ಉದಯವಾಣಿ ಸಮಾಚಾರ
ಬಾದಾಮಿ: ಪ್ರವಾಸಿ ತಾಣಗಳ ಕ್ಷೇತ್ರ ಬಾದಾಮಿಯ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಂಗಳವಾರ ಸಾರಿಗೆ ಸಂಸ್ಥೆಯ ಬಸ್ ಓಡಿಸುವ ಮೂಲಕ ಐದು ನೂತನ ಬಸ್‌ಗಳ ಸೇವೆಗೆ ಚಾಲನೆ ನೀಡಿದರು. ಪಟ್ಟಣದ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಘಟಕದಲ್ಲಿ ಗುಳೇದಗುಡ್ಡ ಮತ್ತು ಬಾದಾಮಿ ಡಿಪೋಗೆ ತಲಾ ಎರಡು ಹೊಸ ಬಸ್‌ಗಳಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಚಿಮ್ಮನಕಟ್ಟಿ, ಬಾದಾಮಿ ಕ್ಷೇತ್ರ, ಐತಿಹಾಸಿಕ ಪ್ರವಾಸಿ ತಾಣಗಳನ್ನು ಹೊಂದಿದೆ. ದೇಶ-ವಿದೇಶ ಹಾಗೂ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅವರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಲು ಹೊಸ ಬಸ್‌ಗಳನ್ನು ನೀಡಲಾಗಿದೆ. ಪ್ರಯಾಣಿಕರು ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕೋರಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಯೂ ಬಲಿಷ್ಠವಾಗುತ್ತಿದೆ. ನಿತ್ಯವೂ ಲಕ್ಷಾಂತರ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಮುಖ್ಯವಾಗಿ ಬಡ ಮಹಿಳೆಯರ ಪ್ರಯಾಣಕ್ಕೆ ಅನುಕೂಲವಾಗಿದೆ. ಈ ಯೋಜನೆ, ಬಡವ- ಶ್ರೀಮಂತ ಎನ್ನದೇ ಪ್ರತಿಯೊಬ್ಬ ಮಹಿಳೆಗೂ ತಲುಪುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ತ್ವರಿತ ಸ್ಪಂದನೆ: ಸಾರಿಗೆ ಸಂಸ್ಥೆಯ ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತರಬೇಕು. ಅವುಗಳ ತ್ವರಿತ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ಜಾರಿಗೆ ಬರಲಿವೆ ಎಂದರು. ಇದೇ ಸಂದರ್ಭದಲ್ಲಿ ಬಾದಾಮಿ ಮತ್ತು ಗುಳೇದಗುಡ್ಡ ಘಟಕಕ್ಕೆ 2 ನೂತನ ಬಸ್ ಸೇವೆಗೆ ಸ್ವತಃ ಶಾಸಕರು ಬಸ್ ಚಾಲನೆ ಮಾಡುವ ಮೂಲಕ ಚಾಲನೆ ನೀಡಿ ಎಲ್ಲರ ಗಮನ ಸೆಳೆದರು. ಬರುವ ದಿನಗಳಲ್ಲಿ ಎರಡು ಹೊಸ ಪಲ್ಲಕ್ಕಿ ಬಸ್‌ಗಳು ಬಾದಾಮಿ ಘಟಕಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಪುರಸಭೆ ಸದಸ್ಯ ಮಂಜು ಹೊಸಮನಿ, ಬಾದಾಮಿ ಘಟಕ ವ್ಯವಸ್ಥಾಪಕ ಕೃಷ್ಣಾ ಚವ್ಹಾಣ, ಗುಳೇದಗುಡ್ಡ ಘಟಕ ವ್ಯವಸ್ಥಾಪಕಿ ವಿದ್ಯಾ ನಾಯಕ, ಸಿಬ್ಬಂದಿ ಈರಪ್ಪ ನಾಯ್ಕರ, ನಬಿಸಾಬ ದಿಬ್ಬದಮನಿ, ಸಂಗಣ್ಣ ದೊಡಮನಿ, ಈಶಪ್ಪ ಪಟ್ಟಣಶೆಟ್ಟಿ, ರುದ್ರಪ್ಪ ಅಂಗಡಿ, ಶಿವುಕುಮಾರ ಚಿಮಲ್, ರವಿ ತಳವಾರ, ಡಿ.ವೈ.ಚನಗೌಡರ ಉಪಸ್ಥಿತರಿದ್ದರು.