Advertisement
ಹೌದು, ಪೂರ್ವಮುಂಗಾರಿನಲ್ಲಿ ಉತ್ತಮ ಮಳೆಬಿದ್ದ ಪರಿಣಾಮ ತಾಲೂಕಿನಾದ್ಯಂತ ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆಕಾರ್ಯ ಮಾಡಿದ್ದರು. ಎಲ್ಲೆಡೆ ಹಸಿರು ಕಂಗೊಳಿಸುತ್ತಿತ್ತು. ಆದರೀಗ ಮಳೆಯ ಕೊರತೆಯಿಂದ ಬೆಳೆಗಳು ಬಾಡುತ್ತಿರುವುದು ರೈತರಲ್ಲಿ ಆತಂಕವುಂಟು ಮಾಡಿದೆ. ಸಾವಿರಾರು ರೂ.ಗಳನ್ನು ಕೊಟ್ಟು ಖರೀದಿಸಿ ತಂದ ಬಿತ್ತನೆ ಬೀಜಗಳನ್ನು ಭೂಮಿಗೆ ಹಾಕಿ ಆಕಾಶ ನೋಡುತ್ತಿರುವ ರೈತರ ಸಂಕಟ ಹೇಳತೀರದಾಗಿದೆ.
Related Articles
Advertisement
ತಾಲೂಕಿನಾದ್ಯಂತ ಮಳೆ ಬಿದ್ದು 15 ದಿನಗಳ ಮೇಲಾಗಿದ್ದು ಮೋಡ ಮುಸುಕಿದ ವಾತಾವರಣ ಗಾಳಿಗೆ ಭೂಮಿಯಲ್ಲಿನ ತೇವಾಂಶ ಆರಿ ಹೋಗುತ್ತಿದೆ. ಬಿಸಿಲು ಹೆಚ್ಚಾಗಿರುವ ಹಿನ್ನೆಲೆ ಎಲ್ಲಾ ಬೆಳೆಗಳೂ ಒಣಗುತ್ತಿದ್ದು ಇನ್ನೂ ಮೂರು ನಾಲ್ಕು ದಿನಗಳ ಕಾಲ ಮಳೆ ಬೀಳದಿದ್ದರೆ ಎಲ್ಲಾ ಬೆಳೆಗಳೂ ನಾಶವಾಗುವ ಭೀತಿ ಎದುರಾಗಿದೆ.
32 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ: ಗುಂಡ್ಲುಪೇಟೆ ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಕಾರ್ಯ ಮಾಡಲಾಗಿದೆ. ಬೇಗೂರಿನಲ್ಲಿ ಸಾಮಾನ್ಯವಾಗಿ 7.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡುತ್ತಿದ್ದರೂ, ಈ ಬಾರಿ ಮಳೆಯ ಕೊರತೆಯಿಂದ ಕೇವಲ 2.5 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬಿತ್ತನೆ ಕಾರ್ಯ ಸೀಮಿತವಾಗಿದೆ.
10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ, 13 ಸಾವಿರದ 738 ಹೆಕ್ಟೇರ್ ಸೂರ್ಯಕಾಂತಿ, 6 ಸಾವಿರ ಹೆಕ್ಟೇರ್ ನೆಲಗಡಲೆ ಇನ್ನುಳಿದ ಪ್ರದೇಶಗಳಲ್ಲಿ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲಾಗಿದೆ.
ಮಳೆ ಪ್ರಮಾಣ ಇಳಿಮುಖ: ಮೇ ಅಂತ್ಯದವರೆಗೆ ಹಂಗಳ ಹೋಬಳಿಯಲ್ಲಿ ವಾಡಿಕೆ 245 ಮಿಮಿ ಮಳೆ ಬಿದ್ದರೆ, ಈ ಬಾರಿ 255 ಮಿಮಿ ಆಗಿದೆ. ಬೇಗೂರಿನಲ್ಲಿ 230ಕ್ಕೆ 178 ಮಿಮಿ ಮಾತ್ರ ಬಿದ್ದಿದೆ. ಜೂನ್ ತಿಂಗಳಿನಲ್ಲಿಯೂ ಹಂಗಳ 278ಕ್ಕೆ 275 ಮಿಮಿ ಆಗಿದ್ದರೆ ಬೇಗೂರಿನಲ್ಲಿ 264ಕ್ಕೆ 201 ಮಿಮಿ ಮಾತ್ರ ಬಿದ್ದಿದ್ದು ತೀವ್ರ ಕೊರತೆ ಎದುರಾಗಿದೆ. ಕಸಬಾ ಹಾಗೂ ತೆರಕಣಾಂಬಿ ಹೋಬಳಿಯಲ್ಲಿಯೂ ಮಳೆಯ ಪ್ರಮಾಣ ಇಳಿಮುಖವಾಗಿದೆ.
ಈ ವರ್ಷ ಪ್ರಾರಂಭದಲ್ಲಿ ಉತ್ತಮ ಮಳೆ ಬಿದ್ದರೂ ಬಿತ್ತನೆ ಕಾರ್ಯ ಮುಗಿದ ನಂತರ ಕೈಕೊಟ್ಟಿರುವುದು ತಾಲೂಕಿನ ರೈತರಲ್ಲಿ ಆತಂಕ ತಂದಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಲಿದೆ. ಕೃಷಿ ಕಾರ್ಮಿಕರು ಮತ್ತೆ ನೆರೆರಾಜ್ಯಗಳಿಗೆ ವಲಸೆ ತೆರಳಬೇಕಾಗುತ್ತದೆ. ಇನ್ನಾದರೂ ನದಿಮೂಲದಿಂದ ಕೆರೆಗಳಿಗೆ ನೀರು ತರುವ ಕೆಲಸವಾಗಬೇಕಿದೆ.-ಕರಬೂರು ಮಂಜುನಾಥ್, ರೈತ ಮುಖಂಡ ಇಲಾಖೆಯು ಮಳೆಯ ಕೊರತೆಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಇನ್ನೂ ಮೂರು ನಾಲ್ಕು ದಿನಗಳು ಮಳೆ ಬೀಳದಿದ್ದರೆ ರೈತರು ತೀವ್ರ ನಷ್ಟ ಎದುರಿಸಬೇಕಾಗುತ್ತದೆ. ರೈತರು ಬೆಳೆವಿಮೆ ಮಾಡಲು ಅವಕಾಶವಿದೆ. ಎಲ್ಲಾ ರೈತರೂ ತಮ್ಮ ಬೆಳೆಗಳಿಗೆ ವಿಮಾ ರಕ್ಷಣೆ ಪಡೆಯುವ ಮೂಲಕ ಆಗುವ ನಷ್ಟ ತಪ್ಪಿಸಬೇಕಿದೆ.
-ವೆಂಕಟೇಶ್, ಸಹಾಯಕ ಕೃಷಿ ನಿರ್ದೇಶಕ * ಸೋಮಶೇಖರ್