶಿಸ್ತಿನಿಂದ ಬೆಳೆಯುತ್ತಾರೆ ಅಂತಲೋ ನಮ್ಮಿಂದ ದೂರವೇ ಇರುತ್ತಾರೆ. ಕಾಲ ಕಳೆದಂತೆ ಅಪ್ಪನ ಕೋಪ, ಸಿಟ್ಟು, ಸೆಡವು, ಅಸಹನೆ, ಅವಸರ, ಮೌನದ ಅಭಿವ್ಯಕ್ತಿಗಳಲ್ಲೇ ಅವರನ್ನು ಅರ್ಥಮಾಡಿಕೊಳ್ಳಲು ರೂಢಿ ಮಾಡಿಕೊಳ್ಳುತ್ತೇವೆ. ನಾವು ಹುಡುಗರು ಹುಡುಗಿಯರಿಗಾದರೆ ಪ್ರೀತಿಯನ್ನ ಹಂಗೋ ಹಿಂಗೋ ಹೆಚ್ಚು ಕಡಿಮೆ ಬ್ಯಾಲೆನ್ಸ್‌ ಮಾಡಿ ದಬಾಯಿಸಿ ಹೇಳಿ ಬಿಡುತ್ತೇವೆ. ಆದರೆ ಅಪ್ಪನ ಮುಂದೆ ನೀನು ನನಗೆಷ್ಟು ಇಷ್ಟ ಅಂತ ಹೇಳ್ಳೋಕೆ ಪದಗಳು ಸಿಗದೆ ತೊದಲುತ್ತಾ, ಕಣ್ಣಾಲಿಗಳಲ್ಲಿ ನೀರಾಡಿಕೊಂಡು ನಿಂತುಬಿಡುತ್ತೇವೆ. 

ಪ್ರೀತಿಯನ್ನ ಅಳೆಯೋಕೆ ಹೇಳ್ಳೋಕೆ ಆಗೋದೇ ಇಲ್ಲ ಅಂತ ಅನಿಸೋದು ಅಪ್ಪನ ಮುಂದೆ ನಿಂತಾಗ ಮಾತ್ರ. ಅಪ್ಪ ದಿನ ಹೇಗೆ ಅಷ್ಟು ಬೇಗ ಏಳುತ್ತಾರೆ, ಯಾವುದೇ ಕಂಪ್ಲೇಂಟುಗಳಿಲ್ಲದೆ ಕೆಲಸ ಮಾಡುತ್ತಾರೆ, ದುಡ್ಡಿಗೆ ಯಾಕಷ್ಟು ಮರ್ಯಾದೆ ಕೊಡುತ್ತಾರೆ, ಯಾಕೆ ಬೇಗ ಸಿಟ್ಟು ಬರುತ್ತದೆ, ಅವರಿಗೇನು ಕನಸುಗಳಿರಬಹುದು ಅಂತ ಚಿಕ್ಕಂದಿನಲ್ಲಿ ತುಂಬಾ ಯೋಚಿಸುತ್ತಿದ್ದೆ. 

