ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯಲ್ಲಿ ಜೈನ ಮುನಿಯ ಕೊಲೆ ಮಾಡಿರುವುದು ನಿಜಕ್ಕೂ ಖಂಡನೀಯ. ಜೈನ ಮುನಿಗಳಿಗೆ ರಕ್ಷಣೆಯೇ ಇಲ್ಲವಾಗಿದ್ದು, ರಕ್ಷಣೆ ಬಗ್ಗೆ ಸರಕಾರ ಲಿಖಿತ ಭರವಸೆ ನೀಡುವವರೆಗೂ, ಅಮರಣ ಉಪವಾಸ ಮಾಡುವುದಾಗಿ ಆಚಾರ್ಯ ಗುಣಧರನಂದಿ ಮಹಾರಾಜರು ಕಣ್ಣಿರು ಹಾಕಿದರು.
ಶನಿವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೆಕೋಡಿಯ ಶ್ರೀ ಕಾಮಕುಮಾರ ನಂದಿ ಮಹಾರಾಜ ಸ್ವಾಮೀಜಿ ಹತ್ಯೆ ಪ್ರಕರಣ ನಿಜಕ್ಕೂ ಜೈನ ಸಮಾಜಕ್ಕೆ ಹಾಗೂ ಜೈನ್ ಮುನಿಗಳಿಗೆ ತೀವ್ರ ಆತಂಕವನ್ನುಂಟು ಮಾಡಿದೆ. ಇಷ್ಟೇ ಅಲ್ಲದೇ ನಮಗೆ ಜೀವ ಭಯ ಕಾಡುತ್ತಿದ್ದು ಕೇವಲ ಜೈನ ಮುನಿಗಳಷ್ಟೇ ಅಲ್ಲದೇ ಸಮಾಜಕ್ಕೂ ಜೀವ ಭಯ ಕಾಡುತ್ತಿದೆ ಎಂದರು.
ಶಾಂತಿಪ್ರಿಯ ಸಮಾಜದ ಸ್ವಾಮೀಜಿಯ ಬರ್ಬರ ಹತ್ಯೆ ತೀವ್ರ ನೋವು ತಂದಿದೆ. ಘಟನೆ ನಡೆದು 24 ಗಂಟೆ ಕಳೆದರೂ ಸಹ ಇದುವರೆಗೆ ರಾಜ್ಯದ ಮುಖ್ಯಮಂತ್ರಿಯಾಗಲಿ ಸಚಿವರಾಗಲಿ ಒಂದೇ ಒಂದು ಹೇಳಿಕೆ ನೀಡಿಲ್ಲ. ಇದು ತೀವ್ರ ಖಂಡನೀಯವಾಗಿದೆ. ಸರಕಾರ ಒಂದು ಸಮಾಜಕ್ಕೆ ಸೀಮಿತವೇ ಎನ್ನುವಂತಾಗಿದೆ. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಉತ್ತಮ ಕಾರ್ಯ ಮಾಡಿದ್ದ 4 ಗಂಟೆಯಲ್ಲಿಯೇ ಆರೋಪಿಗಳನ್ನು ಬಂಧಿಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದರು.
ಸರ್ಕಾರಕ್ಕೆ ನಮ್ಮಂತ ಅಲ್ಪ ಸಂಖ್ಯಾತರು ಬೇಡವಾಗಿದೆ. ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು ಎಂದು ಗಳಗಳನೆ ಕಣ್ಣೀರು ಸುರಿಸಿದ ಜೈನಮುನಿ ಗುಣಧರನಂದಿ ಮಹಾರಾಜರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಲಿಖಿತ ಭರವಸೆ ಕೊಡುವವರೆಗೆ ಅನ್ನಾಹಾರ ತ್ಯಾಗ ಮಾಡುತ್ತೇನೆ. ಪ್ರಾಣ ಹೋಗುವವರೆಗೆ ಸಲ್ಲೇಖನ ಮಾಡುತ್ತೇನೆ. ಸರಕಾರ ನಮಗೆ ರಕ್ಷಣೆಯ ಲಿಖಿತ ಭರವಸೆ ನೀಡಬೇಕು ಎಂದರು.
ಸಮಾಜದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ವಿಮಲ ತಾಳಿಕೋಟಿ ತಿಳಿಸಿದರು.