ಧಾರವಾಡ: ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಆಹಾರದ ಹಕ್ಕಿಗಾಗಿ ಆಂದೋಲನ ಮತ್ತು ಗ್ರಾಮೀಣ ಕೂಲಿಕಾರರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡರು, ಕೇಂದ್ರ ಬಿಜೆಪಿ ಸರಕಾರ ದೇಶದ ಉದ್ಯಮಪತಿಗಳ ಸಾಲ ಮನ್ನಾ ಮಾಡಲು ಹಿಂದೇಟು ಹಾಕಲಿಲ್ಲ. ವಿಜಯ ಮಲ್ಯ ಭಾರತದ ಬ್ಯಾಂಕುಗಳಿಂದ 9000 ಕೋಟಿ ಸಾಲ ಮಾಡಿ ಲಂಡನ್‌ನಲ್ಲಿ ಐಷಾರಾಮಿ ಜೀವನ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.
ಆದರೆ ರೈತರ ಸಾಲ ಮನ್ನಾ ಅಂತಾ ಮಾತನಾಡುವುದು ಫ್ಯಾಷನ್ ಆಗಿದೆ ಅಂತಾ ಅರುಣ ಜೇಟಿಯವರು ಮಾಧ್ಯಮಗಳ ಮೂಲಕ ಹೇಳಿದ್ದಾರೆ. ಅಂದರೆ ದೇಶದ ಉದ್ಯಮಪತಿಗಳಿಗೆ ಒಂದು ನ್ಯಾಯ? ರೈತರಿಗೆ ಇನ್ನೊಂದು ನ್ಯಾಯವೇ ?ಎಂದು ಪ್ರಶ್ನಿಸಿದರು.
ರೈತರು ಬರಗಾಲದಿಂದ ತತ್ತರಿಸಿ ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಈಗಾಗಲೇ 3,50,000 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಅಂಶ ಬಯಲಾಗಿದೆ. ಇಂತ ಕೆಟ್ಟ ಗಳಿಗೆಯಲ್ಲೂ ಕೇಂದ್ರ ಸರಕಾರ ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ರೈತರಿಗೆ ಬೆಂಬಲ ಬೆಲೆ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರ ರೈತರ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಪಡಿತರ ಮೂಲಕ ಸಾರ್ವಜನಿಕರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕು. ಅರ್ಹ ಪ್ರತಿಯೊಬ್ಬರಿಗೂ ರೇಷನ್ ಕಾರ್ಡ್ ತಲುಪುವ ವ್ಯವಸ್ಥೆಯಾಗಬೇಕು. ಸುಮಾರು 30-40 ವರ್ಷಗಳಿಂದ ಬಡವರು ಅರಣ್ಯ ಭೂಮಿ, ಕಂದಾಯ ಭೂಮಿ ಉಳಿಮೆ ಮಾಡುತ್ತ ಆ ಭೂಮಿಯ ಉತ್ಪನ್ನಗಳನ್ನು ಅವಲಂಬಿಸಿದ್ದಾರೆ.
ಆದರೆ ರಾಜ್ಯ ಸರಕಾರ ಅವರಿಗೆ ಹಕ್ಕು ಪತ್ರ ನೀಡದೇ ಅವರನ್ನು ಅತಂತ್ರ ಸ್ಥಿತಿಯಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿದರು. ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ನಾಗಪ್ಪ ಹುಂಡಿ, ಆಹಾರದ ಹಕ್ಕಿಗಾಗಿ ಆಂದೋಲನ ಮುಖ್ಯಸ್ಥೆ ಶಾರದಾ ಗೋಪಾಲ ದಾಬಡೆ, ಮುಖಂಡರಾದ ಈರಣ್ಣ ಬಳಿಗೇರ, ಎಚ್.ಜಿ.ದೇಸಾಯಿ, ನಿಂಗಮ್ಮ ಸವಣೂರ ಮತ್ತು ಶರಣು ಗೋನವಾರ ಉಪಸ್ಥಿತರಿದ್ದರು.