Advertisement

ಪಲಾವ್‌ ಎಂಬ ಫಾಸ್ಟ್ ಫ‌ುಡ್‌!

10:07 AM Nov 02, 2020 | |

ಅರ್ಧ ಗಂಟೆಯಲ್ಲಿ ತಯಾರಿಸಬಹುದಾದ ರುಚಿಕರ ತಿಂಡಿ ಪಲಾವ್‌. ಮಾರ್ನಿಂಗ್‌ ಕ್ಲಾಸ್‌, ಟ್ಯೂಶನ್‌ ಕಾರಣಕ್ಕೆ ಮಕ್ಕಳು ಬೇಗ ಮನೆ ಬಿಡ್ತಾರೆ ಅನ್ನುವ ಸಂದರ್ಭದಲ್ಲಿ ಮತ್ತು ವಿಶೇಷ ದಿನಗಳಲ್ಲಿ ಫ‌ಟಾಫ‌ಟ್‌ ಅಂತ ಮಾಡಬಹುದಾದ ತಿನಿಸು ಇದು. ದೊಡ್ಡವರಿಂದ ಚಿಕ್ಕ ಮಕ್ಕಳು ಸಹ ಇಷ್ಟಪಟ್ಟು ತಿನ್ನುವ ಪಲಾವ್‌ ನ ವೈವಿಧ್ಯಮಯ ರೆಸಿಪಿಗಳು ಇಲ್ಲಿವೆ.

Advertisement

ಚನ್ನಾ ಪಲಾವ್‌
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಚನ್ನಾ- 1 ಕಪ್‌, ಬಾಸುಮತಿ ಅಕ್ಕಿ -1 ಕಪ್‌, ನೀರು- 2 ಕಪ್‌, ಉಪ್ಪು ರುಚಿಗೆ, ಕೊತ್ತಂಬರಿ ಸೊಪ್ಪು, ಈರುಳ್ಳಿ -2, ಟೊಮೇಟೊ- 2, ಶುಂಠಿ- ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಜೀರಿಗೆ- 1ಚಮಚ, ಆಮ್‌ಚೂರ್‌ ಪೌಡರ್‌- 1 ಚಮಚ, ಅರಿಸಿನ-  ಕಾ ಲು ಚಮಚ, ಖಾರದ ಪುಡಿ- 1 ಚಮಚ, ದನಿಯ ಪುಡಿ- ಅರ್ಧ ಚಮಚ, ಜೀರಿಗೆ ಪುಡಿ- ಕಾಲು ಚಮಚ, ಕಸೂರಿ ಮೇತಿ- 1, ತುಪ್ಪ/ ಎಣ್ಣೆ -3 ಚಮಚ, ಪಲಾವ್‌ ಎಲೆ, ಲವಂಗ, ಚಕ್ಕೆ.

ಮಾಡುವ ವಿಧಾನ
ಚನ್ನಾವನ್ನು ಪ್ರತ್ಯೇಕವಾಗಿ ಬೇಯಿಸಿಕೊಳ್ಳಿ. ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೆನೆಸಿಡಿ. ಕುಕ್ಕರ್‌ನಲ್ಲಿ ತುಪ್ಪ ಹಾಕಿ, ಬಿಸಿ ಮಾಡಿ. ಪಲಾವ್‌ ಎಲೆ, ಜೀರಿಗೆ, ಲವಂಗ, ಚಕ್ಕೆ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಶುಂಠಿ ಬೆಳ್ಳುಳ್ಳಿ ಪೇಸ್ಟ್ , ಟೊಮೇಟೊ ಸೇರಿಸಿ ಹುರಿಯಿರಿ. ಮಸಾಲೆ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಬಾಡಿಸಿ. ಚನ್ನಾ ಹಾಕಿ ಮಿಶ್ರಣ ಮಾಡಿ. ಬಾಸುಮತಿ ಅಕ್ಕಿ ಹಾಕಿ ಎಲ್ಲ ಪದಾರ್ಥಗಳನ್ನು ಸೇರಿಸಿ ಒಂದು ನಿಮಿಷ ಹುರಿಯಿರಿ. ಅನಂತರ ಎರಡು ಕಪ್‌ ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಎರಡು ವಿಷಲ್‌ ಆಗುವವರೆಗೆ ಕುಕ್ಕರ್‌ ಕೂಗಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ.

