Advertisement

ಕರಾವಳಿಯ ಹೈನುಗಾರರ ಕೈ ಹಿಡಿದ ನರೇಗಾ ಹಟ್ಟಿ : 8,627ಕ್ಕೂ ಅಧಿಕ ಹಟ್ಟಿಗಳ ನಿರ್ಮಾಣ

09:14 AM Sep 05, 2022 | Team Udayavani |

ಮಂಗಳೂರು: ಜಾನುವಾರು ಹಟ್ಟಿ ನಿರ್ಮಾಣದ ಮೂಲಕ “ನರೇಗಾ’ (ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಹೈನುಗಾರರ ಕೈ ಹಿಡಿದಿದೆ. ಹಟ್ಟಿ ನಿರ್ಮಾಣಕ್ಕೆ ಕರಾವಳಿ ಭಾಗದಲ್ಲಿಯೂ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ನರೇಗಾದಡಿ ಹಟ್ಟಿ ನಿರ್ಮಾಣಕ್ಕೆ ನೀಡುವ ಅಂದಾಜು ಮೊತ್ತವನ್ನು ಹೆಚ್ಚಿಸಲಾಗಿದೆ.

Advertisement

ಇದುವರೆಗೆ ಹಟ್ಟಿ ನಿರ್ಮಾಣಕ್ಕೆ 43,000 ರೂ. ನಿಗದಿಪಡಿಸಲಾಗಿತ್ತು. ಇದರಲ್ಲಿ ಸುಮಾರು 8,000 ರೂ. ಕೂಲಿಗೆ ಹಾಗೂ ಸುಮಾರು 35,000 ರೂ. ಸಾಮಗ್ರಿಗೆ ನಿಗದಿಪಡಿಸಲಾಗಿತ್ತು. ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಕೂಲಿ ಮತ್ತು ಸಾಮಗ್ರಿ ವೆಚ್ಚದ ಅನುಪಾತ ಸಮತೋಲನದ ನಿಬಂಧನೆ ಇರಲಿಲ್ಲ. ಹಾಗಾಗಿ ಅವರಿಗೆ ಪೂರ್ಣ ಮೊತ್ತ ದೊರೆಯುತ್ತಿತ್ತು. ಆದರೆ ಇತರ ವರ್ಗದವರಿಗೆ ಕೂಲಿ ಮತ್ತು ಸಾಮಗ್ರಿ ಮೊತ್ತವನ್ನು 60ಃ40 ಅನುಪಾತ ನಿರ್ವಹಿಸಬೇಕಿತ್ತು. ಇದರಿಂದಾಗಿ ಆ ವರ್ಗಗಳಿಗೆ ಪೂರ್ಣ ಮೊತ್ತ ದೊರೆಯುತ್ತಿರಲಿಲ್ಲ. ಈ ತೊಡಕನ್ನು ನಿವಾರಿಸಬೇಕೆಂಬ ಬೇಡಿಕೆ ಈಗ ಈಡೇರಿದೆ. ಮಾತ್ರವಲ್ಲದೆ ಒಟ್ಟು ಮಾದರಿ ಅಂದಾಜು ಮೊತ್ತವನ್ನು 43,000 ದಿಂದ 57,000 ರೂ.ಗಳಿಗೆ ಹೆಚ್ಚಿಸಲಾಗಿದೆ.

ಬೇಡಿಕೆ ಹೆಚ್ಚಳ ನಿರೀಕ್ಷೆ
ಮಾದರಿ ಅಂದಾಜು ಮೊತ್ತದಲ್ಲಿ ಸುಮಾರು 14,000 ರೂ. ಹೆಚ್ಚಳ ಮಾಡಿರುವುದರಿಂದ ಹಾಗೂ ಎಲ್ಲ ವರ್ಗಗಳಿಗೂ ಒಂದೇ ರೀತಿಯ ಮಾರ್ಗಸೂಚಿ ನಿಗದಿಪಡಿಸಿರುವುದರಿಂದ ಇನ್ನಷ್ಟು ಹೈನುಗಾರರಿಂದ ಬೇಡಿಕೆ ವ್ಯಕ್ತವಾಗುವ ನಿರೀಕ್ಷೆ ಇದೆ. ಜತೆಗೆ ನರೇಗಾ ಕೂಲಿಯನ್ನು 289 ರೂ.ಗಳಿಂದ 309 ರೂ.ಗಳಿಗೆ ಹೆಚ್ಚಿಸಿರುವುದರಿಂದಲೂ ಬೇಡಿಕೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನರೇಗಾ ಯೋಜನೆಯಡಿ ಕೃಷಿಕರು, ಹೈನುಗಾರರಿಗೆ ಹಲವು ರೀತಿಯಲ್ಲಿ ಪ್ರಯೋಜನವಾಗುತ್ತಿದೆ. ದ.ಕ ಜಿಲ್ಲೆಯಲ್ಲಿ ಹಟ್ಟಿ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಸಲ್ಲಿಸುವ ಎಲ್ಲ ಅರ್ಹರಿಗೂ ಯೋಜನೆಯ ಪ್ರಯೋಜನ ಸಿಗುವಂತೆ ಮಾಡಲಾಗುವುದು.
– ಡಾ| ಕುಮಾರ್‌, ಸಿಇಒ, ದ.ಕ. ಜಿ.ಪಂ

ವೈಯಕ್ತಿಕ ಕಾಮಗಾರಿ ಹೆಚ್ಚು
ಉಡುಪಿ ಜಿಲ್ಲೆಯಲ್ಲಿ ನರೇಗಾದಡಿ ಸಾಮುದಾಯಿಕ ಕಾಮಗಾರಿ ಗಳಿಗಿಂತಲೂ ವೈಯಕ್ತಿಕ ಕಾಮಗಾರಿ ಗಳಿಗೆ ಬೇಡಿಕೆ ಹೆಚ್ಚು. ದನದ ಕೊಟ್ಟಿಗೆ ನಿರ್ಮಾಣ ಕೂಡ ವೈಯಕ್ತಿಕ ಕಾಮಗಾರಿಯಲ್ಲಿ ಸೇರಿದೆ. ಗ್ರಾ.ಪಂ.ಗಳಿಗೆ ಬೇರೆ ಅನುದಾನಗಳಿಗೆ ಮಿತಿ ಇದೆ. ಆದರೆ ನರೇಗಾದಲ್ಲಿ ಅಂತಹ ಮಿತಿ ಇಲ್ಲ. ಜಿಲ್ಲೆಯಲ್ಲಿ ಗೋ ಸಾಕಣೆ ಮಾಡುವವರು ಹೆಚ್ಚಿರುವುದರಿಂದ ದನದ ಕೊಟ್ಟಿಗೆ ನಿರ್ಮಾಣಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
– ಎಚ್‌. ಪ್ರಸನ್ನ, ಸಿಇಒ, ಉಡುಪಿ ಜಿ.ಪಂ.

Advertisement

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next