Advertisement

ಕಾಂಗ್ರೆಸ್‌ ವಿರುದ್ಧ ಉಪವಾಸ ಸತ್ಯಾಗ್ರಹ

07:00 AM Apr 08, 2018 | Team Udayavani |

ಬೆಂಗಳೂರು : ಸಂಸತ್‌ ಕಲಾಪ ನಡೆಯಲು ಬಿಡದ ಕಾಂಗ್ರೆಸ್‌ ಸಂಸದರ ನಡವಳಿಕೆ ಖಂಡಿಸಿ  ಏ.12ರಂದು ದೇಶಾದ್ಯಂತ ಬಿಜೆಪಿ ಮತ್ತು ಎನ್‌ಡಿಎ ಸಂಸದರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌ ಹೇಳಿದ್ದಾರೆ.

Advertisement

ಯಲಹಂಕ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ ಮೇಲಿನ ಚರ್ಚೆಗೆ ಕಾಂಗ್ರೆಸ್‌ ಅವಕಾಶ ಮಾಡಿಕೊಟ್ಟಿಲ್ಲ . 23 ದಿನದ ಸಂಸತ್‌ ಅಧಿವೇಶನ ವ್ಯರ್ಥವಾಗಿದೆ. ಇದಕ್ಕೆ ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿಯವರೇ ನೇರ ಹೊಣೆ. ಈ ಧೋರಣೆ ಖಂಡಿಸಿ ಏ.12ರಂದು ದೇಶಾದ್ಯಂತ ಬಿಜೆಪಿ ಮತ್ತು ಎನ್‌ಡಿಎ ಸಂಸದರು ಜಿಲ್ಲಾ ಅಥವಾ ತಾಲೂಕು ಕೇಂದ್ರದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಎನ್‌ಡಿಎಗೆ ಪೂರ್ಣ ಜನಾದೇಶ ಸಿಕ್ಕಿರುವುದಕ್ಕೆ ಕಾಂಗ್ರೆಸ್‌ಗೆ ಅಸಹನೆ ಇದೆ. 48 ವರ್ಷದ ಕುಟುಂಬ ರಾಜಕಾರಣ ಹಾಗೂ 55 ವರ್ಷದ ಕಾಂಗ್ರೆಸ್‌ ಆಡಳಿತ ಕೊನೆಯಾಗಿರುವುದರಿಂದ ಕಾಂಗ್ರೆಸ್‌ ಹತಾಶಗೊಂಡಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇಲ್ಲ. ಕಾಂಗ್ರೆಸ್‌ ಸ್ವಭಾವ ಹಾಗೂ ಸಂಸ್ಕೃತಿಯಲ್ಲಿ ಪ್ರಜಾತಂತ್ರ ವಿರೋಧಿ ಧೋರಣೆ ಹೊಂದಿದೆ. 21 ರಾಜ್ಯಗಳಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿದೆ. ಹೀಗಾಗಿ ಕಾಂಗ್ರೆಸ್‌ ಸಂಸದರು ನಕಾರಾತ್ಮಕ ರಾಜಕಾರಣದ ಮೂಲಕ ಲೋಕತಂತ್ರ ಮತ್ತು ಪ್ರಜಾತಂತ್ರ ವ್ಯವಸ್ಥೆ  ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

23 ದಿನದ ವೇತನ ವಾಪಾಸ್‌
ಸಂಸತ್‌ ಅಧಿವೇಶನ ಸರಿಯಾಗಿ ನಡೆಯದಿರುವುದರಿಂದ ಬಿಜೆಪಿ ಹಾಗೂ ಎನ್‌ಡಿಎ ಸದಸ್ಯರು 23 ದಿನದ ವೇತನ ಹಾಗೂ ಭತ್ಯೆ ವಾಪ‌ಸ್‌ ನೀಡಲು ನಿರ್ಧರಿಸಿದ್ದಾರೆ. ಜನ ಸೇವೆಗೆ ಕಾಂಗ್ರೆಸ್‌ ಅಡ್ಡಿ ಮಾಡಿದೆ. ಹೀಗಾಗಿ ಜನರ ಹಣ ಪಡೆಯುವುದು ಸರಿಯಲ್ಲ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್‌ ಬಾಲಂಗೋಚಿ
ಮಾರ್ಚ್‌ 5ಕ್ಕೆ ಸಂಸತ್‌ ಅಧಿವೇಶನ ಆರಂಭವಾಗಿತ್ತು. ಮಾ.15 ಮತ್ತು 16ರಂದು ಕ್ರಮವಾಗಿ ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಕಾಂಗ್ರೆಸ್‌ ಪಕ್ಷ ಮಾ.27ರಂದು ಅವಿಶ್ವಾಸ ನಿರ್ಣಯ ಮಂಡಿಸಿದೆ. ಸಣ್ಣ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ ಕಾಂಗ್ರೆಸ್‌ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರೀಯ ಪಕ್ಷವೊಂದು ಸಂಸತ್‌ನಲ್ಲಿ ಸಣ್ಣಪಕ್ಷಗಳ ಬಾಲಂಗೋಚಿಯಂತೆ ವರ್ತಿಸುವ ಸ್ಥಿತಿಗೆ ಬಂದಿದೆ ಎಂದು ಲೇವಡಿ ಮಾಡಿದರು.