ಆಲೂ ಮೇತಿ 
ಬೇಕಾಗುವ ಸಾಮಗ್ರಿಗಳು
ಬಾಸುಮತಿ ಅಕ್ಕಿ- ಒಂದೂವರೆ ಕಪ್‌, ಮೆಂತ್ಯೆ ಸೊಪ್ಪು- 1ಕಟ್ಟು, ಈರುಳ್ಳಿ- 2, ಟೊಮೇಟೊ- 3, ಕತ್ತರಿಸಿದ ಆಲೂಗಡ್ಡೆ – 4, ಬಟಾಣಿ- ಅರ್ಧ ಕಪ್‌, ಜೀರಿಗೆ- 1 ಚಮಚ, ಕಾಳುಮೆಣಸು-10, ಪಲಾವ್‌ ಎಲೆ- 1, ಏಲಕ್ಕಿ- 2, ಲವಂಗ- 4, ಗರಂ ಮಸಾಲೆ- 1 ಚಮಚ, ಖಾರದ ಪುಡಿ- ಅರ್ಧ ಚಮಚ, ಹಸಿ ಮೆಣಸು-2, ಅರಿಸಿನ- ಅರ್ಧ ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಉಪ್ಪು ರುಚಿಗೆ, ನೀರು- 3 ಕಪ್‌, ತುಪ್ಪ- 4 ಚಮಚ ಮಾಡುವ ವಿಧಾನ ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಪಲಾವ್‌ ಎಲೆ, ಜೀರಿಗೆ, ಲವಂಗ, ಏಲಕ್ಕಿ, ಕಾಳುಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್  ಹಾಕಿ ಬಾಡಿಸಿ. ಆಲೂಗಡ್ಡೆ, ಈರುಳ್ಳಿಯನ್ನು ಕೆಂಬಣ್ಣ ಬರುವವರೆಗೆ ಹುರಿದು ಹಾಕಿ. (ಬೇಕಿದ್ದರೆ ಪಲಾವ್‌ ಬೆಂದ ಮೇಲೆ ಆಲೂಗಡ್ಡೆಯನ್ನು ಸೇರಿಸಬಹುದು) ಟೊಮೇಟೊ ಸೇರಿಸಿ ಚೆನ್ನಾಗಿ ಹುರಿಯಿರಿ. ಬಟಾಣಿ ಮತ್ತು ಹುರಿದ ಆಲೂಗಡ್ಡೆ, ಮೆಂತ್ಯೆ ಸೊಪ್ಪನ್ನು ಹಾಕಿ ಬಾಡಿಸಿ. ಅನಂತರ ಗರಂ ಮಸಾಲೆ, ಅರಿಸಿನ, ಖಾರದಪುಡಿ ಹಾಕಿ ಮಿಶ್ರಣ ಮಾಡಿ. ತೊಳೆದು, ನೆನೆಸಿದ ಬಾಸುಮತಿ ಅಕ್ಕಿಯನ್ನು ಮಸಾಲೆ ಪದಾರ್ಥಗಳ ಜತೆಗೆ ಸೇರಿಸಿ ಒಂದು ನಿಮಿಷ ಹುರಿಯಿರಿ. ಮೂರು ಕಪ್‌ ನೀರು ಹಾಕಿ, ಉಪ್ಪನ್ನು ಸೇರಿಸಿ, ಎರಡು ವಿಷಲ್‌ ಆಗುವವರೆಗೆ ಕುಕ್ಕರ್‌ ಕೂಗಿಸಿ. ಆಲೂಗಡ್ಡೆ ಬದಲು ಪನ್ನೀರ್‌ ಕೂಡ ಹಾಕಬಹುದು.

ಬಟಾಣಿ ಪಲಾವ್‌
ಬೇಕಾಗುವ ಸಾಮಗ್ರಿಗಳು
ನೆನೆಸಿದ ಬಾಸುಮತಿ ಅಕ್ಕಿ- ಒಂದೂವರೆ ಕಪ್‌, ಬಟಾಣಿ- 1 ಕಪ್‌, ಕತ್ತರಿಸಿದ ಈರುಳ್ಳಿ- 2, ಟೊಮೇಟೊ-2, ಪಲಾವ್‌ ಎಲೆ, ಗೋಡಂಬಿ, ಕಾಳುಮೆಣಸು-10, ಚಕ್ಕೆ, ಜೀರಿಗೆ -1, ಲವಂಗ- 4, ಗರಂಮಸಾಲೆ- ಅರ್ಧ ಚಮಚ, ಖಾರದ ಪುಡಿ- ಅರ್ಧ ಚಮಚ, ಅರಿಸಿನ ಪುಡಿ- ಅರ್ಧ ಚಮಚ, ಉಪ್ಪು, ತುಪ್ಪ- 4 ಚಮಚ, ಹಸಿಮೆಣಸು- 2, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ನೀರು -3 ಕಪ್‌.

