ಬೆಳ್ತಂಗಡಿ: ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದವರಿಂದು ರಾಜಕೀಯ, ಸಾಮಾಜಿಕ ಸಹಿತ ದೇಶದ ಉನ್ನತ ಸ್ಥಾನಕ್ಕೇರಿದವರಿದ್ದಾರೆ. ಆದರೆ ಇಂದು ಕಲಿಕಾ ಪ್ರಯೋಗಗಳ ಮಾನದಂಡ ಬದಲಾದ ಪರಿಣಾಮ ಇಂದಿನ ಮಕ್ಕಳಿಗೆ ಪ್ರಕೃತಿದತ್ತ ಆಹಾರದ ಕಲ್ಪನೆ ಉಣಬಡಿಸುವ ಸಲುವಾಗಿ ಶಿಶಿಲ ಗ್ರಾಮದ ಹೇವಾಜೆ ಸ.ಕಿ.ಪ್ರಾ.ಶಾಲೆ ಶಿಕ್ಷಕರು ಹಾಗೂ ಪೋಷಕರು ತಮ್ಮ ಶಾಲಾ ಆಟದ ಮೈದಾನದಲ್ಲಿಯೇ ಮಕ್ಕಳಿಗೆ ಗದ್ದೆ ಬೇಸಾಯದ ಪಾಠ ಹೇಳಿಕೊಡಲು ಮುಂದಾಗಿದ್ದಾರೆ.
ಶಿಶಿಲ ಗ್ರಾಮದ ಹೇವಾಜೆ ಸ.ಕಿ.ಪ್ರಾಥಮಿಕ ಶಾಲೆಯ ಆಟದ ಮೈದಾನದ ಒಂದು ಬದಿ ಗದ್ದೆ ಮಾದರಿಯನ್ನು ನಿರ್ಮಿಸಿ ಬೇಲಿ ಹಾಕಿ ಮಣ್ಣನ್ನು ಹದ ಮಾಡಿ, ಗೊಬ್ಬರ ಹಾಕಿ ಅದರಲ್ಲಿ ನೇಜಿ ನಾಟಿ ಮಾಡಲಾಗಿದೆ.
1ನೇ ತರಗತಿಯಿಂದ 5ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 22 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಮುಖ್ಯ ಶಿಕ್ಷಕ ಸಹಿತ ಮೂವರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೆ ಈ ಶಾಲೆಯ ಸನಿಹದಲ್ಲಿರುವ ಶಿವಣ್ಣ ಗೌಡ ಹೇವಾಜೆ ಎನ್ನುವವರ ಗದ್ದೆಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಅಧ್ಯಾಪಕರು, ಮಕ್ಕಳು ತೆರಳಿ ಗದ್ದೆ ಬೇಸಾಯ ಕುರಿತ ಪ್ರಾತ್ಯಕ್ಷಿಕೆ ಮೂಲಕ ಗದ್ದೆ ಬೇಸಾಯದ ಅನುಭವ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಶಿವಣ್ಣ ಅವರು ಗದ್ದೆ ಬೇಸಾಯ ಮಾಡುತ್ತಿಲ್ಲ. ಅವರ ಸಂಪೂರ್ಣ ಮಾರ್ಗದರ್ಶನದೊಂದಿಗೆ ಮತ್ತು ಸಹಕಾರದೊಂದಿಗೆ ಶಾಲೆಯಲ್ಲಿಯೇ ಗದ್ದೆ ನಿರ್ಮಾಣವಾಗಿದೆ. ಕಳೆದ ಎರಡು ವರ್ಷದಲ್ಲಿಯೂ ಅಕ್ಕಿಯನ್ನು ಇದೇ ಗದ್ದೆಯಿಂದ ಪಡೆಯಲಾಗಿದೆ. ತೆನೆ ಹಬ್ಬ ಹಾಗೂ ಹೊಸ ಅಕ್ಕಿ ಊಟ ಮಾಡುವ ತುಳುನಾಡಿನ ಪದ್ಧತಿಯನ್ನು ಈ ಶಾಲೆಯಲ್ಲಿ ಆಚರಿಸುತ್ತಾ ಬರುತ್ತಿದ್ದು, ಹಿರಿಯರು ತಲೆತಲಾಂತರಗಳಿಂದ ಬೆಳೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಹುಟ್ಟಿಕೊಂಡ ಪರಿಕಲ್ಪನೆ