Advertisement

ಚರ್ಚೆಗೆ ಕಾಂಗ್ರೆಸ್‌ ನಕಾರ
ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಗೊಂದಲಕ್ಕೆ ಸಿಲುಕಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಏನು ಮಾಡಬೇಕು ಎಂಬುದೇ ಅವರಿಗೆ ಕಗ್ಗಂಟಾಗಿದೆ. ಪಿಎನ್‌ಬಿ ಬ್ಯಾಂಕ್‌ ಅವ್ಯವಹಾರ, ಕಾವೇರಿ ವಿವಾದ, ಆಂಧ್ರಕ್ಕೆ ವಿಶೇಷ ಸ್ಥಾನಮಾನ, ದಲಿತರ ವಿಷಯ ಸೇರಿದಂತೆ ಎಲ್ಲಾ ವಿಚಾರದಲ್ಲೂ ಪ್ರಧಾನಿ ಮೋದಿಯವರು ಮುಕ್ತ ಚರ್ಚೆಗೆ ಆಹ್ವಾನಿಸಿದ್ದರೂ ಕಾಂಗ್ರೆಸ್‌ ಸಂಸದರು ಬರಲಿಲ್ಲ. ಏಕೆಂದರೆ  ಈ ಎಲ್ಲಾ ಪ್ರಕರಣಗಳಲ್ಲೂ ಕಾಂಗ್ರೆಸ್‌ನ ಒಳಗುಟ್ಟು ಬಯಲಾಗುತ್ತದೆ ಎಂಬ ಭಯ ಅವರಲ್ಲಿದೆ. ಕಪಾಟಿನಲ್ಲಿರುವ ಕಾಂಗ್ರೆಸ್‌ನ ಅವ್ಯವಹಾರದ ಅಸ್ಥಿಪಂಜರ ಹೊರ ಬರುತ್ತದೆ ಎಂಬ ಆತಂಕವೂ ಅವರಲ್ಲಿ ಇದ್ದ ಕಾರಣ ಮುಕ್ತ ಚರ್ಚೆಗೆ ಬಂದಿಲ್ಲ ಎಂದು ದೂರಿದರು.

ಗ್ರಾಮ ಸ್ವರಾಜ್‌ ಅಭಿಯಾನ
ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮದಿನವಾದ ಏ.14ರಿಂದ ಮೇ.5ರವರೆಗೆ ದೇಶಾದ್ಯಂತ ಗ್ರಾಮ ಸ್ವರಾಜ್‌ ಅಭಿಯಾನ ನಡೆಸಲಾಗುವುದು. ಎಲ್ಲಾ ಸಂಸದರು ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌ ಯಾತ್ರೆ ಮಾಡಲಿದ್ದಾರೆ. ಕೇಂದ್ರ ಸಚಿವರು, ಆಯಾ ರಾಜ್ಯದ ಮುಖ್ಯಮಂತ್ರಿಗಳು, ಬಿಜೆಪಿ ಪದಾಧಿಕಾರಿಗಳು, ಜನ ಪ್ರತಿನಿಧಿಗಳು ಹಳ್ಳಿ ಹಳ್ಳಿಗೆ ಭೇಟಿ ನೀಡಿ, ಕೇಂದ್ರ ಸರ್ಕಾರದ ಉಜ್ವಲ, ಉಜಾಲ, ಸೌಭಾಗ್ಯ, ಜನ್‌ಧನ್‌, ಜೀವನ್‌ ಜ್ಯೋತಿ ಹಾಗೂ ಜೀವನ್‌ ಸುರಕ್ಷಾ, ಮುದ್ರಾ ಮತ್ತು ಇಂದ್ರಧನುಷ್‌ ಯೋಜನೆಯ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಕೇಂದ್ರದ ಸಾಧನೆಯನ್ನು ಜನರಿಗೆ ತಿಳಿಸಲಿದ್ದಾರೆ ಎಂದು ಸಚಿವ ಅನಂತಕುಮಾರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next