Advertisement

ಮಾಡುವ ವಿಧಾನ
ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಜೀರಿಗೆ, ಪಲಾವ್‌ ಎಲೆ, ಚಕ್ಕೆ, ಕಾಳುಮೆಣಸು, ಲವಂಗ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಅನಂತರ ಈರುಳ್ಳಿ ಹಾಕಿ ಕೆಂಬಣ್ಣ ಬರುವವರೆಗೆ ಹುರಿದು, ಟೊಮೇಟೊ ಸೇರಿಸಿ ಬಾಡಿಸಿ ಬ ಳಿಕ ಬಟಾಣಿ ಸೇರಿಸಿ. ಖಾರದ ಪುಡಿ, ಅರಿಸಿನ ಪುಡಿ, ಗರಂ ಮಸಾಲೆ ಜತೆಗೆ ಅಕ್ಕಿ ಹಾಕಿ ಅರ್ಧ ನಿಮಿಷ ಹುರಿಯಿರಿ. ಅದಕ್ಕೆ ನೀರು ಸೇರಿಸಿ. ಉಪ್ಪು ಹಾಕಿ, ಎರಡು ವಿಷಲ್‌ ಕೂಗಿಸಿದರೆ ಬಟಾಣಿ ಪಲಾವ್‌ ರೆಡಿ.

ವೆಜ್‌ ಪಲಾವ್‌
ಬೇಕಾಗುವ ಸಾಮಗ್ರಿಗಳು
ನೆನೆಸಿದ ಬಾಸುಮತಿ ಅಕ್ಕಿ- ಒಂದೂವರೆ ಕಪ್‌, ತುಪ್ಪ – 3 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಹಾಲು- 1 ಕಪ್‌, ನೀರು- 2 ಕಪ್‌, ಉಪ್ಪು, ಕಾಳುಮೆಣಸು- 10, ಗೋಡಂಬಿ, ಪಲಾವ್‌ ಎಲೆ, ಲವಂಗ, ಏಲಕ್ಕಿ, ಚಕ್ಕೆ, ಈರುಳ್ಳಿ- 2, ಹಸಿಮೆಣಸು- 3, ಕ್ಯಾರೆಟ್‌- 1, ಬೀನ್ಸ್ – 5, ಆಲೂಗಡ್ಡೆ- 2, ಬಟಾಣಿ- ಅರ್ಧ ಕಪ್‌, ಕ್ಯಾಪ್ಸಿಕಂ- 1 (ತರಕಾರಿಗಳನ್ನು ಒಂದೇ ರೀತಿಯಲ್ಲಿ ಹೆಚ್ಚಿಕೊಳ್ಳಿ).

ಮಾಡುವ ವಿಧಾನ
ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಪಲಾವ್‌ ಎಲೆ, ಲವಂಗ, ಏಲಕ್ಕಿ, ಕಾಳುಮೆಣಸು ಹಾಕಿ. ಗೋಡಂಬಿ ಸೇರಿಸಿ ಕೆಂಬಣ್ಣ ಬರುವರೆಗೆ ಹುರಿಯಿರಿ. ಈರುಳ್ಳಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್  ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ತರಕಾರಿಗಳನ್ನು ಸೇರಿಸಿ ಎರಡು ನಿಮಿಷ ಹುರಿದು, ಅಕ್ಕಿ ಹಾಕಿ, ಸ್ವಲ್ಪ ಹುರಿಯಿರಿ. ನಂತರ ಉಪ್ಪು, ನೀರು ಮತ್ತು ಹಾಲನ್ನು ಸೇರಿಸಿ ಕುಕರ್‌ ನಲ್ಲಿ ಮೂರು ವಿಶಿಲ್‌ ಕೂಗಿಸಿ.

Advertisement

Udayavani is now on Telegram. Click here to join our channel and stay updated with the latest news.

Next