ಗ್ರಾಮೀಣ ಭಾಗದಲ್ಲಿರುವ ಮಕ್ಕಳಿಗೆ ಗದ್ದೆಯ ಪರಿಚಯ ನೈಜತೆಯಾಗಿಸುವ ಪೋಷಕರ ಸ್ಪಂದನೆಯೊಂದಿಗೆ ಶಿಕ್ಷಕರು ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ಸಂಪೂರ್ಣ ಸಾಂಪ್ರದಾಯಕವಾಗಿ ಅಲ್ಲದಿದ್ದರೂ ಆಧುನಿಕತೆಯ ಸ್ಪರ್ಶದೊಂದಿಗೆ ಸ್ಥಳೀಯ ಕೃಷಿಕ ಸುಬ್ಬಪ್ಪ ಎಂ.ಕೆ. ಅವರು ನೀಡಿದ ‘ಸುಮ’ ತಳಿಯ ಬಿತ್ತನೆ ಬೀಜದ ಮೂಲಕ ನೇಜಿಯನ್ನು ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಊರವರು, ಆಧ್ಯಾಪಕರು ಹಾಗೂ ಮಕ್ಕಳು ಸೇರಿ ನಾಟಿಮಾಡಿದ್ದಾರೆ. ಅಕ್ಕಿ ಹೇಗೆ ಮಾಡುತ್ತಾರೆ ಎನ್ನುವ ಕುತೂಹಲ ನಮ್ಮಲ್ಲಿತ್ತು. ನಮ್ಮ ಶಾಲೆಯಲ್ಲಿ ನಾವು ಭತ್ತ, ಅಕ್ಕಿ ಹೇಗೆ ಆಗುತ್ತದೆ ಅನ್ನೋದನ್ನು ತಿಳಿದುಕೊಳ್ಳುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಎಲ್ಲರ ಸಹಕಾರದಿಂದ ಸಾಧ್ಯವಾಯಿತು
ಮಕ್ಕಳಿಗೆ ಗದ್ದೆ ಬೇಸಾಯ ಪದ್ಧತಿ ತಿಳಿಸಬೇಕು ಎನ್ನುವುದು ಶಿಕ್ಷಕರ ಆಸಕ್ತಿಯಾಗಿತ್ತು. ಇದಕ್ಕೆ ಎಲ್ಲ ಪೋಷಕ ವೃಂದದ ಸಹಕಾರ, ಪ್ರೋತ್ಸಹ ದೊರೆಯಿತು. ಅವರೆಲ್ಲರ ಸಹಕಾರದಿಂದ ನಮ್ಮ ಶಾಲೆಯಲ್ಲಿ ಇಂದು ಗದ್ದೆ ನಿರ್ಮಾಣವಾಗಿದೆ.
–
ನಾಗರಾಜ್, ಮುಖ್ಯೋಪಾಧ್ಯಾಯರು, ಸ.ಕಿ.ಪ್ರಾ.ಶಾಲೆ ಹೇವಾಜೆ, ಶಿಶಿಲ.
ಸಾರ್ಥಕತೆ ತಂದಿದೆ
ನಮ್ಮೆಲ್ಲ ಪೋಷಕ ವೃಂದದವರಲ್ಲಿ, ಶಾಲೆಯ ಮಕ್ಕಳಿಗೆ ಬೇಸಾಯದ ಬಗ್ಗೆ ತಿಳಿಸಬೇಕು ಎಂದು ಶಿಕ್ಷಕರು ಹೇಳಿದಾಗ ನಾವು ಶಾಲೆಯಲ್ಲಿಯೇ ಪುಟ್ಟ ದೊಂದು ಗದ್ದೆ ನಿರ್ಮಿಸಿ ಇದೀಗ 3ನೇ ವರ್ಷ ನೇಜಿ ನಾಟಿ ಮಾಡುವಂತೆ ಮಾಡಿದೆ. ತೆನೆ ಬಂದಾಗ ಮಕ್ಕಳು ಗಮನಿಸಿದ ರೀತಿ ನಮ್ಮಲ್ಲಿ ಸಾರ್ಥಕತೆ ತಂದಿದೆ.
– ಗಣೇಶ್ ಪ್ರಸಾದ್, ಧರ್ಮದಕಳ, ಅಧ್ಯಕ್ಷರು, ಶಾ.ಅ.ಸ.ಹೇವಾಜಿ
ಶ್ರಮದಾನದ ಫಲ
ಬೇಸಾಯಕ್ಕೆ ಸಂಬಂಧಪಟ್ಟ ಎಲ್ಲ ಕೆಲಸವನ್ನು ಶ್ರಮದಾನದ ಮೂಲಕ ಮಾಡಲಾಗಿದೆ. ಮಕ್ಕಳು ಗದ್ದೆ ಬೇಸಾಯ ಕಾರ್ಯಕ್ಕೆ ಉತ್ಸಾಹದಿಂದ ಸ್ಪಂದಿಸಿದ್ದು ಇದೀಗ ಪ್ರತಿದಿನ ಬೆಳವಣಿಗೆ ಹಂತಗಳನ್ನು ನೋಡುತ್ತಾ, ತಾವು ನಿರ್ಮಿಸಿದ ಗದ್ದೆಯನ್ನು ಕಾಪಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಗದ್ದೆ ಬೇಸಾಯವನ್ನು ಸಾಕಾರಗೊಳಿಸುವಲ್ಲಿ ಮುಖ್ಯ ಶಿಕ್ಷಕ ನಾಗರಾಜ್ ಹಾಗೂ ಅಧ್ಯಾಪಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಪೋಷಕರು, ಊರವರು ಸೇವೆ ಸಲ್ಲಿಸಿದ್ದಾರೆ.