Advertisement

ದೂರ ಕೂತು ಅವರು ಸಿಗರೇಟು ಸೇದುವ ಸ್ಟೈಲಿಗೆ ಮರುಳಾಗುತ್ತಿದ್ದೆನೇ ಹೊರತು, ಈ ಪ್ರಶ್ನೆಗಳನ್ನ ಕೇಳುವ ಧೈರ್ಯ ಯಾವತ್ತೂ ಇರಲಿಲ್ಲ. ನನಗೆ ಕೊಡೆ ಕೊಟ್ಟು ಅಪ್ಪ ಮಳೆಯಲ್ಲಿ ನೆನೆಯುತ್ತಾ ಬರುವಾಗ, ಗದ್ದೆಗೆ ಹಾಕಿದ ಭತ್ತದ ಬೀಜಗಳು ಮೊಳಕೆ ಒಡೆಯುವುದನ್ನ ಅಡಿಕೆ ಮರದಲ್ಲಿ ಹಿಂಗಾರ ಅರಳುವುದನ್ನ ನೋಡಿ ಅಪ್ಪ ಖುಷಿಪಡುವಾಗ, ನಾ ಬರೆದ ಉತ್ತರ ಪತ್ರಿಕೆಗಳನ್ನ ಸುಮ್ಮನೆ ತಿರುವಿ ಹಾಕುವಾಗ, ಹಾಳಾದ ಬೈಕನ್ನೋ ಪಂಪ್‌ ಸೆಟ್ಟನ್ನು ಎಲ್ಲಿಂದ ಸರಿಮಾಡಬೇಕು ಅಂತ ಸ್ಪಾÂನರ್‌ ಹಿಡಿದು ತಲೆ ಕೆಡಿಸಿಕೊಳ್ಳುವಾಗ, ಬಿದಿರಿನ ಅಡ್ಡೆಗಳಿಗೆ ತಲೆಯಿಂದ ಒತ್ತಿ ತೋಟಕ್ಕೆ ಬೇಲಿ ಕಟ್ಟುವಾಗ, ಕೈಯಲ್ಲಿ ರೇಖೆಗಳಿಂತ ಮುಳ್ಳಿನ ಗೀರುಗಳೇ ಜಾಸ್ತಿ ಇದ್ದರೂ ಎಷ್ಟೆ ದೊಡ್ಡವನಾದರೂ ನೀನೊಬ್ಬ ರೈತನ ಮಗ ಅನ್ನುವದನ್ನ ಮರೀಬೇಡ ಅಂತ ತನ್ನ ಕೆಲಸದ ಮೂಲಕವೇ ತೋರಿಸುವಾಗ, ಇವನು ನನ್ನ ಮಗ ಅಂದ ಕೂಡಲೇ ಯಾರೋ ಗಲ್ಲ ಮುಟ್ಟಿ ದೃಷ್ಟಿ ತೆಗೆಯುವಾಗ.. ನಾನು ಅಪ್ಪನ ಕಣ್ಣುಗಳನ್ನೆ ನೋಡುತ್ತಾ ನಿಂತು ಬಿಡುತ್ತಿದ್ದೆ. 

ಅಪ್ಪನಷ್ಟು ವೇಗವಾಗಿ ನನಗೆ ಯಾಕೆ ನಡೆಯೋಕೆ ಆಗಲ್ಲ ಅಂತ ಯೋಚಿಸುತ್ತಾ ಅವರ ನೆರಳನ್ನ ಹಿಡಿಯೋಕೆ ಓಡುತ್ತಾ ನಡೆಯುತ್ತಿದ್ದೆ. ನಾನು ಏನಾದರೂ ತಪ್ಪು ಮಾಡಿದರೆ ಅಪ್ಪನಿಗೆ ಯಾರಾದರೂ ಕೈಬೆರಳೆತ್ತಿ ತೋರಿಸುತ್ತಾರೆ ಅನ್ನೋ ಪಾಪ ಪ್ರಜ್ಞೆಯಿಂದಲೇ ಹಲವಾರು ಮಾಡಬೇಕಾದ ತಪ್ಪುಗಳನ್ನ ನಾನು ಬಾಲ್ಯ ಮತ್ತು ಇತರ ಯೌವ್ವನದಲ್ಲಿ ಮಾಡಲೇ ಇಲ್ಲ. 

ಇನ್ನು ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ಅಪ್ಪಂದಿರು ಮೆದುವಾಗಿರುತ್ತಾರೆ. ಆದರೆ ನಾವು ಮಾತ್ರ ನಮಗೆಲ್ಲಾ ಗೊತ್ತಿದೆ ಅಂತ ಶರ್ಟಿನ ಗುಂಡಿ ಬಿಚ್ಚಿಕೊಂಡು ಓಡಾಡುತ್ತಿರುತ್ತೇವೆ. ತೆಗೆದು ಕೊಟ್ಟಿರುವ ಫೋನಿನಲ್ಲಿ ಫ್ರಂಟ್‌ ಕ್ಯಾಮೆರಾ ಇಲ್ಲ, ಪಾಕೆಟ್‌ ಮನಿ ಸಾಕಾಗ್ತ ಇಲ್ಲ, ಓಡಾಡಲು ಬೈಕಿಲ್ಲ, ಇನ್ನು ಒಳ್ಳೆ ಕಾರು ಕೊಳ್ಳಬಹುದಿತ್ತು ಹೀಗೆ ನಮ್ಮ ಕಂಪ್ಲೇಟುಗಳಿಗೆ ಕೊನೆ ಎಂಬುದೇ ಇರೋದಿಲ್ಲ. ಆದರೆ ದುಡಿಮೆ ಅಂದರೆ ಏನು ಅದಕ್ಕೆ ತೆರಬೇಕಾದ ಬೆಲೆ ಏನು ಅಂತ ನಾವು ದುಡಿಯುವವರೆಗೂ ಗೊತ್ತಾಗಲ್ಲ. ಸಿಗುವ ಸಂಬಳಕ್ಕೆ ನೂರೆಂಟು ಟ್ಯಾಕ್ಸುಗಳ ಕತ್ತರಿ ಪ್ರಯೋಗಿಸಿ ಕೈಗಿಡುವವರನ್ನ ಬಾಯಿಗೆ ಬಂದಂತೆ ಬಯ್ಯುವಾಗ ಅಪ್ಪಯಾಕೆ ದುಡ್ಡು ಖರ್ಚು ಮಾಡುವುದಕ್ಕೆ ಯೋಚಿಸುತ್ತಿದ್ದರು ಅಂತ ಗೊತ್ತಾಗುತ್ತದೆ. 

ಅಪರೂಪಕ್ಕೆ ಯಾವತ್ತೋ ಒಂದು ದಿನ ತೋಟದಲ್ಲಿ ಮಣ್ಣು ಹೊತ್ತು ಮನೆಗೆ ಬರುವಾಗ ಅಪ್ಪನಿಗೆ ಯಾಕಷ್ಟು ಕೋಪ ಬರುತ್ತದೆ ಅಂತ ಅರಿವಾಗುತ್ತದೆ. ಸೊಸೈಟಿಯಲ್ಲಿ ಸೀಮೆಎಣ್ಣೆ ಕಟ್ಟೋಕೆ ಫೋನ್‌ ಬಿಲ್‌, ಕರೆಂಟ್‌ ಬಿಲ್‌ ಕಟ್ಟೋಕೆ ಕ್ಯೂ ನಿಲ್ಲುವಾಗ, ಅಪ್ಪ ನಮಗೆ ಗೊತ್ತಿಲ್ಲದ ಎಷ್ಟು ಕೆಲಸಗಳನ್ನ ಮಾಡುತ್ತಿದ್ದರು ಅಂತ ಗೊತ್ತಾಗುತ್ತದೆ. ಸೋಮಾರಿಯಾದಾಗ, ಜವಾಬ್ದಾರಿಯಿಂದ ನುಣುಚಿಕೊಳ್ಳಬೇಕು ಅಂತೆಲ್ಲಾ ಅನಿಸಿದಾಗ ಅಪ್ಪ ನೆನಪಾಗುತ್ತಾರೆ. 

ಕನಸು, ಪ್ಯಾಶನ್‌, ನನಗಿಷ್ಟ ಬಂದ ಹಾಗೆ ಬದುಕುತ್ತೇನೆ ಅಂತ ಈಗೆಲ್ಲಾ ನಾವಂದುಕೊಳ್ಳುತ್ತೇವಲ್ಲಾ, ಹಾಗೆ ನಮ್ಮ ಅಪ್ಪಂದಿರು ಕೂಡ ಅಂದುಕೊಂಡಿದ್ದರೆ ನಮ್ಮಗಳ ಸ್ಥಿತಿ ಏನಾಗಿರುತ್ತಿತ್ತು ಅಂತ ಯೋಚಿಸಿದರೆ ಭಯವಾಗುತ್ತದೆ. ಜನ್ಮ ಕೊಟ್ಟಿದ್ದಕ್ಕೆ ಥ್ಯಾಂಕ್ಸ ಹೇಳಬೇಕೋ, ಇಲ್ಲಾ ಅವರ ಎಲ್ಲಾಸಮಯ ಯೋಚನೆ ಕನಸು ಕಾಳಜಿಗಳ ತುಂಬೆಲ್ಲಾ ಬರೀ ನಾವೇ ತುಂಬಿಕೊಂಡಿರುವುದಕ್ಕೆ ಸಾರೀ ಕೇಳಬೇಕೋ ಅಂತ ಕೆಲವೊಮ್ಮೆ ಗೊಂದಲವಾಗುತ್ತದೆ.

ಸಾವಿನ ಬಗ್ಗೆ ನಾಳೆಗಳ ಬಗ್ಗೆ ಭಯವಾದಾಗ, ದೇವರ ಬಗ್ಗೆ ಡೌಟು ಶುರುವಾದಾಗ, ಹುಡುಗಿ ಕೈ ಕೊಟ್ಟಾಗ ಅಪ್ಪನ ಪಕ್ಕ ಸುಮ್ಮನೆ ಹತ್ತು ನಿಮಿಷ ಕೂತರೆ ಬದುಕೇನು ನಾವಂದುಕೊಂಡಷ್ಟು ಕಷ್ಟ ಅಲ್ಲ ಅನಿಸುತ್ತದೆ. ಬದುಕಿನ ಜೊತೆ ಅಡ್ಜಸ್ಟ್‌ ಮಾಡಿಕೊಂಡೇ ನಮಗೆ ಬೇಕಾದ ಬದುಕನ್ನ ಹೇಗೆ ಕಟ್ಟಿಕೊಳ್ಳಬಹುದು ಅಂತ ಹೇಳದೆ ಬದುಕಿ ತೋರಿಸಿದ ಅಪ್ಪನ ಬದುಕೇ ಒಂದು ಬರೆದಿಡಲಾಗದ ಫಿಲಾಸಫಿ. ಮನಸಿನ ಕಪಾಟಿನಲ್ಲಿಟ್ಟುಕೊಂಡರು ಸಾಕು ನೆಮ್ಮದಿಯಾಗಿ ಬದುಕಬಹುದು. 

ನಮಗೆ ಅಪ್ಪನಷ್ಟು ದೊಡ್ಡ ಕ್ರಿಟಿಕ್‌ ಯಾರು ಇರಲು ಸಾಧ್ಯವಿಲ್ಲ. ಅಪ್ಪಮೆಚ್ಚಿ ಬೆನ್ನು ತಟ್ಟಿದರೆ ಸಾಕು ಅಂತಲೇ ಹಲವಾರು ಬಾರಿ ಕೆಲಸ ಮಾಡುತ್ತೇವೆ. ಹುಡುಗರು ಅಪ್ಪನ ಜೊತೆ ಜಗಳ ಆಡುವ ಕ್ಷಣಗಳನ್ನ ಮಿಸ್‌ ಮಾಡಿಕೊಳ್ಳಬಾರದು. ನಾನಂತೂ ಅಪ್ಪನ ಜೊತೆ ಜಗಳ ಆಡುವ ಯಾವ ಗಳಿಗೆಗಳನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ, ಜಗಳ ಆಡುವಾಗಲೇ ಹೊಸ ಹೊಸ ವಿಚಾರಗಳು ಹೊಳೆಯುತ್ತವೆ.

ಬಹಿರಂಗದಲ್ಲಿ ಅಂತರ ಇದ್ದರೂ ಅಂತರಂಗದಲ್ಲಿ ಅಪ್ಪಹೇಳಿಕೊಟ್ಟ ಪಾಠಗಳು, ಕೊಟ್ಟ ಎಚ್ಚರಿಕೆಗಳು ಸದಾ ನಮ್ಮನ್ನು ನಮಗೆ ಗೊತ್ತಿಲ್ಲದೆ ಕಾಯುತ್ತಿರುತ್ತವೆ. ಅಪ್ಪನ ಪ್ರೀತಿ ಬೇರೆ ಪ್ರೀತಿಗಳಂತಲ್ಲ, ಅದಕ್ಕೆ ಕಾವ್ಯ ಸ್ಪರ್ಶವಿಲ್ಲ. ಹಾಗಾಗಿ ನೋಡಿ ಅಪ್ಪನ ಬಗ್ಗೆ ಬಂದಿರುವ ಕತೆಗಳಾಗಲಿ, ಕಾವ್ಯಗಳಾಗಲಿ ಬೆರಳೆಣಿಕೆಯಷ್ಟು. ಸಿನಿಮಾಗಳಲ್ಲಿ ಮದರ್‌ ಸೆಂಟಿಮೆಂಟ್‌ ಇದೆ ಅಂತಾರೆ ಹೊರತು ಫಾದರ್‌ ಸೆಂಟಿಮೆಂಟ್‌ ಇದೆ ಅನ್ನೋದು ಕಡಿಮೆ. ಯಾಕೋ ನಮ್ಮ ಕವಿಗಳಿಗೆ ಅಪ್ಪಂದಿರು ಪದಗಳಲ್ಲಿ ನೇಯ್ದಿಡಬೇಕು ಅನ್ನುವಷ್ಟು ಆಪ್ತವಾಗಿ ಕಂಡಿಲ್ಲ ಅಥವಾ ಪದಗಳಲ್ಲಿ ಹಿಡಿದಿಡಲಾಗದೇ ಸೋತಿರಬಹುದು. 

ಅಪ್ಪನ ಪ್ರೀತಿಯೂ ಅವರ ಮೌನದ ಹಾಗೆ, ಕೆಲವೊಮ್ಮೆ ಅರ್ಥವಾಗಲ್ಲ ಬಹಳಷ್ಟು ಬಾರಿ ನಮ್ಮ ಅಂದಾಜಿಗೇ ಸಿಗೋಲ್ಲ. 

ಕನಸಲ್ಲೂ ನಮ್ಮ ಬಗ್ಗೆಯೇ ಯೋಚಿಸುವ ಅಪ್ಪನಿಗೆ ಏನು ಕನಸುಗಳಿರಬಹುದು? ಅವನಿಗೂ ಪ್ರೀತಿಯಾಗಿತ್ತಾ? ಯಾವಾಗಲಾದರೂ ಒಮ್ಮೆ ನೆನಪಾಗುವ ಪ್ರೇಯಸಿಯೊಬ್ಬಳು ಇದ್ದಿರಬಹುದಾ? ಅಪ್ಪನ ಕಣ್ಣಂಚಲ್ಲಿ ನೀರು ಕಂಡರೆ ಯಾಕೆ ಭೂಮಿ ಬಿರಿದ ಅನುಭವವಾಗುತ್ತದೆ?

ಅಪ್ಪನ ಮೌನ ಕಾಡಿನ ಮೌನ ಇವೆರಡಲ್ಲಿ ಯಾವುದಕ್ಕೆ ಜಾಸ್ತಿ ತೂಕ…? ಇವೆಲ್ಲಾ ನಮ್ಮೊಳಗೆ ಹುಟ್ಟಿ ಸಾಯುವ ಪ್ರಶ್ನೆಗಳು.

ಬದುಕೋಕೆ ನನಗಿರುವ ಕಾರಣಗಳೇನು ಅಂತ ಯೋಚಿಸಿದಾಗ ಅಪ್ಪ ನೆನಪಾಗುತ್ತಾರೆ, ಯಾರಿಗೂ ಮುಲಾಜಿಲ್ಲದೆ ಬದುಕುವ ಅಪ್ಪ ದೇವರಿಗೆ ಕೈ ಮುಗಿಯುವಾಗ ದೇವರು ಇದ್ದಿರಬಹುದೇನೋ ಅನ್ನೋ ಸಣ್ಣ ಅನುಮಾನ ಬರುತ್ತದೆ. ಈ ಜಗತ್ತಿನಲ್ಲಿ ಕಾರಣವಿಲ್ಲದೆ ಬಯ್ಯೋಕೆ, ಧ್ಯಾನಿಯಂತೆ ಕೆಲಸ ಮಾಡೋಕೆ, ಅಕಾರಣವಾಗಿ ಪ್ರೀತಿಸೋಕೆ ಅಪ್ಪನಿಗೆ ಮಾತ್ರ ಸಾಧ್ಯ…..here only his love is unconditional..

– ಸಚಿನ್‌ ತೀರ್ಥಹಳ್ಳಿ
 

Advertisement

Udayavani is now on Telegram. Click here to join our channel and stay updated with the latest news.

Next